ADVERTISEMENT

ತ್ಯಾಜ್ಯಕ್ಕೆ ಬೆಂಕಿ: ಆತಂಕ ಸೃಷ್ಟಿಸಿದ ಹೊಗೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 11:33 IST
Last Updated 23 ಜನವರಿ 2017, 11:33 IST
ತ್ಯಾಜ್ಯಕ್ಕೆ ಬೆಂಕಿ: ಆತಂಕ ಸೃಷ್ಟಿಸಿದ ಹೊಗೆ
ತ್ಯಾಜ್ಯಕ್ಕೆ ಬೆಂಕಿ: ಆತಂಕ ಸೃಷ್ಟಿಸಿದ ಹೊಗೆ   

ಮೈಸೂರು: ಇಲ್ಲಿನ ಬನ್ನಿಮಂಟಪದ ರಾಯಲ್‌ ಫಂಕ್ಷನ್‌ ಹಾಲ್‌ ಪಕ್ಕದ ಬಯಲು ಪ್ರದೇಶದಲ್ಲಿನ ಪ್ಲಾಸ್ಟಿಕ್‌ ಗುಜರಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ನಾಲ್ಕು ಗಂಟೆ ಹೊತ್ತಿ ಉರಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಆಕಾಶದೆತ್ತರಕ್ಕೆ ವ್ಯಾಪಿಸಿದ ದಟ್ಟ ಹೊಗೆ ಸುತ್ತಲಿನ ಪ್ರದೇಶದ ಜನತೆಯಲ್ಲಿ ಭೀತಿ ಸೃಷ್ಟಿಸಿತ್ತು. ಸುಮಾರು ಅರ್ಧ ಎಕರೆ ಪ್ರದೇಶದಲ್ಲಿದ್ದ ಪ್ಲಾಸ್ಟಿಕ್‌ ತ್ಯಾಜ್ಯ ಬೆಂಕಿಗೆ ಆಹುತಿಯಾಗಿದೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಸತತ ನಾಲ್ಕೂವರೆ ಗಂಟೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. 9 ವಾಹನಗಳಿಂದ 27 ಟ್ಯಾಂಕರ್‌ ನೀರು ಸುರಿಯಲಾಯಿತು. ಸುಮಾರು 500 ಲೀಟರ್‌ ರಸಾಯನಿಕ ಫೋಮ್‌ ಸಿಂಪಡಿಸಿ ಬೆಂಕಿ ನಂದಿಸಲಾಯಿತು. ಕಾರ್ಯಾಚರಣೆ ವೇಳೆ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.

ತ್ಯಾಜ್ಯ ವಿಂಗಡಣೆ ಘಟಕ: ರಾಯಲ್‌ ಫಂಕ್ಷನ್‌ ಸಭಾಂಗಣದ ಪಕ್ಕದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಲಾಗಿತ್ತು. ಆಹಾರ ಪದಾರ್ಥ ಪ್ಯಾಕಿಂಗ್‌ಗೆ ಬಳಸಿದ ಪ್ಲಾಸ್ಟಿಕ್‌ ಕವರ್‌ಗಳನ್ನು ತ್ಯಾಜ್ಯದಿಂದ ವಿಂಗಡಣೆ ಮಾಡುವ ಕಾರ್ಯ ಇಲ್ಲಿ ನಡೆಯುತ್ತಿತ್ತು. ಭಾನುವಾರ ಸಂಜೆ 4.15ರ ಸುಮಾರಿಗೆ ಆಕಸ್ಮಿಕವಾಗಿ ಪ್ಲಾಸ್ಟಿಕ್‌ಗೆ ಬೆಂಕಿ ಬಿದ್ದಿದೆ.

‘ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಬಿದ್ದಿದ್ದ ಬೆಂಕಿಯನ್ನು ನೆರೆಹೊರೆಯವರು ಗಂಭೀರವಾಗಿ ಪರಿಗಣಿಸಿಲ್ಲ. ಒಂದೂ ವರೆ ಗಂಟೆ ತಡವಾಗಿ ಅಗ್ನಿಶಾಮಕ ಠಾಣೆಗೆ ಮಾಹಿತಿ ಸಿಕ್ಕಿತು. ಬನ್ನಿ ಮಂಟಪ, ಹೆಬ್ಬಾಳ ಹಾಗೂ ಸರಸ್ವತಿ ಪುರಂ ಅಗ್ನಿಶಾಮಕ ಠಾಣೆಯ 9 ವಾಹನಗಳೊಂದಿಗೆ 45 ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾ ಚರಣೆ ನಡೆಸಿದೆವು.ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿ ಹತೋಟಿಗೆ ಬರುವುದು ವಿಳಂಬವಾಯಿತು’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್‌ ತಿಳಿಸಿದರು.

ತಪ್ಪಿದ ಅನಾಹುತ: ಫಂಕ್ಷನ್‌ ಹಾಲ್‌ ನಲ್ಲಿ ವಿವಾಹ ಸಮಾರಂಭ ನಿಗದಿಯಾ ಗಿತ್ತು. ಬೆಂಕಿ ನಿಯಂತ್ರಣಕ್ಕೆ ಬಾರದ ಪರಿಣಾಮ ಹಾಗೂ ದಟ್ಟಹೊಗೆ ಮೂಡಿಸಿದ ಆತಂಕದಿಂದ ಮದುವೆ ಯನ್ನು ಮತ್ತೊಂದು ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಯಿತು.

20 ಅಡಿ ದೂರದಲ್ಲಿ ಹೈಟೆನ್ಷೆನ್‌ ವಿದ್ಯುತ್ ತಂತಿಗಳು ಹಾದುಹೋಗಿವೆ. ಗಾಳಿ ದಕ್ಷಿಣಾಭಿಮುಖವಾಗಿ ಬೀಸಿದ್ದ ರಿಂದ ಬೆಂಕಿ ತಂತಿಗೆ ತಾಗಲಿಲ್ಲ. ಸಮೀಪ ದಲ್ಲೇ ಇದ್ದ ಬಾಲಾಜಿ ರಸಗೊಬ್ಬರ ಗೋದಾಮಿಗೂ ಬೆಂಕಿಯ ಕೆನ್ನಾಲಿಗೆ ಚಾಚದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊ ಳ್ಳಲಾಯಿತು. ಸಮೀಪದ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಯಿತು. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಈಶ್ವರನಾಯ್ಕ್‌, ಅಗ್ನಿಶಾಮಕ ಅಧಿಕಾರಿ ಭರತ್‌ಕುಮಾರ್‌, ಠಾಣಾಧಿಕಾರಿ ನಾಗರಾಜ್‌ ಅರಸು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.