ADVERTISEMENT

ಗ್ರಾ.ಪಂ ಹಂತದಲ್ಲೂ ನೀತಿ ಸಂಹಿತೆ

15 ಚೆಕ್‌ಪೋಸ್ಟ್‌ ರಚನೆ; ವಿವಿಧ ಇಲಾಖೆ ಅಧಿಕಾರಿಗಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:25 IST
Last Updated 11 ಮಾರ್ಚ್ 2017, 7:25 IST
ಮೈಸೂರು: ನಂಜನಗೂಡು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ತಂಡ ಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
 
ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದರು. ನೀತಿ ಸಂಹಿತೆ ಮುಕ್ತಾಯದವರೆಗೂ ಅಧಿಕಾರಿಗಳು ಚುನಾವಣಾ ಆಯೋಗದ ಆದೇಶ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು. 
 
ಸರ್ಕಾರಿ ವಾಹನಗಳನ್ನು ಜನಪ್ರತಿ ನಿಧಿಗಳು ಚುನಾವಣೆಗೆ ಬಳಸಿದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ವಾಹನಗಳ ಸಂಚಾರದ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು. ಜಿಲ್ಲೆಯ ಯಾವುದೇ ಸರ್ಕಾರಿ ಅತಿಥಿ ಗೃಹಗಳಲ್ಲಿ ರಾಜಕೀಯ ಚಟುವಟಿಕೆ ನಡೆಸುವಂತಿಲ್ಲ ಎಂದು ಸೂಚಿಸಿದರು.
 
ಎಸ್‌.ಪಿ ರವಿ ಡಿ.ಚೆನ್ನಣ್ಣನವರ ಮಾತನಾಡಿ, ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 154 ಹಳ್ಳಿಗಳಿದ್ದು, ಪ್ರತಿ ಹಳ್ಳಿಗೆ 2 ಪೊಲೀಸ್ ಸಿಬ್ಬಂದಿ, ಪ್ರತಿ 10 ಹಳ್ಳಿಗೆ ಒಬ್ಬರು ಸಬ್ಇನ್ಸ್‌ಪೆಕ್ಟರನ್ನು ಬಂದೋಬಸ್ತ್ ಹಾಗೂ ನಿಗಾವಹಿಸಲು ನಿಯೋಜಿಸಲಾಗುವುದು ಎಂದರು.
 
ಗುರುವಾರದಿಂದಲೇ 5 ಚೆಕ್‌ಪೋಸ್ಟ್ ಕಾರ್ಯಾರಂಭಿಸಿವೆ. ಒಟ್ಟು 15 ಚೆಕ್‌ಪೋಸ್ಟ್‌ ರಚಿಸಲಾಗುತ್ತದೆ. ಕಂದಾಯ ಇಲಾಖೆ, ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ಪಾಳಿಯ ಮೇಲೆ ಕೆಲಸ ನಿರ್ವಹಿಸುವರು ಎಂದರು.
 
ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಸರ್ಕಾರಿ ಕಾರ್ಯಕ್ರಮ ಅಥವಾ ಹೊಸ ಯೋಜನೆಯನ್ನು ಘೋಷಿಸುವಂತಿಲ್ಲ. ಸಾರ್ವಜನಿಕ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಭಿತ್ತಿಪತ್ರ, ಕಟೌಟ್, ಪೋಸ್ಟರ್, ಬ್ಯಾನರ್ ಇತ್ಯಾದಿಗಳನ್ನು ಅನುಮತಿ ಇಲ್ಲದೆ ಹಾಕುವಂತಿಲ್ಲ. ಆಮಿಷ ನೀಡಲು ಬಳಸುವ ಎಲ್ಲ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದರು.
 
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಉಪವಿಭಾಗಾಧಿಕಾರಿ ಸಿ.ಎಲ್.ಆನಂದ, ಎಎಸ್‌ಪಿ ಕಲಾಕೃಷ್ಣ ಸ್ವಾಮಿ ಹಾಜರಿದ್ದರು.
 
ಆಯುಧ ಠೇವಣಿಗೆ ಸೂಚನೆ
ಮೈಸೂರು:
ನಂಜನಗೂಡು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಏಪ್ರಿಲ್‌ 9ರಂದು ನಡೆಯಲಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆ ಮಾರ್ಚ್‌ 9ರಿಂದ ಏಪ್ರಿಲ್‌ 15ರ ವರೆಗೆ ಜಾರಿಯಲ್ಲಿರುತ್ತದೆ.

ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಗಳಿಗೆ ಅವಕಾಶ ನೀಡದಿರಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶಸ್ತ್ರಾಸ್ತ್ರ ಕಾಯ್ದೆಯಡಿ ಆಯುಧ ಪರವಾನಗಿ ಹೊಂದಿರುವವರು ಚುನಾವಣಾ ಪ್ರಕ್ರಿಯೆ ಮುಗಿಯುವ ವರೆಗೂ ಶಸ್ತ್ರಾಸ್ತ್ರಗಳನ್ನು ಸಂಬಂಧ ಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ಆದೇಶ ಹೊರಡಿಸಿದ್ದಾರೆ.

ಯಾವುದೇ ವ್ಯಕ್ತಿ ಶಸ್ತ್ರಾಸ್ತ್ರಗಳನ್ನು ಒಯ್ಯುವ ಅಥವಾ ಹಿಡಿದುಕೊಂಡು ಓಡಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.