ADVERTISEMENT

ಗ್ರಾಮಾಭಿವೃದ್ಧಿ ಕಾರ್ಯಕ್ರಮ: ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 6:07 IST
Last Updated 26 ನವೆಂಬರ್ 2017, 6:07 IST

ತಿ.ನರಸೀಪುರ: ಗ್ರಾಮೀಣ ಜನರ ಸರ್ವಾಂಗೀಣ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಕ್ತಿ ನೀಡುತ್ತಿದ್ದು, ಯೋಜನೆ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾ ಜನಜಾಗೃತಿ ಸದಸ್ಯ ಕೆ.ಎನ್.ಪ್ರಭುಸ್ವಾಮಿ ಸಲಹೆ ನೀಡಿದರು.

ತಾಲ್ಲೂಕಿನ ವ್ಯಾಸರಾಜಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ನಡೆದ ಯೋಜನೆಯ ಸೋಸಲೆ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಾಧನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಯೋಜನೆ ತಾಲ್ಲೂಕಿನಲ್ಲಿ ಅನುಷ್ಠಾನವಾದಾಗಿನಿಂದ ಗ್ರಾಮೀಣ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದು, ಮದ್ಯ ವ್ಯಸನಿಗಳು ದುಶ್ಚಟದಿಂದ ಮುಕ್ತರಾಗುತ್ತಿದ್ದಾರೆ. ಯುವ ಸಮುದಾಯವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪದಂತಹ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಸಾಲ ಸೌಲಭ್ಯ ನೀಡಿ ಅಭಿವೃದ್ಧಿಗೆ ಯೋಜನೆ ಸಹಕಾರ ನೀಡುತ್ತಿದೆ ಎಂದರು.

ADVERTISEMENT

ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ಕುಟುಂಬದ ಸ್ವಾವಲಂಬನೆಗೆ ಅಗತ್ಯ ತಿಳಿವಳಿಕೆ ನೀಡುವುದೇ ಮೂಲ ಉದ್ದೇಶ ಎಂದು ಹೇಳಿದರು
ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಗಳಮ್ಮ ಮಹದೇವಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಯೋಜನಾಧಿಕಾರಿ ಸುನೀತಾ ಪ್ರಭು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ವಕೀಲರ ಸಂಘದ ಉಪಾಧ್ಯಕ್ಷೆ ನಾಗಮ್ಮ ಅವರು ಬಾಲ್ಯ ವಿವಾಹ, ಸಂಚಾರ ಸುರಕ್ಷತೆ, ಕೌಟುಂಬಿಕ ದೌರ್ಜನ್ಯ ಕಾಯ್ದೆ ಸೇರಿದಂತೆ ವಿವಿಧ ಕಾಯಿದೆಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕ ಹೊನ್ನನಾಯಕ, ಹಾಗೂ ಉಪನ್ಯಾಸಕ ಎಂ. ಮಹದೇವ ಮಾತನಾಡಿದರು.
ಫಲಾನುಭವಿಗಳಿಗೆ ಮಾಸಾಶನ, ಉತ್ತಮ ಸಂಘಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷ ರಾಮು, ಮುಖಂಡ ಸೋಸಲೆ ಮಹಾದೇವಸ್ವಾಮಿ, ವಲಯ ಮೇಲ್ವಿಚಾರಕರಾದ ಯೋಗೀಶ್, ಸಂದೇಶ್ ಹಾಗೂ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.