ADVERTISEMENT

ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ: ‘ಉಂಟು, ಇಲ್ಲ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 6:41 IST
Last Updated 21 ಸೆಪ್ಟೆಂಬರ್ 2017, 6:41 IST
ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ: ‘ಉಂಟು, ಇಲ್ಲ’
ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ: ‘ಉಂಟು, ಇಲ್ಲ’   

ಮೈಸೂರು: ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಗುರುವಾರದ ಮಟ್ಟಿಗೆ ಪೊಲೀಸ್‌ ಕಮಿಷನರ್‌ ತೆರವುಗೊಳಿಸಿದ್ದಾರೆ. ಆದರೆ, ಮುಂದಿನ ದಿನಗಳ ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾಗಿದೆ.

ದಸರಾ ಮಹೋತ್ಸವದ ಅಂಗವಾಗಿ ಚಾಮುಂಡಿಬೆಟ್ಟಕ್ಕೆ ಭಕ್ತರು ಮತ್ತು ಪ್ರವಾಸಿಗರ ದಂಡು ಹರಿದು ಬರುತ್ತದೆ. ಬೆಟ್ಟದಲ್ಲಿ ವಾಹನ ನಿಲುಗಡೆಗೂ ಸರಿಯಾದ ವ್ಯವಸ್ಥೆ ಇಲ್ಲದ ಪರಿಣಾಮ ಸಂಚಾರ ಸಮಸ್ಯೆ ಸೃಷ್ಟಿಯಾಗುತ್ತದೆ. ಬೆಟ್ಟದ ರಸ್ತೆಗಳು ಕಿರಿದಾಗಿರುವುದರಿಂದ ವಾಹನ ದಟ್ಟಣೆಯಲ್ಲಿ ಜನರು ಕಿರಿಕಿರಿ ಅನುಭವಿಸುತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ 2016ರಲ್ಲಿ ಮೊದಲ ಬಾರಿಗೆ ಖಾಸಗಿ ವಾಹನ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ, ಜನರಿಗೆ ಈ ಕುರಿತು ಮಾಹಿತಿ ಇಲ್ಲದ ಪರಿಣಾಮ ಇದು ಯಶಸ್ವಿಯಾಗಲಿಲ್ಲ.

ಆಷಾಢ ಶುಕ್ರವಾರದ ಮಾದರಿಯಲ್ಲಿ ದಸರಾ ಮಹೋತ್ಸವದಲ್ಲಿಯೂ ವಾಹನ ಪ್ರವೇಶ ನಿರ್ಬಂಧಿಸಲು ಪೊಲೀಸ್‌ ಇಲಾಖೆ ನಿರ್ಧರಿಸಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸಾಧ್ಯತೆ ಇರುವ ಸೆ.21ರಿಂದ 24 ಹಾಗೂ ಸೆ.28ರಿಂದ ಅ.2ರವರೆಗೆ ಖಾಸಗಿ ವಾಹನಕ್ಕೆ ಅವಕಾಶ ನೀಡದಿರಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಪರ್ಯಾಯವಾಗಿ ಲಲಿತಮಹಲ್‌ ಹೆಲಿಪ್ಯಾಡಿನಿಂದ ನಗರ ಸಾರಿಗೆ ಬಸ್‌ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುವಂತೆ ಕೋರಿ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಇದಕ್ಕೆ ಜಿಲ್ಲಾಡಳಿತ ಒಪ್ಪಿಗೆ ನೀಡಿಲ್ಲ.

ADVERTISEMENT

‘ಬೆಟ್ಟದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲ. ನಾಡಹಬ್ಬಕ್ಕೆ ಪ್ರವಾಸಿಗರು ಲಗ್ಗೆ ಇಡುವುದರಿಂದ ಇತ್ತೀಚಿನ ದಿನಗಳಲ್ಲಿ ಸಂಚಾರ ಸಮಸ್ಯೆ ತಲೆದೋರಿದೆ. ಖಾಸಗಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದರೆ ಕಿರಿಕಿರಿ ತಪ್ಪುತ್ತಿತ್ತು. ಆದರೆ, ಪೊಲೀಸರ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿಲ್ಲ. ಸೆ.22ರಿಂದ ಅ.2ರವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

* * 

ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಇದಕ್ಕೆ ಪರ್ಯಾಯವಾಗಿ ಜಿಲ್ಲಾಡಳಿತದ ವತಿಯಿಂದ ಲಲಿತಮಹಲ್‌ ಹೆಲಿಪ್ಯಾಡಿನಿಂದ ಬಸ್‌ ವ್ಯವಸ್ಥೆ ಮಾಡಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.