ADVERTISEMENT

ಏಕಸಂಸ್ಕೃತಿ ಸ್ಥಾಪಿಸುವ ಹುನ್ನಾರ

ಕೇಂದ್ರ ಸರ್ಕಾರದ ನೋಟು ರದ್ದತಿ ನಿರ್ಧಾರದ ಬಗ್ಗೆ ನಿಡುಮಾಮಿಡಿ ಸ್ವಾಮೀಜಿ ವ್ಯಾಖ್ಯಾನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:45 IST
Last Updated 9 ಜನವರಿ 2017, 8:45 IST

ಮೈಸೂರು: ನೋಟು ನಿಷೇಧದ ಮೂಲಕ ದೇಶದಲ್ಲಿ ಏಕಸಂಸ್ಕೃತಿಯನ್ನು ಜಾರಿಗೊಳಿಸುವ ಹುನ್ನಾರವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ ಎಂದು ನಿಡುಮಾಮಿಡಿ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವ್ಯಾಖ್ಯಾನಿಸಿದರು.

ಅಖಿಲ ಭಾರತ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ) ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 10ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕಪ್ಪುಹಣ, ಭ್ರಷ್ಟಾಚಾರ ನಿಯಂತ್ರಿಸು ವುದು ಹಾಗೂ ಭಯೋತ್ಪಾದನೆಗೆ ಖೋಟಾ ನೋಟು ತಪ್ಪಿಸುವುದು ನೋಟು ನಿಷೇಧದ ಹಿಂದಿನ ಪ್ರಮುಖ ಉದ್ದೇಶ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಈ ಮೂರೂ ವಿಚಾರಗಳಲ್ಲಿ ಅವರು ಸಫಲರಾಗಿಲ್ಲ. ದಿನಕಳೆದಂತೆ ಮೂಲ ಉದ್ದೇಶಗಳು ಕಣ್ಮರೆಯಾಗಿ ನಿಜಬಣ್ಣ ಬಯಲಾಗುತ್ತಿದೆ ಎಂದರು.

ಇಡೀ ದೇಶವನ್ನು ತಮ್ಮ ಮುಷ್ಟಿಯಲ್ಲಿ ಹಿಡಿದುಕೊಳ್ಳುವುದು ಅವರ ಉದ್ದೇಶ. ಚಲಾವಣೆಯಲ್ಲಿದ್ದ ನೋಟುಗಳನ್ನು ರದ್ದು ಮಾಡಿ, ಬಿಜೆಪಿಯೇತರ ಪಕ್ಷಗಳನ್ನು ದಿವಾಳಿ ಮಾಡುವುದು. ಆ ಮೂಲಕ ಬಿಜೆಪಿ ಮಾತ್ರವೇ ಗಟ್ಟಿಯಾಗಿ ಸುವುದು ಹುನ್ನಾರವಾಗಿತ್ತು ಎಂದು ಟೀಕಿಸಿದರು.

ಕಪ್ಪು ಹಣ ಬಡವರ ಬಳಿ ಇರಲಿಲ್ಲ. ಆದರೆ, ತೊಂದರೆಯಾಗಿದ್ದು ಬಡವರಿಗೆ. ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಿ, ಅವರು ಸದಾ ಕಷ್ಟದಲ್ಲಿ ಇರಿಸಿದರೆ ಬಿಜೆಪಿಗೆ ಲಾಭವಿದೆ. ಆ ಮೂಲಕ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ, ಬಿಜೆಪಿಗೆ ಜನರನ್ನು ದಾಸರನ್ನಾಗಿ ಮಾಡಿಕೊಳ್ಳುವ ಪಿತೂರಿ ಮಾಡಲಾ ಗಿದೆ. ಒಟ್ಟಿನಲ್ಲಿ ದೇಶದಲ್ಲಿ
ಬಿಜೆಪಿ ನೇತೃತ್ವದ ಏಕಸಂಸ್ಕೃತಿ ಜಾರಿಗೊಳಿಸುವುದು ಉದ್ದೇಶ ಎಂದು ಹೇಳಿದರು.

ಬಡವರ ಹಣವನ್ನು ಬ್ಯಾಂಕಿಗೆ ಜಮಾ ಮಾಡಿಸಿ, ಆ ಹಣವನ್ನು ಕಾರ್ಪೊರೇಟ್‌ ಕಂಪೆನಿಗಳ ಸಾಲ ಮನ್ನಾ ಮಾಡಲು ಬಳಸಿಕೊಳ್ಳುವ ಹುನ್ನಾರವೂ ಇದೆ. ಈವರೆಗೂ ಮೋದಿ ಸರ್ಕಾರವು 1.14 ಲಕ್ಷ ಕೋಟಿ ಹಣವನ್ನು 100 ಕಂಪೆನಿಗಳ ಸಾಲ ಮನ್ನಾ ಮಾಡಲು ಬಳಸಿಕೊಂಡಿದೆ. ಆದರೆ, ಈವರೆಗೂ ರೈತರ ಸಾಲ ಮನ್ನಾ ಮಾಡುವ ನಿರ್ಧಾರವನ್ನೇ ತೆಗೆದುಕೊಂಡಿಲ್ಲ ಎಂದು ಟೀಕಿಸಿದರು.

ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್‌, ಎಐಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಎಚ್‌.ವಿ.ಅನಂತ ಸುಬ್ಬರಾವ್‌ ಅತಿಥಿಯಾಗಿದ್ದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌.ಶೇಷಾದ್ರಿ, ಅಧ್ಯಕ್ಷ ರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.