ADVERTISEMENT

ಚಿನ್ನ ಖರೀದಿಗೆ ಉತ್ಸಾಹ; ವಹಿವಾಟು ಹೆಚ್ಚಳ

ಜಿ.ಬಿ.ನಾಗರಾಜ್
Published 1 ಜುಲೈ 2017, 8:26 IST
Last Updated 1 ಜುಲೈ 2017, 8:26 IST

ಮೈಸೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಮುನ್ನಾದಿನವಾದ ಶುಕ್ರವಾರ ಚಿನ್ನಾಭರಣ, ಬಟ್ಟೆ, ವಾಹನ ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳ ಖರೀದಿಗೆ ಗ್ರಾಹಕರು ಉತ್ಸುಕತೆ ತೋರಿದ್ದು, ನೂತನ ತೆರಿಗೆ ವ್ಯವಸ್ಥೆಯಲ್ಲಿ ತುಟ್ಟಿ ಆಗಲಿರುವ ಉತ್ಪನ್ನಗಳ ಮಾರಾಟ ಭರಾಟೆಯೂ ಜೋರಾಗಿತ್ತು.

ಚಿನ್ನಾಭರಣಗಳ ಮೇಲೆ ಶೇ 1ರಷ್ಟು ವ್ಯಾಟ್‌ ಹಾಗೂ ಶೇ 1ರಷ್ಟು ಅಬಕಾರಿ ಸುಂಕವಿತ್ತು. ಜಿಎಸ್‌ಟಿಯಲ್ಲಿ ತೆರಿಗೆಯ ಈ ದರವನ್ನು ಶೇ 3ಕ್ಕೆ ನಿಗದಿ ಮಾಡಲಾಗಿದೆ. ಹೆಚ್ಚಾದ ತೆರಿಗೆ ದರವು ಚಿನ್ನಾಭರಣಗಳ ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕದಿಂದ ಅನೇಕರು ಚಿನ್ನ ಖರೀದಿಗೆ ಮುಗಿಬಿದ್ದಿದ್ದಾರೆ.

‘ಸಣ್ಣ, ಮಧ್ಯಮ ಹಾಗೂ ದೊಡ್ಡ ಅಂಗಡಿ ಸೇರಿದಂತೆ ಮೈಸೂರಿನಲ್ಲಿ ಸುಮಾರು 600 ಚಿನ್ನಾಭರಣ ಮಳಿಗೆಗಳಿವೆ. ಬಹುತೇಕ ಎಲ್ಲ ಮಳಿಗೆಗಳ ವಹಿವಾಟು ವಾರದಿಂದ ಒಂದೂವರೆಪಟ್ಟು ಹೆಚ್ಚಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಎಲ್ಲ ವರ್ಗದ ಜನತೆಯೂ ಆಭರಣ ಖರೀದಿಸುತ್ತಿದ್ದಾರೆ’ ಎಂದು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ ಅಮರನಾಥ ಮಾಹಿತಿ ನೀಡಿದರು.

ADVERTISEMENT

ಮೊಬೈಲ್ ಮೇಲಿನ ತೆರಿಗೆ ಶೇ 15ರಿಂದ 18ಕ್ಕೆ ಏರಿಕೆಯಾಗಲಿದೆ. ದಾಸ್ತಾನು ಖಾಲಿ ಮಾಡಲು ಅನೇಕ ಮಳಿಗೆಗಳು ವಿಶೇಷ ರಿಯಾಯಿತಿ ಘೋಷಿಸಿವೆ. ಹೀಗಾಗಿ, ಮೊಬೈಲ್‌ ಮಾರಾಟ ಮಳಿಗೆಗಳೂ ಭರ್ತಿಯಾಗಿದ್ದವು.

ಲಾಭ–ನಷ್ಟದ ಲೆಕ್ಕಾಚಾರ: ಕಟ್ಟಡ ನಿರ್ಮಾಣ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಲಾಭ–ನಷ್ಟದ ಲೆಕ್ಕಾಚಾರಗಳು ಗರಿಗೆದರಿವೆ. ತೆರಿಗೆ ಸಂಬಂಧಿ ತಂತ್ರಾಂಶಗಳನ್ನು ಬದಲಿಸಿಕೊಳ್ಳುವಲ್ಲಿ ನಿರತರಾಗಿರುವ ಉದ್ಯಮಿಗಳು, ನೂತನ ತೆರಿಗೆ ವ್ಯವಸ್ಥೆಯ ಪರಿಣಾಮಗಳನ್ನು ಕಾದು ನೋಡಲು ನಿರ್ಧರಿಸಿದ್ದಾರೆ.

ಸಿಮೆಂಟ್‌ ಮೇಲಿನ ತೆರಿಗೆ ಶೇ 28ಕ್ಕೆ ನಿಗದಿ ಮಾಡಲಾಗಿದೆ. ಕಬ್ಬಿಣ, ಉಕ್ಕು ಸೇರಿದಂತೆ ಇತರ ಪರಿಕರಗಳ ಮೇಲೆ ವ್ಯಾಟ್‌, ಅಬಕಾರಿ ಸೇರಿ ಶೇ 18.5 ತೆರಿಗೆ ವಿಧಿಸಲಾಗಿತ್ತು. ಈಗ ಅದು ಶೇ 18ಕ್ಕೆ ಇಳಿದಿದೆ. ಹೀಗಾಗಿ, ಕಟ್ಟಡ ನಿರ್ಮಾಣದ ವೆಚ್ಚ ಬದಲಾಗುವ ಸಾಧ್ಯತೆಯನ್ನು ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ.

‘ಚಾವಣಿಗೆ ಅಳವಡಿಸುವ ಶೀಟುಗಳಿಗೆ ವ್ಯಾಟ್‌ ಹಾಗೂ ಅಬಕಾರಿ ಸುಂಕ ಸೇರಿ ಶೇ 28ರಷ್ಟು ತೆರಿಗೆ ತೆರಬೇಕಿತ್ತು. ಇದು ಗ್ರಾಮೀಣ ಪ್ರದೇಶದ ಸರಕು ಎಂದು ತೀರ್ಮಾನಿಸಿದ ಜಿಎಸ್‌ಟಿ ಮಂಡಳಿ ತೆರಿಗೆಯನ್ನು ಶೇ 18ಕ್ಕೆ ಇಳಿಸಿದೆ. ಆದರೆ, ಗರಿಷ್ಠ ಮಾರಾಟ ದರ (ಎಂಆರ್‌ಪಿ) ಬದಲಾವಣೆಯಾಗುವುದು ಅನುಮಾನ.

ಮಾರಾಟಗಾರರು ದರವನ್ನು ಕಡಿಮೆ ಮಾಡದಿರುವ ಸಾಧ್ಯತೆ ಇದೆ’ ಎಂದು ಬಿಲ್ಡರ್‌್್ಸ ಅಸೋಸಿಯೇಷನ್‌ನ ಮೈಸೂರು ಘಟಕದ ಮಾಜಿ ಅಧ್ಯಕ್ಷ ಎನ್‌.ಸುಬ್ರಮಣ್ಯ ತಿಳಿಸಿದ್ದಾರೆ.

ಸಣ್ಣ ಉದ್ದಿಮೆದಾರರು ನಿರಾಳ: ಕೆಲ ಅಸಮಾಧಾನಗಳ ನಡುವೆಯೂ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳು ಜಿಎಸ್‌ಟಿಯನ್ನು ಸ್ವಾಗತಿಸಿದ್ದಾರೆ. ಹಲವು ತೆರಿಗೆ ಹಾಗೂ ಸೆಸ್‌ಗಳಿಂದ ಉತ್ಪನ್ನಗಳು ಮುಕ್ತಿ ಪಡೆಯುತ್ತವೆ ಎಂಬುದು ಈ ಉದ್ಯಮಿಗಳಲ್ಲಿ ಸಂತಸ ಮೂಡಿಸಿದೆ. ಆದರೆ, ಜವಳಿ ಹಾಗೂ ನೂಲು ಉದ್ಯಮಕ್ಕೆ ಹೆಚ್ಚುವರಿ ಹೊರೆ ಬಿದ್ದಿದೆ.

‘ಜಿಲ್ಲೆಯಲ್ಲಿ ಸುಮಾರು 25 ಸಾವಿರ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿವೆ. ಗುಂಡು ಪಿನ್‌ನಿಂದ ಹಿಡಿದು ವಿಮಾನ ತಯಾರಿಕೆಗೆ ಅಗತ್ಯವಿರುವ ಮೂಲ ವಸ್ತುಗಳ ಪೂರೈಕೆಯಲ್ಲಿ ತೊಡಗಿಕೊಂಡಿವೆ. ಭಾರತ್‌ ಅರ್ಥ್ ಮೂವರ್‌ ಪ್ರೈವೇಟ್‌ ಲಿಮಿಟೆಡ್‌ (ಬಿಇಎಂಎಲ್‌), ಹಿಂದೂಸ್ತಾನ್‌ ಏರೊನಾಟಿಕ್‌ ಲಿಮಿಟೆಡ್‌ (ಎಚ್‌ಎಎಲ್‌) ಸೇರಿ ಭಾರಿ ಕೈಗಾರಿಕೆಗಳಿಗೆ ಕಚ್ಚಾವಸ್ತು ಇಲ್ಲಿಂದಲೇ ಸರಬರಾಜು ಆಗುತ್ತಿದೆ. ₹ 20 ಲಕ್ಷದ ಒಳಗಿನ ವಹಿವಾಟು ನಡೆಸುವ ಉದ್ದಿಮೆದಾರರನ್ನು ತೆರಿಗೆ ಮುಕ್ತಗೊಳಿಸಿದ್ದು ಸಂತಸ ಮೂಡಿಸಿದೆ’ ಎಂದು ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶಕುಮಾರ್‌ ಜೈನ್‌ ತಿಳಿಸಿದ್ದಾರೆ.

ದಾಸ್ತಾನು ಖಾಲಿ ಮಾಡಲು ಕೆಲ ಕಂಪೆನಿಗಳು ‘ಜಿಎಸ್‌ಟಿ ಪೂರ್ವ ಖರೀದಿ’ಗೆ ರಿಯಾಯಿತಿ ಘೋಷಿಸಿವೆ. ಹೀಗಾಗಿ, ಎಲ್ಲ ಸರಕುಗಳ ಬೆಲೆ ಹೆಚ್ಚಾಗಲಿವೆ ಎಂಬ ಭಾವನೆ ಮೂಡಿದೆ. ಆದರೆ, ಚಿನ್ನಾಭರಣದ ದರದಲ್ಲಿ ಭಾರಿ ಬದಲಾವಣೆ ಆಗದು
ಅಮರನಾಥ
ಅಧ್ಯಕ್ಷ, ಚಿನ್ನಾಭರಣ ವರ್ತಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.