ADVERTISEMENT

ಆಟದ ಮೈದಾನವೇ ಇಲ್ಲದ ಸರ್ಕಾರಿ ಶಾಲೆಗಳು

ಮುಖ್ಯಮಂತ್ರಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ತವರು ಜಿಲ್ಲೆಯ ಸ್ಥಿತಿ

ಬಿ.ಜೆ.ಧನ್ಯಪ್ರಸಾದ್
Published 5 ಡಿಸೆಂಬರ್ 2016, 10:10 IST
Last Updated 5 ಡಿಸೆಂಬರ್ 2016, 10:10 IST
ಮೈಸೂರು ಕುಕ್ಕರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗೆ ಆಟದ ಮೈದಾನವೇ ಇಲ್ಲ
ಮೈಸೂರು ಕುಕ್ಕರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗೆ ಆಟದ ಮೈದಾನವೇ ಇಲ್ಲ   

ಮೈಸೂರು: ಜಿಲ್ಲೆಯಲ್ಲಿ ಅರ್ಧದಷ್ಟು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆಟದ ಮೈದಾನದ ಕೊರತೆ ಎದುರಿಸುತ್ತಿದ್ದು, ಇದರಿಂದಾಗಿ ಮಕ್ಕಳ ಕ್ರೀಡಾ ಆಸಕ್ತಿಯನ್ನು ಕುಂದಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾಥಮಿಕ– ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರ ತವರು ಜಿಲ್ಲೆಯಲ್ಲಿಯೇ ಈ ಸ್ಥಿತಿ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ಪ್ರತಿನಿಧಿಸುವ ತಿ.ನರಸೀಪುರ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಕೊರತೆ ಹೆಚ್ಚು ಇದೆ.

ಜಿಲ್ಲೆಯಲ್ಲಿ ಇರುವ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ 1912 ಪ್ರಾಥಮಿಕ ಶಾಲೆಗಳ ಪೈಕಿ 942 ಹಾಗೂ 232 ಪ್ರೌಢಶಾಲೆಗಳ ಪೈಕಿ 35 ಶಾಲೆಗಳಲ್ಲಿ ಆಟದ ಮೈದಾನಗಳು ಇಲ್ಲ.

ಈ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಒಟ್ಟು 1.99 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿ ದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ 16 ಮತ್ತು ಪ್ರೌಢಶಾಲೆಗಳಲ್ಲಿ 9 ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ.

‘ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಕ್ರೀಡೆಗಳ ಪಾತ್ರ ಮಹತ್ವ ದ್ದಾಗಿದೆ. ಮಕ್ಕಳ ಕ್ರೀಡಾ ಸಾಧನೆಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಉತ್ತೇಜನ ಅಗತ್ಯ. ಕ್ರೀಡಾ ಚಟುವಟಿಕೆ ಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವ, ನಾಯಕತ್ವ ಗುಣ ಮತ್ತು ಧನಾತ್ಮಕ ಚಿಂತನೆ ಬೆಳೆಸಲಿದೆ. ಕ್ರೀಡಾ ಮೈದಾನ ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದ ಶಾಲೆ ಅಪೂರ್ಣ’ ಎಂದು ಕೇಂದ್ರೀಯ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಹೇಳುತ್ತಾರೆ.

‘ಕುಕ್ಕರಳ್ಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಒಂದೇ ಕಟ್ಟಡದಲ್ಲಿ ಇವೆ. ಈ ಶಾಲೆಗೆ ಮೈದಾನವಿಲ್ಲ. ಕ್ರೀಡಾಕೂಟ ಇದ್ದಾಗ ಮಕ್ಕಳನ್ನು ಪೊಲೀಸ್‌ ಮೈದಾನಕ್ಕೆ ಕರೆದೊಯ್ದು ತರಬೇತಿ ನೀಡುತ್ತೇವೆ. ಕಟ್ಟಡದ ತಾರಸಿಯಲ್ಲಿ ಲೇಜಿಮ್‌ ಮಾಡಿಸುತ್ತೇವೆ. ಮೈದಾನ ಇಲ್ಲದ ಕಾರಣ ಮಕ್ಕಳನ್ನು ಆಟಗಳಲ್ಲಿ ತೊಡಗಿಸಲು ಕಷ್ಟವಾಗಿದೆ’ ಎನ್ನುತ್ತಾರೆ ಶಿಕ್ಷಕರು.

ಬಹಳಷ್ಟು ಶಾಲೆಗಳಲ್ಲಿ ಕ್ರೀಡಾ ಪರಿಕರಗಳ ಕೊರತೆಯೂ ಇದೆ. ‘ಡಂಬಲ್ಸ್‌’, ‘ಲೇಜಿಮ್‌’ ಮೊದಲಾದ ಕನಿಷ್ಠ ಸಾಮಗ್ರಿಗಳೂ ಕೆಲ ಶಾಲೆಗಳಲ್ಲಿ ಇಲ್ಲ. ಕ್ರೀಡಾ ಸಾಮಗ್ರಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಮತ್ತು ಮೈದಾ ನದ ಸಮಸ್ಯೆಯಿಂದಾಗಿ ಬಹಳಷ್ಟು ಶಾಲೆಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಲಾಗದ ಸ್ಥಿತಿ ಇದೆ.

‘ಆಟೋಟಕ್ಕೆ ದಿನದಲ್ಲಿ ಒಂದು ಪಿರಿಯಡ್‌ ನಿಗದಿ ಆಗಿದೆ. ಕೊಕ್ಕೊ, ವಾಲಿಬಾಲ್‌, ಕಬಡ್ಡಿ, ಓಟ, ಲಾಂಗ್‌ಜಂಪ್‌ ಸೇರಿ ವಿವಿಧ ಕ್ರೀಡೆಗಳಿಗೆ ತರಬೇತಿ ನೀಡಲಾಗುತ್ತದೆ. ಮಕ್ಕಳಲ್ಲಿ ಕ್ರೀಡಾಸಕ್ತಿ ಮೂಡುವುದು ಮೈದಾನ­ದಲ್ಲೇ. ಹೀಗಾಗಿ, ವಿದ್ಯಾರ್ಥಿಗಳು ಕ್ರೀಡೆ ಯಲ್ಲಿ ಹಿಂದೆ­ಬೀಳಲೂ ಮೈದಾನ­ಗಳ ಕೊರತೆ ಕಾರಣ’ ಎಂದು ಕುರುಬೂರಿನ ಕೊಕ್ಕೊ ಕೋಚ್‌ ಮಂಜುನಾಥ್‌ ಹೇಳುತ್ತಾರೆ.

‘ಕ್ರೀಡಾಕೂಟಗಳಲ್ಲಿ ಭಾಗವಹಿಸ­ಬೇಕು. ಗೆದ್ದು ಬಹುಮಾನ ಗಳಿಸಬೇಕು ಎಂಬ ಆಸೆ ಇದೆ. ಆದರೆ, ಆಟವಾಡಲು ನಮ್ಮ ಶಾಲೆಯಲ್ಲಿ  ಮೈದಾನವೇ ಇಲ್ಲ’ ಎಂದು ಕುಕ್ಕರಹಳ್ಳಿ ಶಾಲೆಯ ವಿದ್ಯಾರ್ಥಿ­ಯೊಬ್ಬರು ಬೇಸರ ತೋಡಿಕೊಂಡರು.

ಶಾಲೆಗೆ ಹೊಂದಿಕೊಂಡಂತೆ ಆಟದ ಮೈದಾನ ಕಡ್ಡಾಯವಾಗಿ ಇರಬೇಕು ಎಂಬ ಆದೇಶ 2007 ಅ.6ರಂದು ಹೊರಬಿದ್ದಿದೆ. ಈ ಆದೇಶವು 1987ರ ಜೂನ್‌ 1ರ ನಂತರ ಆರಂಭ ವಾಗಿರುವ ಶಾಲೆಗಳಿಗಷ್ಟೇ ಅನ್ವಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.