ADVERTISEMENT

ಇಂಥ ಸೌಭಾಗ್ಯ ಎಲ್ಲರಿಗೂ ಸಿಗಲ್ಲ

ದಸರಾ ಕ್ರೀಡಾಕೂಟ ಉದ್ಘಾಟಕಿ ಅಶ್ವಿನಿ ಪೊನ್ನಪ್ಪ ಮನದಾಳ

ಕೆ.ಓಂಕಾರ ಮೂರ್ತಿ
Published 26 ಸೆಪ್ಟೆಂಬರ್ 2016, 10:44 IST
Last Updated 26 ಸೆಪ್ಟೆಂಬರ್ 2016, 10:44 IST

ಮೈಸೂರು: ‘ಕ್ರೀಡಾ ಜೀವನ ಕಟ್ಟಿ ಕೊಳ್ಳಲು ಹೈದರಾಬಾದ್‌ನಲ್ಲಿ ನೆಲೆಸಿದ್ದ ಕಾರಣ ದಸರಾ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ನನಗೆ ಸಾಧ್ಯವಾಗಿರಲಿಲ್ಲ. ಆದರೆ, ಈಗ ದಸರಾ ಕ್ರೀಡಾಕೂಟ ಉದ್ಘಾಟಿಸುವ ಸೌಭಾಗ್ಯ ಒಲಿದಿದೆ. ಖಂಡಿತ ನಾನು ಅದೃಷ್ಟವಂತೆ. ಇಂಥ ಅವಕಾಶ ಎಲ್ಲಾ ಕ್ರೀಡಾಪಟುಗಳಿಗೆ ಸಿಗಲ್ಲ’

– ಹೀಗೆಂದು ‘ಪ್ರಜಾವಾಣಿ’ಗೆ ಪ್ರತಿಕ್ರಿ ಯಿಸಿದ್ದು ಒಲಿಂಪಿಯನ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಅಶ್ವಿನಿ ಪೊನ್ನಪ್ಪ. ಅವರು ಅಕ್ಟೋಬರ್‌ 1ರಂದು ಚಾಮುಂಡಿಬೆಟ್ಟ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ದಸರಾ ಕ್ರೀಡಾಜ್ಯೋತಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತೆ ದೀಪಾ ಮಲಿಕ್‌ ಜೊತೆಗೂಡಿ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ.

ಕೊಡಗು ಮೂಲದ, 27 ವರ್ಷ ವಯಸ್ಸಿನ ಅಶ್ವಿನಿ ಈಚೆಗೆ ರಿಯೊದಲ್ಲಿ ನಡೆದ ಒಲಿಂಪಿಕ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ ಡಬಲ್ಸ್‌ನಲ್ಲಿ ಹೈದರಾ ಬಾದ್‌ನ ಜ್ವಾಲಾ ಗುಟ್ಟಾ ಜೊತೆಗೂಡಿ ಆಡಿದ್ದರು. 2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದರು.

2011ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಡಬಲ್ಸ್‌ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. 2010ರ ನವದೆಹಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.

ದಸರಾ ಮಹೋತ್ಸವ, ಕ್ರೀಡಾ ಕೂಟ, ಮೈಸೂರು ನಗರ, ಚಾಮುಂಡಿ ಬೆಟ್ಟಕ್ಕೆ ಹಿಂದೆ ನೀಡಿದ ಭೇಟಿ ಬಗ್ಗೆ ಅಶ್ವಿನಿ ಪೊನ್ನಪ್ಪ ಅವರು ಪತ್ರಿಕೆಗೆ ನೀಡಿದ ಸಂದರ್ಶನ ಇಲ್ಲಿದೆ.

* ಕ್ರೀಡಾಕೂಟ ಉದ್ಘಾಟಿಸಲು ಲಭಿಸಿರುವ ಅವಕಾಶದ ಬಗ್ಗೆ ಹೇಳಿ?
ನನ್ನನ್ನು ಆಹ್ವಾನಿಸುತ್ತಿರುವ ವಿಷಯವನ್ನು ಅಧಿಕಾರಿಗಳು ಮೊದಲು ನನ್ನ ಅಮ್ಮನಿಗೆ ತಿಳಿಸಿದರು. ಇದು ನನಗೆ ಲಭಿಸಿದ ದೊಡ್ಡ ಗೌರವ. ನಾಡಹಬ್ಬದ ಉತ್ಸವದಲ್ಲಿ ಪಾಲ್ಗೊಳ್ಳಲು ಕುತೂಹಲ ದಿಂದ ಕಾಯುತ್ತಿದ್ದೇನೆ. ಉದ್ಘಾಟನೆಗೆ ಪೋಷಕರೊಂದಿಗೆ ಬರುತ್ತೇನೆ.

* ದಸರಾ ಕ್ರೀಡಾಕೂಟಕ್ಕೆ ಎಷ್ಟು ಮಹತ್ವವಿದೆ?
ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾಪಟುಗಳು ಮೊದಲು ತಮ್ಮನ್ನು ಗುರುತಿಸಿಕೊಂಡಿದ್ದೇ ದಸರಾ ಕ್ರೀಡಾಕೂಟದಲ್ಲಿ. ಹೀಗಾಗಿ, ಹೆಚ್ಚಿನ ಕ್ರೀಡಾಪಟುಗಳ ಪ್ರತಿಭೆ ಅನಾವರಣ ಗೊಂಡಿರುವುದೇ ಈ ಕೂಟದಲ್ಲಿ. ಗ್ರಾಮೀಣ ಪ್ರತಿಭೆಗಳ ಪಾಲಿಗೆ ಇದು ಸ್ಫೂರ್ತಿ ತುಂಬುತ್ತಿದೆ.

* ಹಿಂದೆ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದೀರಾ?
ಪೋಷಕರ ಜೊತೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದೇನೆ. ದಸರಾ ಉತ್ಸವಕ್ಕೆ ಯಾವತ್ತೂ ಬಂದಿಲ್ಲ. ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಟೂರ್ನಿಗಳು ಇರುವುದೇ ಅದಕ್ಕೆ ಮುಖ್ಯ ಕಾರಣ.

* ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಅನುಭವದ ಬಗ್ಗೆ ಹೇಳಿ?
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದೇ ದೊಡ್ಡ ಸಾಧನೆ. ಎರಡು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಖುಷಿ ಇದೆ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಅವಕಾಶ ತಪ್ಪಿಸಿಕೊಂಡ ನೋವು ಇನ್ನೂ ಕಾಡುತ್ತಿದೆ. ರಿಯೊ ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಡೆಂಗಿ ಸಮಸ್ಯೆಯಿಂದ ಬಳಲಿದ್ದೆ. ಹೀಗಾಗಿ, ಪೂರ್ಣ ಸಾಮರ್ಥ್ಯ ತೋರಿ ಆಡಲು ಸಾಧ್ಯವಾಗಲಿಲ್ಲ. 

* ಕ್ರೀಡಾಪಟುಗಳಿಗೆ ನೀವು ನೀಡುವ ಸಂದೇಶ?
ದಸರಾ ಕ್ರೀಡಾಕೂಟದಲ್ಲಿ ಖುಷಿ ಯಿಂದ ಪಾಲ್ಗೊಳ್ಳಿ. ಗೆಲ್ಲಲೇಬೇಕೆಂಬ ತೀರಾ ಒತ್ತಡ ಬೇಡ. ಬದ್ಧತೆ ಪ್ರದರ್ಶಿಸಿ. ಆಗ ಕ್ರೀಡಾಕೂಟವೂ ಯಶಸ್ಸು ಕಾಣುತ್ತೆ.

* ಇಷ್ಟು ದಿನಗಳ ಬ್ಯಾಡ್ಮಿಂಟನ್ ಜೀವನದಲ್ಲಿ ಖುಷಿ ನೀಡಿದ ಕ್ಷಣ ಯಾವುದು?
ವಿಶ್ವ ಚಾಂಪಿಯನ್‌ಷಿಷ್‌ನಲ್ಲಿ ಕಂಚಿನ ಪದಕ ಗೆದ್ದಿದ್ದು. ಅದೊಂದು ನನ್ನ ಬ್ಯಾಡ್ಮಿಂಟನ್ ಜೀವನಕ್ಕೆ ತಿರುವು ನೀಡಿದ ಕ್ಷಣ. ಇಂಥ ಸಾಧನೆ ಮಾಡಲು ನನಗೆ ಸಾಧ್ಯವಾಯಿತಲ್ಲ ಎಂಬುದೇ ದೊಡ್ಡ ಖುಷಿ. 

* ಹೈದರಾಬಾದ್‌ನಲ್ಲಿ ನೆಲೆಸಿರುವ ಉದ್ದೇಶ?
ತರಬೇತಿಗೆ ಅನುಕೂಲವಾಗಲಿ ಎಂಬ ಉದೇಶದಿಂದ ಹೈದರಾಬಾದ್‌ ನಲ್ಲಿ ನೆಲೆಸಿದ್ದೇನೆ ಅಷ್ಟೆ. ಅಲ್ಲಿ ಉತ್ತಮ ಕ್ರೀಡಾಸೌಕರ್ಯಗಳಿವೆ, ಹೆಚ್ಚು ಶಿಬಿರ ನಡೆಯುತ್ತಿರುತ್ತವೆ. ಅಲ್ಲಿ ನೆಲೆಸಿದ್ದರೂ ಈ ಹಿಂದೆ ಕರ್ನಾಟಕ ತಂಡದ ಪರ ಆಡಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಇದೆ. ಆದರೂ ಕರ್ನಾಟಕ ಪರ ಆಡಿಲ್ಲ ಎಂದು ಕೆಲವರು ಆರೋಪ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.