ADVERTISEMENT

ತಾಪಮಾನ 35 ಡಿಗ್ರಿಗೆ ಏರಿಕೆ ಸಾಧ್ಯತೆ

ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳ ಇಂಗಿತ

ನೇಸರ ಕಾಡನಕುಪ್ಪೆ
Published 20 ಫೆಬ್ರುವರಿ 2017, 7:40 IST
Last Updated 20 ಫೆಬ್ರುವರಿ 2017, 7:40 IST

ಮೈಸೂರು: ಮೈಸೂರು ಭಾಗದಲ್ಲಿ ಬಿಸಿಲಿನ ಝಳ ಭುಗಿಲೆದ್ದಿದೆ. ಸಾಮಾನ್ಯವಾಗಿ ಏಪ್ರಿಲ್‌ ನಂತರ ಇರುತ್ತಿದ್ದ ತೀವ್ರ ಸೆಖೆ ಫೆಬ್ರುವರಿ ತಿಂಗಳಲ್ಲೇ ಕಾಣಿಸಿಕೊಂಡಿದೆ. ತಿಂಗಳ ಅತ್ಯಂಕ್ಕೆ 35 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಹೆಚ್ಚುವ ಸ್ಪಷ್ಟ ಲಕ್ಷಣಗಳು ಗೋಚರಿಸಿ ಆತಂಕ ಮೂಡಿಸಿದೆ.

ಅಲ್ಲದೇ, ಇದರ ಲಾಭ ತಂಪು ಪಾನೀಯ ಮಾರುವ ವರ್ತಕರಿಗೆ ಆಗಿದೆ. ತಾಜಾ ಹಣ್ಣಿನ ರಸ ಮಾರುವ ಅಂಗಡಿ ಗಳಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಸೇರುತ್ತಿದ್ದಾರೆ. ಎಳನೀರು, ಜ್ಯೂಸ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಮೂಡಿದೆ.

ಮನೆಯಿಂದ ಆಚೆ ಬರುತ್ತಿಲ್ಲ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಸಿಲ ಝಳ ತಡೆಯಲಾಗದೇ ಜನರು ಮನೆಯೊಳಗೇ ಉಳಿಯುತ್ತಾರೆ. ಆದರೆ, ಇದೀಗ ಬಿಸಿಲು ತೀವ್ರ ಹೆಚ್ಚಾಗಿರುವ ಕಾರಣ, ಜನರು ಮನೆಯಿಂದ ಆಚೆ ಬಾರಲು ಹಿಂದೇಟು ಹಾಕುತ್ತಿದ್ದಾರೆ.

ಹೇಗಿದೆ ಶಾಖ?: ತಿಂಗಳ ಆರಂಭ ದಲ್ಲಿಯೇ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಅಲ್ಲದೇ, ತಿಂಗಳ ಅಂತ್ಯದಲ್ಲಿ 35ಕ್ಕೂ ಹೆಚ್ಚು ತಾಪ ಮಾನ ದಾಖಲಾಗಲಿದೆ ಎಂಬ ಆತಂಕ ಕಾರಿ ಮಾಹಿತಿಯನ್ನೂ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ನೀಡಿದ್ದಾರೆ.

ಕಾರಣವೇನು?: 2016ರಲ್ಲಿ ಮೈಸೂರಿ ನಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವು ದಾಖಲಾಗಿತ್ತು. ಅಲ್ಲದೇ, ಮೈಸೂರು ಭಾಗದಲ್ಲಿ 2016ರಲ್ಲಿ ಮಳೆ ಅಗತ್ಯ ಪ್ರಮಾಣದಲ್ಲಿ ಬಾರದ ಕಾರಣ ನೆಲ ಒಣಗಿದೆ, ಕೆರೆಗಳು ಬರಿದಾಗಿವೆ. ಅಂತರ್ಜಲವೂ ತಳಕಚ್ಚಿದೆ. ಇದೇ ಈ ಭಾಗದಲ್ಲಿ ಉಷ್ಣಾಂಶ ಹೆಚ್ಚಾಗಲು ಮುಖ್ಯ ಕಾರಣ ಎಂದು ಅಧಿಕಾರಿಗಳು ವ್ಯಾಖ್ಯಾನಿಸಿದ್ದಾರೆ.

ತೀವ್ರ ಮಳೆಯ ಕೊರತೆಯಿಂದಾಗಿ ಕಂಗಾಲಾಗಿದ್ದ ಜಿಲ್ಲೆಯ ಜನರಿಗೆ ಸುಡುಬಿಸಿಲು ಕಾಡುತ್ತಿದೆ. ಸಾಮಾನ್ಯವಾಗಿ ಈ ತಿಂಗಳಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುತ್ತಿತ್ತು. ಆದರೆ, ಈ ವರ್ಷ ಈಗಾಗಲೇ ಗರಿಷ್ಠ 33 ಡಿಗ್ರಿ ತಾಪಮಾನ ದಾಖಲಾಗಿದ್ದು, ತಿಂಗಳ ಅಂತ್ಯದಲ್ಲಿ 35 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ ಹೆಚ್ಚಿದೆ.

ಕಳೆದ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿರು ವುದರಿಂದ ಈ ಸಾಲಿನಲ್ಲಿ ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆಯಿದೆ. ಇದರಿಂದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಮಳೆ ಬಂದರೆ ತಾಪಮಾನ ಇಳಿಕೆಯಾಗಲಿದೆ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ  ಸಿ.ಗೋವಿಂದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ತಿಂಗಳ ಮುಂಚಿತವಾಗಿಯೇ ತಾಪಮಾನ ಏರುವ ಸೂಚನೆ ತೋರಿ ಸಿದೆ. ಅಂದರೆ, ಮಾರ್ಚ್‌ನಲ್ಲಿ ಇರುವ ತಾಪಮಾನ ಫೆಬ್ರುವರಿಯಲ್ಲೇ, ಏಪ್ರಿಲ್‌ ನಲ್ಲಿ ಇರುವ ತಾಪಮಾನ ಮಾರ್ಚ್‌ನಲ್ಲೇ ಇರಲಿದೆ. ಈ ರೀತಿ ತಾಪಮಾನ ಏರಿಕೆ ಈ ಹಿಂದಿನ ನಾಲ್ಕೈದು ವರ್ಷಗಳ ಪರಿಸರ ವೈಪರೀತ್ಯಗಳೇ ಕಾರಣ ಎಂದು ಅವರು ಮಾಹಿತಿ ನೀಡಿದರು.

ತಂಪು ಪಾನೀಯದ ಮೊರೆ: ಇದರ ಪರಿ ಣಾಮ ಈಗಾಗಲೇ ನಾಗರಿಕರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ಇರುವ ಜ್ಯೂಸ್‌ ಸೆಂಟರ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಕಲ್ಲಂಗಡಿ ಹಣ್ಣನ್ನು ತಿನ್ನುವ ಮೂಲಕ ಬಿಸಿಲಿನ ಝಳದಿಂದ ಮುಕ್ತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಎಳನೀರು ಸೇವನೆಯೂ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.