ADVERTISEMENT

ಎಸ್ಸೆಸ್ಸೆಲ್ಸಿ ವಿಶೇಷ ಮಾರ್ಗದರ್ಶನ

‘ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ’ ವಿದ್ಯಾರ್ಥಿಗಳಿಗೆ ಕಾರ್ಯಾಗಾರಕ್ಕೆ ಸಿದ್ಧತೆ

ಬಿ.ಜೆ.ಧನ್ಯಪ್ರಸಾದ್
Published 23 ಜನವರಿ 2017, 11:26 IST
Last Updated 23 ಜನವರಿ 2017, 11:26 IST
ಎಸ್ಸೆಸ್ಸೆಲ್ಸಿ ವಿಶೇಷ ಮಾರ್ಗದರ್ಶನ
ಎಸ್ಸೆಸ್ಸೆಲ್ಸಿ ವಿಶೇಷ ಮಾರ್ಗದರ್ಶನ   

ಮೈಸೂರು:  ಭಯ ಮತ್ತು ಒತ್ತಡ ಮುಕ್ತ ರಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿ ಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ‘ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ’ ವಿಶೇಷ ಕಾರ್ಯಾಗಾರ ಆಯೋಜನೆಗೆ ಸಿದ್ಧತೆ ನಡೆದಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಹಿಂದಿನ ವರ್ಷದ ಫಲಿತಾಂಶದಲ್ಲಿ ಕಡಿಮೆ ಪ್ರಗತಿ ಸಾಧಿಸಿದ ಶಾಲೆಗಳು, ಹಿಂದುಳಿದ ಮತ್ತು ಕೊಳೆಗೇರಿ ಪ್ರದೇಶ ಗಳ ಶಾಲೆಗಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು. ಕಲಿಕೆಯಲ್ಲಿ ಹಿಂದುಳಿ ದಿರುವ ಹಾಗೂ ಚುರುಕಾಗಿರುವ ಮಕ್ಕಳನ್ನು ಒಂದೆಡೆ ಸೇರಿಸಿ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸ ಲಾಗುವುದು.

ಮಾರ್ಚ್ 30ರಿಂದ ಏ.12ರವರೆಗೆ  ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿಗದಿಯಾಗಿದೆ. ಜನವರಿ ಮತ್ತು ಫೆಬ್ರುವರಿಯಲ್ಲಿ ಜಿಲ್ಲೆಯ ವಿವಿಧೆಡೆ ಕಾರ್ಯಾಗಾರ ಏರ್ಪಡಿಸಲು ಸಿದ್ಧತೆ ನಡೆದಿದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಪರಸ್ಪರ ಚರ್ಚಿಸಿ ಕಾರ್ಯಾಗಾರ ನಡೆಯುವ ಸ್ಥಳ, ಸಂಪನ್ಮೂಲ ವ್ಯಕ್ತಿಗಳನ್ನು ನಿಗದಿಗೊಳಿ ಸುವರು. ಸಂಪನ್ಮೂಲ ವ್ಯಕ್ತಿಗಳು (ಮನೋವೈದ್ಯರು, ಮನಃಶಾಸ್ತ್ರ ತಜ್ಞರು, ವಿಷಯ ಪರಿಣತರು) ಉಪನ್ಯಾಸ ನೀಡುವರು.

‘ಬಾಲ ವಿಕಾಸ ಅಕಾಡೆಮಿಯು ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ ಮಾಡಿದೆ. ಒಂದು ಕಾರ್ಯಾಗಾರಕ್ಕೆ ₹ 6 ಸಾವಿರ ನಿಗದಿಪಡಿಸಿದೆ. ಹೋಬಳಿ ಮಟ್ಟದಲ್ಲಿ ಕಾರ್ಯಾಗಾರಗಳನ್ನು ನಡೆಸಲು ಸಿದ್ಧತೆ ನಡೆದಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮಯದ ಮಹತ್ವ, ಜ್ಞಾಪಕ ಶಕ್ತಿ ವೃದ್ಧಿ, ಪರೀಕ್ಷೆಗೆ ತಯಾರಿ, ವಿಷಯ ಮನನ ಮತ್ತು ಪುನರ್‌ಮನನ ವಿಧಾನ, ಅಂಕಗಳಿಗೆ ಅನುಗುಣವಾಗಿ ಉತ್ತರಿಸುವ ಕೌಶಲ ಮೊದಲಾದ ಸಂಗತಿಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡುವರು. ಮುಖ್ಯವಾಗಿ ಗಣಿತ, ಇಂಗ್ಲಿಷ್‌ ಮತ್ತು ವಿಜ್ಞಾನ ವಿಷಯಗಳಿಗೆ ಒತ್ತು ನೀಡಲಾಗುವುದು. ಪರೀಕ್ಷೆ ದಿನ ಗಳಲ್ಲಿ ಆಹಾರ ಕ್ರಮ ಮತ್ತು ಆರೋಗ್ಯ ನಿರ್ವಹಣೆ ಕುರಿತು ಮಾಹಿತಿ ನೀಡಲಾ ಗುವುದು’ ಎಂದು ಕಾರ್ಯಾಗಾರದ ರೂಪರೇಷೆಯನ್ನು ವಿವರಿಸಿದರು.

ಒತ್ತಡಕ್ಕೆ ಒಳಗಾಗದಂತೆ ಅಭ್ಯಾಸ ಮಾಡುವ ಕ್ರಮ, ಪಾಠಗಳ ಮನನ, ನೆನಪಿನಲ್ಲಿಟ್ಟುವುದು, ಏಕಾಗ್ರತೆ ಮೈಗೂಡಿಸಿಕೊಳ್ಳುವುದರ ಕುರಿತು ಮಾರ್ಗದರ್ಶನ ನೀಡಲಾಗುವುದು. ಭಯ ತೊರೆದು ಪರೀಕ್ಷೆ ಎದುರಿಸುವ ಬಗೆಯನ್ನು ತಿಳಿಸಲಾಗುವುದು. ಚರ್ಚೆ ಮತ್ತು ಸಂವಾದಕ್ಕೆ ಅವಕಾಶ ಕಲ್ಪಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪರಿಣತರು ಉತ್ತರಿಸುವರು. ಉತ್ತರ ಪತ್ರಿಕೆ ಚೌಕಟ್ಟು ಮತ್ತು ಬರವಣಿಗೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಸಲಹೆ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.