ADVERTISEMENT

ಕೆರೆಗಳಲ್ಲಿ ಹೆಚ್ಚಿದ ನೀರಿನ ಪ್ರಮಾಣ

ಹುಣಸೂರು ತಾಲ್ಲೂಕಿನಾದ್ಯಂತ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 6:29 IST
Last Updated 22 ಮೇ 2017, 6:29 IST

ಹುಣಸೂರು: ತಾಲ್ಲೂಕಿನಾದ್ಯಂತ ಈ ಬಾರಿ ಉತ್ತಮ ಮಳೆಯಾಗಿದ್ದು, ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರು ವುದರಿಂದ ಜನ ಮತ್ತು ಜಾನುವಾರು ಗಳಿಗೆ ನೀರಿನ ಸಮಸ್ಯೆ ಅಲ್ಪಮಟ್ಟ ಸುಧಾರಿಸಿದೆ.

ಈವರಗೆ 88.4 ಮಿ.ಮೀ. ಮಳೆಯಾಗಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ತಾಲ್ಲೂಕಿನ ಕೆಲವು ಭಾಗದಲ್ಲಿ ಸಣ್ಣ ಕೆರೆಗಳಿಗೆ ನೀರು ಸಂಗ್ರಹಗೊಂಡಿದ್ದು ರೈತನ ಮುಖದಲ್ಲಿ ಸಂತಸ ಮೂಡಿದೆ.

ಈ ಭಾಗದ ವಾಣಿಜ್ಯ ಬೆಳೆ ತಂಬಾಕು ಸಸಿ ನಾಟಿ ಕಾರ್ಯ ಬಿರುಸಿನಿಂದ ನಡೆದಿದ್ದು, ಈ ಸಾಲಿನಲ್ಲಿ 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತಂಬಾಕು ಬೆಳೆಯುವ ನಿರೀಕ್ಷೆ ಇದೆ. ಈಗಾಗಲೇ ಅರ್ಧದಷ್ಟು ಭಾಗದಲ್ಲಿ ರೈತರು ತಂಬಾಕು ನಾಟಿ ಕಾರ್ಯ ಮುಗಿಸಿದ್ದಾರೆ.

ಈಚೆಗೆ ಬಿದ್ದ ಮಳೆಯಿಂದ ತಂಬಾಕು ನಾಟಿ ಕಾರ್ಯ ಭರದಿಂದ ಸಾಗಿದ್ದು, ರೈತರು ಸೂಕ್ತ ಔಷಧೋಪಚಾರ ಇಲ್ಲದೆ ಸಸಿ ನಾಟಿ ಮಾಡಿದರೆ ಅವು ಸಾಯುವ ಪ್ರಮಾಣ ಹೆಚ್ಚಿರುತ್ತದೆ. ತಂಬಾಕು ಸಂಶೋಧನಾ ಕೇಂದ್ರ ಶಿಫಾರಸು ಮಾಡಿರುವ ಔಷಧಿಯನ್ನು ಬಳಸಿ ನಾಟಿ ಮಾಡುವುದರಿಂದ ಸಸಿ ಸಾಯುವ ಪ್ರಮಾಣ ಕಡಿಮೆ ಆಗಲಿದೆ ಎಂದು ತಂಬಾಕು ಸಂಶೋಧನಾ ಕೇಂದದ ಅಧಿಕಾರಿಗಳು ತಿಳಿಸಿದ್ದಾರೆ.

ತಂಬಾಕು ಸಸಿ ಬೆಳೆಸಲು ಟ್ರೇ ಪದ್ಧತಿ ಅಳವಡಿಸಿಕೊಂಡಲ್ಲಿ ಸಸಿ ಆರೋಗ್ಯ ಪೂರ್ಣವಾಗಿರುತ್ತದೆ. ಈ ಪದ್ಧತಿಯಲ್ಲಿ  ಸಸಿ ನಾಟಿ ಮಾಡಿದ ಬಳಿಕ ಮಳೆ ಒಂದು ವಾರ ಇಲ್ಲದಿದ್ದರೂ ಸಾಯುವ ಪ್ರಮಾಣ ಅತ್ಯಂತ ಕಡಿಮೆ. ಇದರಿಂದ ರೈತರಿಗೆ ನಷ್ಟದ ಪ್ರಮಾಣ ಕಡಿತವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.