ADVERTISEMENT

ಕೆಸರು ಗದ್ದೆಯಂತಾದ ಜಾಗನಕೋಟೆ ರಸ್ತೆ

37 ವರ್ಷಗಳಿಂದ ಡಾಂಬರು ಕಾಣದ ಮಾರ್ಗ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 5:41 IST
Last Updated 18 ಜೂನ್ 2018, 5:41 IST
ಎಚ್.ಡಿ.ಕೋಟೆ ತಾಲ್ಲೂಕಿನ ಭೀಮನಕೊಲ್ಲಿ ಮುಖ್ಯ ರಸ್ತೆಯಿಂದ ಜಾಗನಕೋಟೆ ಗ್ರಾಮಕ್ಕೆ ತೆರಳುವ ರಸ್ತೆಯ ಸ್ಥಿತಿ
ಎಚ್.ಡಿ.ಕೋಟೆ ತಾಲ್ಲೂಕಿನ ಭೀಮನಕೊಲ್ಲಿ ಮುಖ್ಯ ರಸ್ತೆಯಿಂದ ಜಾಗನಕೋಟೆ ಗ್ರಾಮಕ್ಕೆ ತೆರಳುವ ರಸ್ತೆಯ ಸ್ಥಿತಿ   

ಎಚ್.ಡಿ.ಕೋಟೆ: ತಾಲ್ಲೂಕಿನ ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮನಕೊಲ್ಲಿಯಿಂದ ಕಾಡಂಚಿನ ಗ್ರಾಮಗಳಾದ ಕಾಳಯ್ಯನಹಳ್ಳ ಮತ್ತು ಜಾಗನಕೋಟೆಗೆ ತೆರಳುವ ರಸ್ತೆ ಒಂದೆಡೆ ಕೊರಕಲು ಬಿದ್ದು ಸಂಪೂರ್ಣ ಹಾಳಾಗಿದ್ದರೆ, ಮತ್ತೊಂದೆಡೆ ಕೆಸರು ಗದ್ದೆಯಂತಾಗಿದೆ. ಮಳೆಗಾಲದಲ್ಲಿ ಈ ಭಾಗದ ಜನರಿಗೆ ಸಂಪರ್ಕ ರಸ್ತೆಯೇ ಇಲ್ಲದಂತಾಗುತ್ತದೆ.

ಭೀಮನಕೊಲ್ಲಿ ಮುಖ್ಯ ರಸ್ತೆಯಿಂದ ಎರಡು ಕಿ.ಮೀ. ದೂರದಲ್ಲಿರುವ ಕಾಳಯ್ಯನಹಳ್ಳ ಗ್ರಾಮದಲ್ಲಿ 66ಕ್ಕೂ ಹೆಚ್ಚು ಕುಟುಂಬಗಳಿದ್ದು, ಬಹುತೇಕ ದಲಿತರೇ ವಾಸವಾಗಿದ್ದಾರೆ. ಅದೇ ಮಾರ್ಗವಾಗಿ ಜಾಗನಕೋಟೆ ಗ್ರಾಮಕ್ಕೆ ಎರಡು ಕಿ.ಮೀ ದೂರವಾಗುತ್ತದೆ.
ಕಬಿನಿ ಜಲಾಶಯ ಭರ್ತಿಯಾದ ಸಂದರ್ಭಗಳಲ್ಲಿ ಈ ಮಾರ್ಗದಲ್ಲಿ ರೈತರು ಜಮೀನುಗಳನ್ನು ಒತ್ತುವರಿ ಮಾಡುವುದರಿಂದ ಎರಡು ಗ್ರಾಮಗಳು ದ್ವೀಪಗಳಂತಾಗುತ್ತವೆ. ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಮತ್ತು ಬೇಸಿಗೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಂಚರಿಸಲು ಅವಕಾಶವಿರುತ್ತದೆ.

ವಾಹನಗಳು ಮಾತ್ರವಲ್ಲ ಪಾದ ಚಾರಿಗಳು ಸಹ ಸಾಗಲು ಹರಸಾಹಸ ಪಡಬೇಕಾದ ಸ್ಥಿತಿ ಈ ರಸ್ತೆಯಲ್ಲಿದೆ. 1981ರಲ್ಲಿ ಮೆಟ್ಲಿಂಗ್ ಆಗಿದ್ದು,
37 ವರ್ಷ ಕಳೆದರೂ ಗ್ರಾಮಗಳ ಸಂಪರ್ಕ ರಸ್ತೆಗೆ ಡಾಂಬರೀಕರಣ ಮಾಡದಿರುವುದು ಈ ಗ್ರಾಮಗಳ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಇರುವ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಾಗಿದೆ.

ADVERTISEMENT

ಒಂದೆಡೆ ಅಭಿವೃದ್ಧಿ ಸಮಸ್ಯೆಯೂ ಕಾಡುತ್ತಿದೆ. ಇದ್ದ ರಸ್ತೆ ಹದಗೆಟ್ಟಿದ್ದು, ಶಾಲಾ ಮಕ್ಕಳು, ಸಂಚರಿಸಲು ಹರಸಾಹಸ ಪಡುವಂತಾಗಿದೆ.

ಕಾಳಯ್ಯನಹಳ್ಳ ಕೆ.ಆರ್.ಎಸ್. ಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ‘ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಯಾವುದೇ ವಾಹನಗಳು ಗ್ರಾಮಕ್ಕೆ ಬರಲು ಸಾಧ್ಯವೇ ಇಲ್ಲ. ದ್ವಿಚಕ್ರ ವಾಹನದಲ್ಲಿ ಪಟ್ಟಣಕ್ಕೆ ಹೋಗಿಬರಲು ಸಾಧ್ಯವಾಗುತ್ತಿಲ್ಲ, ಕಾಳಯ್ಯನಹಳ್ಳ ಮತ್ತು ಜಾಗನಕೋಟೆ ಗ್ರಾಮಗಳ ಜನರಿಗೆ ಅನಾರೋಗ್ಯ ಸೇರಿದಂತೆ ಇತರೆ ಯಾವುದೇ ಸಮಸ್ಯೆ ಬಂದರೂ ಪಟ್ಟಣ ಪ್ರದೇಶವನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ' ಎಂದು ಸಮಸ್ಯೆಯನ್ನು ವಿವರಿಸಿದರು.

‘ಕುಡಿಯುವ ನೀರು ಮತ್ತು ಬೀದಿ ದೀಪಗಳಿಗೆ ಆದ್ಯತೆ ನೀಡಿದ್ದೇವೆ. ಗ್ರಾಮ ಪಂಚಾಯಿತಿ ಸದಸ್ಯರ ಹೆಚ್ಚಿನ ಸಹಕಾರ ಸಿಕ್ಕಿದರೆ ಮತ್ತಷ್ಟು ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡುತ್ತೇನೆ ಎಂದರು ಎನ್.ಬೇಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನು.

ಡಾಂಬರು ಕಾಣದ ರಸ್ತೆಗಳು, ಮೂಲ ಸೌಲಭ್ಯ ವಂಚಿತವಾದ ಗ್ರಾಮಗಳತ್ತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಗ್ರಾಮದ ಕೂಸಣ್ಣ ಆರೋಪಿಸಿದ್ದಾರೆ.

ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾಡಂಚಿನ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಎರಡೂ ಗ್ರಾಮಗಳ ಜನತೆ ಮನವಿ
ಮಾಡಿದ್ದಾರೆ.

ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಭಾಗದ ಜನರೊಂದಿಗೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಕೃಷ್ಣ, ಬಾಲಯ್ಯ, ಬಸವರಾಜು, ರಾಮಯ್ಯ, ಕೂಸಣ್ಣ ಎಚ್ಚರಿಸಿದ್ದಾರೆ.

ಕಾಡಂಚಿನ ಮತ್ತು ಕಬಿನಿ ಜಲಾಶಯ ನಿರ್ಮಾಣದಿಂದ ಮುಳುಗಡೆಯಾದ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದೇವೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ
ಸಿ.ಅನಿಲ್ ಕುಮಾರ್, ಶಾಸಕ 

ಸತೀಶ್ ಬಿ.ಆರಾಧ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.