ADVERTISEMENT

ಕುಮಾರಸ್ವಾಮಿ ರೋಡ್‌ ಶೋ, ಪಾದಯಾತ್ರೆ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಪರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 12:17 IST
Last Updated 23 ಏಪ್ರಿಲ್ 2018, 12:17 IST

ಮೈಸೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಪ್ರಚಾರ ನಡೆಸಿದರು. ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಪರ ಮತಯಾಚಿಸಿದರು.

ಕುಮಾರಸ್ವಾಮಿ ಅವರು ಮೊದಲ ಹಂತದಲ್ಲಿ ಕ್ಷೇತ್ರದಲ್ಲಿ ಸತತ ಮೂರು ದಿನ ಪ್ರಚಾರ ಕೈಗೊಂಡಿದ್ದರು. ಸುಮಾರು 100 ಗ್ರಾಮಗಳಲ್ಲಿ ರೋಡ್‌ ಶೋ, ಪಾದಯಾತ್ರೆ ನಡೆಸಿದ್ದರು. ಭಾನುವಾರ ಸುಮಾರು 20 ಗ್ರಾಮಗಳಿಗೆ ಭೇಟಿ ನೀಡಿದರು.

ಜಯದೇವನಗರದಿಂದ ಪ್ರಚಾರ ಆರಂಭಿಸಿದ ಅವರು ಬೆಲವತ್ತ, ಸಿದ್ದಲಿಂಗಪುರ, ಕಳಸ್ತವಾಡಿ, ಲಕ್ಷ್ಮಿಪುರ, ಶ್ಯಾದನಹಳ್ಳಿ, ನಾಗನಹಳ್ಳಿ, ಲಿಂಗದೇವರಕೊಪ್ಪಲು ಗ್ರಾಮಗಳಲ್ಲಿ ಪ್ರಚಾರ ಕೈಗೊಂಡರು.

ADVERTISEMENT

ಜಯದೇವನಗರದಲ್ಲಿ ಕುಮಾರ ಸ್ವಾಮಿ ಅವರನ್ನು ಗ್ರಾಮಸ್ಥರು ತಮಟೆ ವಾದ್ಯಗಳೊಂದಿಗೆ ಸ್ವಾಗತಿಸಿದರು. ಪ್ರಚಾರ ವಾಹನಕ್ಕೆ ಹೂಮಳೆಗರೆದರು. ಬೆಲವತ್ತ ಗ್ರಾಮದಲ್ಲಿ ಮಹಿಳೆಯರು ಕಳಶ ಹೊತ್ತು ಸ್ವಾಗತ ಕೋರಿದರು.

ನಾಗನಗಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಳವಳ್ಳಿಯ ಬಳಿ ರೈತ ದಂಪತಿ ನೇಣಿಗೆ ಶರಣಾದ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದೆ. ಆ ಸುದ್ದಿ ಓದಿ ಬೇಸರವಾಯಿತು. ಈ ಬಾರಿ ಜೆಡಿಎಸ್‌ಗೆ ಒಂದು ಅವಕಾಶ ಕೊಡಿ. ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸಿ.ಎಂ ಸ್ಪರ್ಧೆ– ನನ್ನ ತಕರಾರು ಇಲ್ಲ: ಸಿದ್ದರಾಮಯ್ಯ ಅವರು ಎರಡು ಕಡೆ ಸ್ಪರ್ಧಿಸುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ‘ಅವರು ಬಾದಾಮಿಯಲ್ಲಾದರೂ ಸ್ಪರ್ಧಿಸಲಿ ಇಲ್ಲವಾದರೆ, ಗೋಡಂಬಿಯನ್ನಾದರೂ ಹುಡುಕಿಕೊಳ್ಳಲಿ. ನನ್ನದೇನೂ ತಕರಾರು ಇಲ್ಲ. ಆದರೆ, ಒಬ್ಬ ಮುಖ್ಯಮಂತ್ರಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ಸ್ಪಷ್ಟತೆ ಇರಬೇಕು’ ಎಂದರು.

ಇದು ಕೊನೆಯ ಚುನಾವಣೆ ಆಗಿರುವುದರಿಂದ ಚಾಮುಂಡೇಶ್ವರಿಯಲ್ಲೇ ಸ್ಪರ್ಧಿಸುತ್ತೇನೆ ಎಂದು ಅವರು ಪದೇ ಪದೆ ಹೇಳುತ್ತಿದ್ದರು. ಚಾಮುಂಡೇಶ್ವರಿಯಲ್ಲಿ ಗೆಲುವು ಒಲಿಯದು ಎಂಬುದು ಅವರಿಗೆ ಮನವರಿಕೆಯಾಗಿರುವ ಕಾರಣ ಬಾದಾಮಿಗೆ ಹೋಗುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿಗೆ ಇಂಥ ಗೊಂದಲ ಇರಬಾರದು ಎಂದು ವ್ಯಂಗ್ಯವಾಡಿದರು.

‘ಯಾವುದೇ ಪರಿಣಾಮ ಬೀರದು’

ಬಾದಾಮಿಯಲ್ಲಿ ಸ್ಪರ್ಧಿಸಿದರೆ ಸುತ್ತಮುತ್ತಲಿನ ಕ್ಷೇತ್ರಗಳ ಮೇಲೂ ಪ್ರಭಾವ ಬೀರಬಹುದು ಎಂದು ಮುಖ್ಯಮಂತ್ರಿ ಹೇಳುತ್ತಾರೆ. 10 ದಿನ ಪ್ರಚಾರ ಮಾಡಿದರೂ ಅವರಿಗೆ ಇನ್ನೂ ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಪ್ರಭಾವ ಬೀರಲು ಆಗಿಲ್ಲ. ಅಲ್ಲಿ ಹೋಗಿ ಏನು ಪ್ರಭಾವ ಬೀರುತ್ತಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ‘ಮುಖ್ಯಮಂತ್ರಿ ಅವರ ದುರಹಂಕಾರ ಮತ್ತು ಉದ್ಧಟತನಕ್ಕೆ ಅಲ್ಲೂ ಗೆಲುವು ಕಾಣಲು ಸಾಧ್ಯವಿಲ್ಲ ಎಂಬುದು ನನ್ನ ಆಭಿಪ್ರಾಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.