ADVERTISEMENT

ಒಣತ್ಯಾಜ್ಯ ಪಡೆಯಲು ಐಟಿಸಿ ನಿರ್ಧಾರ

ಪಾಲಿಕೆ ಜತೆ ಒಪ್ಪಂದ: ಮೂಲದಲ್ಲೇ ಕಸ ವಿಂಗಡಣೆಗೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 12:29 IST
Last Updated 22 ಮಾರ್ಚ್ 2018, 12:29 IST

ಮೈಸೂರು: ನಗರದಲ್ಲಿ ಮನೆ- ಮನೆಗಳಿಂದ ಸಂಗ್ರಹಿಸುವ, ಪುನರ್ ಬಳಕೆ ಮಾಡಬಹುದಾದ ಒಣ ತ್ಯಾಜ್ಯವನ್ನು ಪಡೆಯಲು ಐಟಿಸಿ ಕಂಪನಿ ಮುಂದೆ ಬಂದಿದೆ. ಈ ಸಂಬಂಧ ಬುಧವಾರ ಮೈಸೂರು ಮಹಾನಗರ ಪಾಲಿಕೆ ಜತೆ ಒಪ್ಪಂದ ಮಾಡಿಕೊಂಡಿದೆ.

ಮೂಲದಲ್ಲೇ ಕಸ ವಿಂಗಡಣೆ ಮಾಡುವ ಬಗ್ಗೆ ಪೌರಕಾರ್ಮಿಕರು ಹಾಗೂ ನಗರದ ನಿವಾಸಿಗಳನ್ನು ಪ್ರೋತ್ಸಾಹಿಸಲು ಸಿಎಸ್‌ಆರ್‌ ಯೋಜನೆಯಡಿ ಐಟಿಸಿ ಕಂಪನಿಯೊಂದಿಗೆ ಈ ಒಪ್ಪಂದ ನಡೆದಿದೆ.

ಈ ಒಪ್ಪಂದದ ಅನ್ವಯ ಐಟಿಸಿ ಕಂಪನಿಯು ಸ್ವಯಂ ಸೇವಕರನ್ನು ನೇಮಿಸಲಿದ್ದು, ಅವರು ಪಾಲಿಕೆ ವ್ಯಾಪ್ತಿಯ ಪ್ರತಿ ಮನೆಗಳಿಗೆ ಭೇಟಿ ನೀಡಿ, ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಮಾಡುವ ಬಗ್ಗೆ ಅರಿವು ಮೂಡಿಸಲಿದ್ದಾರೆ.

ADVERTISEMENT

ಮನೆಮನೆಗಳಿಂದ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಿಸುವ ಪೌರಕಾರ್ಮಿಕರು ತಾಜ್ಯವನ್ನು ಮೂಲದಲ್ಲೇ ವಿಂಗಡಿಸಿ, ಪಾಲಿಕೆಯ 47 ತ್ಯಾಜ್ಯ ವಿಲೇವಾರಿ ಘಟಕಗಳಿಗೆ ನೀಡಿದರೆ ಐಟಿಸಿ ಕಂಪನಿ ಪ್ರೋತ್ಸಾಹ ಧನ ನೀಡಲಿದೆ.

ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸುವುದು ದೊಡ್ಡ ಸಮಸ್ಯೆಯಾಗಿದೆ. ಒಣತ್ಯಾಜ್ಯ ನೀಡಿದರೆ ಹಣ ದೊರೆಯುವುದರಿಂದ ಪೌರಕಾರ್ಮಿಕರು ಉತ್ಸಾಹದಿಂದ ಕಸ ವಿಂಗಡಣೆ ಕೆಲಸ ಮಾಡಲಿದ್ದಾರೆ. ಸ್ವಚ್ಛತಾ ಕೆಲಸ ಮಾಡುವ ಪೌರಕಾರ್ಮಿಕರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಎಂದು ಈ ಯೋಜನೆಯ ಕರ್ನಾಟಕ ವಿಭಾಗದ ಮುಖ್ಯಸ್ಥ ಅಫ್ಸಾರ್‌ ಅಹ್ಮದ್‌ ತಿಳಿಸಿದರು.

ಕಂಪನಿ ವತಿಯಿಂದ ಪ್ರತಿ ಮನೆಗಳಿಗೆ ಒಣತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ಚೀಲಗಳನ್ನು ನೀಡಲಾಗುತ್ತದೆ. ಪೌರಕಾರ್ಮಿಕರು ಮಾತ್ರವಲ್ಲದೆ, ಸಾರ್ವಜನಿಕರು ಸಹ ಒಣ ಕಸವನ್ನು ಐಟಿಸಿ ಕಂಪನಿಗೆ ಪೂರೈಸಬಹುದಾಗಿದ್ದು, ಅವರಿಗೂ ಸಹ ಹಣ ನೀಡಲಾಗುವುದು ಎಂದು ಹೇಳಿದರು.

ಹಂತಹಂತವಾಗಿ ಜಾರಿ: ಆರಂಭದಲ್ಲಿ ಪಾಲಿಕೆಯ ಒಂದು ವಲಯದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಹಂತ ಹಂತವಾಗಿ ಇತರ ವಲಯಗಳಿಗೆ ವಿಸ್ತರಿಸಲಾಗುತ್ತದೆ. ಆರರಿಂದ ಎಂಟು ತಿಂಗಳ ಅವಧಿಯಲ್ಲಿ ಎಲ್ಲ 65 ವಾರ್ಡ್‌ಗಳಲ್ಲಿ ಐಟಿಸಿ ಒಣತ್ಯಾಜ್ಯ ಸಂಗ್ರಹಿಸಲಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಹೇಳಿದರು.

ನಗರದಲ್ಲಿ ನಿತ್ಯ 400 ರಿಂದ 450 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು. ಇದರಲ್ಲಿ ಶೇ 40 ರಷ್ಟು ಒಣತ್ಯಾಜ್ಯ ಸಂಗ್ರಹವಾಗುತ್ತದೆ ಎಂದರು.
**
ತಿಂಗಳಿಗೆ ₹ 3–4 ಸಾವಿರ ಗಳಿಕೆ

ಪೌರಕಾರ್ಮಿಕರು ನೀಡುವ ಒಣತ್ಯಾಜ್ಯದ ಪ್ರಮಾಣ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ದರ ನಿಗಡಿಪಡಿಸಲಾಗುತ್ತದೆ. ಒಬ್ಬರಿಗೆ ತಿಂಗಳಿಗೆ ₹ 3 ಸಾವಿರದಿಂದ ₹ 4 ಸಾವಿರ ಗಳಿಸಬಹುದು. ಬೆಂಗಳೂರಿನಲ್ಲಿ ಕೆಲವು ಪೌರಕಾರ್ಮಿಕರು ತಿಂಗಳಿಗೆ ₹ 7 ರಿಂದ 8 ಸಾವಿರ ಗಳಿಸಿದ ಉದಾಹರಣೆಯಿದೆ ಎಂದು ಅಫ್ಸಾರ್‌ ಅಹ್ಮದ್‌ ಹೇಳಿದರು.
**
ಐಟಿಸಿ ಜತೆಗಿನ ಸಹಭಾಗಿತ್ವದಿಂದ ಪಾಲಿಕೆಗೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ. ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಲು ಸಹಕಾರಿಯಾಗಲಿದೆ

–ಜಿ.ಜಗದೀಶ್‌, ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.