ADVERTISEMENT

ಡಿಎಲ್‌, ವಾಹನ ನೋಂದಣಿ ಶುಲ್ಕ ಪರಿಷ್ಕರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 8:29 IST
Last Updated 12 ಜನವರಿ 2017, 8:29 IST

ಮೈಸೂರು: ವಾಹನ ಕಲಿಕಾ ಪರವಾನಗಿ (ಎಲ್‌ಎಲ್‌ಆರ್‌), ಚಾಲನಾ ಪರವಾನಗಿ (ಡಿಎಲ್‌) ಹಾಗೂ ವಾಹನ ನೋಂದಣಿ ಸೇರಿ ವಿವಿಧ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಯ ಕ್ರಮವನ್ನು ಖಂಡಿಸಿ ಜಿಲ್ಲಾ ಮೋಟಾರು ವಾಹನ ಮಾಲೀಕರ ಸಂಘ ಹಾಗೂ ಸಂಯುಕ್ತ ಕರ್ನಾಟಕ ಆಟೊ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆಗಳು ನಡೆದವು.

ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿ ಎದುರು ಜಮಾಯಿಸಿದ ಜಿಲ್ಲಾ ಮೋಟಾರು ವಾಹನ ಪ್ರಾಂಶುಪಾಲರ ಹಾಗೂ  ಮಾಲೀಕರ ಸಂಘದ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪರಿಷ್ಕೃತ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದರು.

₹ 30 ಇದ್ದ ಎಲ್‌ಎಲ್‌ಆರ್‌ ಶುಲ್ಕ ₹ 200ಕ್ಕೆ, ಡಿಎಲ್‌ ಶುಲ್ಕ ₹ 250ರಿಂದ ₹ 700ಕ್ಕೆ ಏರಿಕೆಯಾಗಿದೆ. ವಾಹನ ನೋಂದಣಿ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಲಾರಿ, ಬಸ್‌ ಸೇರಿ ಭಾರಿ ವಾಹನ ಸಾಲ ನೋಂದಣಿ ಶುಲ್ಕವನ್ನು ₹ 3 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಶುಲ್ಕದಲ್ಲಿ ಭಾರಿ ಬದಲಾವಣೆ ಆಗಿರುವುದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯೆ ಶಮೀನಾ ಜಬೀನ್‌, ಆನಂದ್‌, ವೀಣಾ, ದೀಪಕ್‌, ಸಮೀರ್‌, ರಾಜು ಧರಣಿಯ ನೇತೃತ್ವ ವಹಿಸಿದ್ದರು.

ರಾಜು ಕಾಗೆ ಬಂಧನಕ್ಕೆ ಆಗ್ರಹ
ಯುವಕನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ ಬೆಳಗಾವಿಯ ಬಿಜೆಪಿ ಶಾಸಕ ರಾಜು ಕಾಗೆ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಾಗರಿಕ ಹಕ್ಕು ರಕ್ಷಣಾ ಸಮಿತಿ ಕಾರ್ಯಕರ್ತರು ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿಯ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಶಾಸಕ ರಾಜು ಕಾಗೆ ಕುಟುಂಬ ಕ್ಷೇತ್ರದ ಜನತೆಯ ಮೇಲೆ ದೌರ್ಜನ್ಯ ನಡೆಸುತ್ತಿದೆ. 2008ರಲ್ಲಿ ಮೋಹನಕುಮಾರ್‌ ಎಂಬುವರ ಮೇಲೆಯೂ ಹಲ್ಲೆ ನಡೆಸಲಾಗಿತ್ತು. ರಾಜಕೀಯ ಪ್ರಭಾವ ಬಳಸಿ ಈ ಪ್ರಕರಣವನ್ನು ಮುಚ್ಚಿಹಾಕಲಾಗಿದೆ. ಈ ಪ್ರಕರಣವೂ ಮುಚ್ಚಿಹೋಗದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷರಾದ ಜಿ.ತಾರಾ, ಜಿಲ್ಲಾ ಘಟಕದ ಅಧ್ಯಕ್ಷ ರವಿಚಂದ್ರ, ಮೋಹನ್‌ಕುಮಾರ್‌ ಇದ್ದರು.

ಲಂಚ ಕೇಳಿದರೆ ಏಟು...
ಮೈಸೂರು:
‘ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ನಡೆಯುದಿಲ್ಲ. ಹಲವು ಸೇವೆಗಳ ಶುಲ್ಕ ಹೆಚ್ಚಿಸಿದ್ದರಿಂದ ಜನ ಆಕ್ರೋಶಗೊಂಡಿದ್ದಾರೆ. ಲಂಚವನ್ನೂ ಕೇಳಿದರೆ ಕಚೇರಿಗೆ ನುಗ್ಗಿ ಹೊಡೆಯುತ್ತಾರೆ’ ಎಂದು ಶಾಸಕ ಎಂ.ಕೆ.ಸೋಮಶೇಖರ್‌ ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಲು ಧರಣಿ ಸ್ಥಳಕ್ಕೆ ಬಂದಿದ್ದ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಟಿ.ಮೂರ್ತಿ ಅವರಿಗೆ ಶಾಸಕರು ತಾಕೀತು ಮಾಡುತ್ತಿದ್ದಂತೆ ಎಲ್ಲರೂ ಚಪ್ಪಾಳೆ ತಟ್ಟಿ ಸಹಮತ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಶುಲ್ಕ ಏರಿಕೆಗೆ ಅನುಸರಿಸಿದ ಮಾನದಂಡ ಅವೈಜ್ಞಾನಿಕವಾಗಿದೆ. ಇಷ್ಟು ದಿನ ಜನರು ಇದನ್ನು (ಲಂಚ) ಅನುಸರಿಸಿಕೊಂಡು ಹೋಗುತ್ತಿದ್ದರು. ಇನ್ನು ಮುಂದೆ ಇದು ಸಾಧ್ಯವಿಲ್ಲ. ಲಂಚ ಮುಟ್ಟದೆ ಮರ್ಯಾದೆಯಿಂದ ಕೆಲಸ ಮಾಡಿ’ ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT