ADVERTISEMENT

‘ಜಲಾಶಯ ಇದ್ದರೂ ಕುಡಿಯಲು ನೀರಿಲ್ಲ’

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ ಟೀಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 12:08 IST
Last Updated 31 ಡಿಸೆಂಬರ್ 2017, 12:08 IST

ಸರಗೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುತ್ತಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ ಟೀಕಿಸಿದರು.

ಪಟ್ಟಣದ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ಮತಗಟ್ಟೆ ನವಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಗುಜರಾತ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನರ್ಮದಾ ಅಣೆಕಟ್ಟಿನಿಂದ 11 ಸಾವಿರ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಿದ್ದಾರೆ. ಅಚ್ಚುಕಟ್ಟು ಪ್ರದೇಶಗಳಿಗೂ ನೀರು ನೀಡಿದ್ದಾರೆ. ಆದರೆ, ತಾಲ್ಲೂಕಿನಲ್ಲಿ 4 ಜಲಾಶಯಗಳಿದ್ದರೂ 284 ಹಳ್ಳಿಗಳ ಪೈಕಿ 120ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ನಾಚಿಕೆಗೇಡಿನ ಸಂಗತಿ ಎಂದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರು ಇರುವ ಕಡೆ ಯಾತ್ರೆ ನಡೆಸುತ್ತಿದ್ದರೆ, ಪಕ್ಷದ ಶಾಸಕರು ಇಲ್ಲದ ಕಡೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಯಾತ್ರೆ ಮಾಡುತ್ತಿದ್ದಾರೆ. ಎಲ್ಲೂ ಒಂದೇ ಪಕ್ಷ ಎರಡು ಯಾತ್ರೆ ನಡೆಸಿದ ನಿದರ್ಶನ ಇಲ್ಲ. ಇನ್ನೂ ಜೆಡಿಎಸ್ ಆರಂಭಿಸಿದ ಕುಮಾರಸ್ವಾಮಿ ರಥಯಾತ್ರೆ ಅರ್ಧದಲ್ಲೇ ನಿಂತಿದೆ. ಇಂಥವರಿಗೆ ಮತ ನೀಡಿದರೆ ನಿಜವಾಗಿಯೂ ರಾಜ್ಯ ಆಳುತ್ತಾರೆಯೇ ಎಂದು ಪ್ರಶ್ನಿಸಿದರು.

ಪಕ್ಷದ ಮುಖಂಡರು ಮತದಾರರ ಮನೆಗೆ ಹೋಗಲು ಸಾಧ್ಯವಿಲ್ಲ. ಇಂಥ ವೇಳೆ ಕಾರ್ಯಕರ್ತರು ಸಹಕರಿಸಬೇಕು. ಮುಂದಿನ 100 ದಿನ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಮಾತನಾಡಿ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಹೊಸ ತಾಲ್ಲೂಕುಗಳ ಪಟ್ಟಿಯಲ್ಲಿ ಸರಗೂರು ಸೇರಿಸಿದ್ದರು. ಆದರೆ, ಘೋಷಣೆ ಮಾಡಲು ಕಾಂಗ್ರೆಸ್ ಸರ್ಕಾರ 4 ವರ್ಷ ತೆಗೆದುಕೊಂಡಿದೆ ಎಂದು ತಿಳಿಸಿದರು.

ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಶಿವಣ್ಣ, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ.ಗಿರೀಶ್, ತಾಲ್ಲೂಕಿನ ಚುನಾವಣಾ ಉಸ್ತುವಾರಿ ಗಣೇಶ್ ಕಾರ್ಣಿಕ್, ವಿಭಾಗ ಸಂಘಟನಾ ಸಹ ಉಸ್ತುವಾರಿ ಎನ್.ವಿ.ಪಣೀಶ್, ಮುಖಂಡರಾದ ಡಾ.ಎಚ್.ವಿ.ಕೃಷ್ಣಸ್ವಾಮಿ, ಎಂ.ಜಿ.ರಾಮಕೃಷ್ಣಪ್ಪ, ಸಿದ್ದನಾಯಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಜಿಲ್ಲಾ ಪಂ ಸದಸ್ಯ ವೆಂಕಟಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರೀಕ್ಷೀತ್ ರಾಜೇ ಅರಸ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ರಾಜ್, ಸುರೇಶ್ ಬಾಬು, ಜಿಲ್ಲಾ ಯುವ ಮೋರ್ಚಾದ ವಿಜಯ್ ಕುಮಾರ್, ಸರಗೂರು ಪಟ್ಟಣದ ಅಧ್ಯಕ್ಷ ವಿನಯ್, ಸರಗೂರು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮನಾಯಕ, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.