ADVERTISEMENT

ಗ್ರಂಥಾಲಯಕ್ಕೆ ₹ 15 ಕೋಟಿ ಸೆಸ್‌ ಬಾಕಿ

ನಿರ್ವಹಣೆಗೆ ಹಣದ ಕೊರತೆ– ಸೊರಗುತ್ತಿರುವ ನಗರದ ಗ್ರಂಥಾಲಯಗಳು

ಕೆ.ಓಂಕಾರ ಮೂರ್ತಿ
Published 22 ಮೇ 2018, 8:54 IST
Last Updated 22 ಮೇ 2018, 8:54 IST
ಗ್ರಂಥಾಲಯಕ್ಕೆ ₹ 15 ಕೋಟಿ ಸೆಸ್‌ ಬಾಕಿ
ಗ್ರಂಥಾಲಯಕ್ಕೆ ₹ 15 ಕೋಟಿ ಸೆಸ್‌ ಬಾಕಿ   

ಮೈಸೂರು: ಮೈಸೂರು ಮಹಾನಗರ ಪಾಲಿಕೆಯು ಸುಮಾರು ₹ 15 ಕೋಟಿ ಗ್ರಂಥಾಲಯ ಸೆಸ್‌ ಬಾಕಿ ಉಳಿಸಿಕೊಂಡಿದ್ದು, ನಗರದ ಗ್ರಂಥಾಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸಿಬ್ಬಂದಿ ಹಾಗೂ ಸೌಲಭ್ಯದ ಕೊರತೆ ಎದುರಾಗಿದ್ದು, ನಿರ್ವಹಣೆ ಇಲ್ಲದೆ ಸೊರಗುತ್ತಿವೆ.

ಪೀಪಲ್ಸ್‌ ಪಾರ್ಕ್‌ನಲ್ಲಿ ನಿರ್ಮಿಸುತ್ತಿರುವ ನೂತನ ಗ್ರಂಥಾಲಯಕ್ಕೆ ಆರ್ಥಿಕ ಕೊರತೆ ಉಂಟಾಗಿದೆ. ₹ 5 ಕೋಟಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಲಾಗುತ್ತಿದೆ. ₹ 4.25 ಕೋಟಿ ಬಿಡುಗಡೆಯಾಗಿದ್ದು, ಶೇ 50ರಷ್ಟು ಕಾಮಗಾರಿ ಮುಗಿದಿದೆ. ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ₹ 75 ಲಕ್ಷ ಹಾಗೂ ಗ್ರಂಥಾಲಯಗಳ ನಿರ್ವಹಣೆಗೆ ₹ 4 ಕೋಟಿ ಬಿಡುಗಡೆ ಮಾಡುವಂತೆ ವಿಧಾನಸಭೆ ಅರ್ಜಿ ಸಮಿತಿಯು ಈಚೆಗೆ ಪಾಲಿಕೆಗೆ ಸೂಚನೆ ನೀಡಿದೆ.

‘ಪ್ರತಿ ವರ್ಷ ಪಾಲಿಕೆಗೆ ಸುಮಾರು ₹ 4 ಕೋಟಿ ಸೆಸ್‌ ಸಂಗ್ರಹವಾಗುತ್ತಿದೆ. ಆದರೆ, ಅದು ಗ್ರಂಥಾಲಯ ಇಲಾಖೆ ಸೇರುತ್ತಿಲ್ಲ. ನೌಕರರ ವೇತನ ಹೊರತುಪಡಿಸಿ ಸರ್ಕಾರದಿಂದ ಗ್ರಂಥಾಲಯ ಇಲಾಖೆಗೆ ಯಾವುದೇ ನೇರ ಅನುದಾನ ಬರುವುದಿಲ್ಲ. ವಿದ್ಯುತ್‌ ಶುಲ್ಕ ಕೂಡ ನಾವೇ ಪಾವತಿಸಬೇಕು. ಹೀಗಾಗಿ, ಸಂಪೂರ್ಣವಾಗಿ ಸ್ಥಳೀಯ ಸಂಸ್ಥೆಗಳ ಹಣದ ಮೇಲೆ ಅವಲಂಬಿತರಾಗಿದ್ದೇವೆ‌’ ಎಂದು ಮೈಸೂರು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ನಗರದಲ್ಲಿ 34 ಗ್ರಂಥಾಲಯಗಳಿವೆ. ಇವುಗಳಲ್ಲಿ ಬಹುತೇಕ ಗ್ರಂಥಾಲಯಕ್ಕೆ ಸಿಬ್ಬಂದಿ ಕೊರತೆ ಇದೆ. ಸದ್ಯ ಇರುವ 16 ಶಾಶ್ವತ ಸಿಬ್ಬಂದಿಯೇ ಇವುಗಳ ನಿರ್ವಹಣೆಯಲ್ಲಿ ತೊಡಗಿದ್ದಾರೆ.

‘ಸೆಸ್‌ ಬಾಕಿ ಉಳಿಸಿಕೊಂಡಿರುವುದರಿಂದ ಸರಿಯಾದ ಸೌಲಭ್ಯ ನೀಡಲು ಆಗುತ್ತಿಲ್ಲ. ಒಂದು ಗ್ರಂಥಾಲಯ ನಿರ್ವಹಣೆಗೆ ಮೂರು ಸಿಬ್ಬಂದಿ ಇರಬೇಕು. ಆದರೆ, ಬಹುತೇಕ ಕಡೆ ಸಿಬ್ಬಂದಿ ಹಾಗೂ ಜಾಗದ ಕೊರತೆ ಇದೆ. ಸರಿಯಾಗಿ ನೀರಿನ ವ್ಯವಸ್ಥೆ ಮಾಡಲು ಆಗುತ್ತಿಲ್ಲ. ಹೊಸ ಪುಸ್ತಕ ಖರೀದಿ ಮಾಡಿಲ್ಲ’ ಎಂದು ಅವರು ಹೇಳಿದರು.

‘ಪಾಲಿಕೆಗೆ ಪ್ರತಿ ವರ್ಷ ₹ 4 ಕೋಟಿ ಗ್ರಂಥಾಲಯ ಸೆಸ್‌ ಸಂಗ್ರಹವಾಗುತ್ತದೆ. ಸೆಸ್‌ ಪಾವತಿಸದ ಕಾರಣ ಹಿಂದೆ ಹಲವು ಬಾರಿ ಗ್ರಂಥಾಲಯವನ್ನೇ ಮುಚ್ಚುವ ಪರಿಸ್ಥಿತಿ ಎದುರಾಗಿತ್ತು. ಮತ್ತೆ ಆ ಪರಿಸ್ಥಿತಿ ಬರಬಾರದು. ಇನ್ನೆರಡು ದಿನಗಳಲ್ಲಿ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಹಣ ಬಿಡುಗಡೆ ಮಾಡುವಂತೆ ಕೋರಲಿದ್ದೇನೆ’ ಎಂದರು.

ಜಿಲ್ಲೆಯಲ್ಲಿ ಮೂರು ಅಲೆಮಾರಿ, ಮೂರು ಕೊಳೆಗೇರಿ ಹಾಗೂ ಎರಡು ಸೇವಾ ಗ್ರಂಥಾಲಯಗಳು ಇವೆ. ನಂಜನಗೂಡು ಹಾಗೂ ಕೆ.ಆರ್‌.ನಗರ ಉಪ ಕಾರಾಗೃಹಗಳಲ್ಲಿ ಕೂಡ ಗ್ರಂಥಾಲಯ ಸ್ಥಾಪಿಸಿ ಕೈದಿಗಳು, ಸಿಬ್ಬಂದಿಗೆ ಪುಸ್ತಕ ಮತ್ತು ದಿನ
ಪತ್ರಿಕೆ ಓದಲು ಅನುವು ಮಾಡಿಕೊಡಲಾಗಿದೆ.

**
ಪಾಲಿಕೆ ಬಾಕಿ ಇಟ್ಟುಕೊಂಡಿರುವ ಸೆಸ್‌ ಹಣ ಇಲಾಖೆಗೆ ದೊರೆತಲ್ಲಿ ಗ್ರಂಥಾಲಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ
ಬಿ.ಮಂಜುನಾಥ್‌, ಉಪನಿರ್ದೇಶಕ, ನಗರ ಕೇಂದ್ರ ಗ್ರಂಥಾಲಯ, ಮೈಸೂರು

**
ಗ್ರಂಥಾಲಯ ಕೂಡ ತುಂಬಾ ಮುಖ್ಯವಾದುದು. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ‌
ಕೆ.ಎಚ್‌.ಜಗದೀಶ್‌,  ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.