ADVERTISEMENT

ನಿತŀ ಸಾವಿರಾರು ಲೀಟರ್ ನೀರು ಮಾರಾಟ

ವಾಣಿವಿಲಾಸ ನೀರು ಸರಬರಾಜು ಕೇಂದ್ರ; ನಿರ್ಬಂಧ ವಿಧಿಸದಿದ್ದರೆ ಅಭಾವ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 10:01 IST
Last Updated 11 ಜನವರಿ 2017, 10:01 IST

ಮೈಸೂರು: ಇಲ್ಲಿನ ವಾಣಿವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ನಿತ್ಯ ಕನಿಷ್ಠ 12 ಟ್ಯಾಂಕರ್‌ಗಳು ಸಾವಿರಾರು ಲೀಟರ್‌ ನೀರನ್ನು ಖರೀದಿಸುತ್ತಿವೆ. ಇದರ ಮೇಲೆ ನಿರ್ಬಂಧ ವಿಧಿಸದೆ ಹೋದರೆ ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಆತಂಕ ವ್ಯಕ್ತವಾಗಿದೆ.

8 ಸಾವಿರ ಲೀಟರ್‌ಗೆ ₹ 200 ಹಾಗೂ 12 ಸಾವಿರ ಲೀಟರ್‌ಗೆ ₹ 400 ದರ ನಿಗದಿಪಡಿಸಲಾಗಿದೆ. ಈ ದರವನ್ನು ಪಾವತಿಸಿ ಖಾಸಗಿ ಸಂಸ್ಥೆಗಳು ತಮ್ಮದೇ ಟ್ಯಾಂಕರ್‌ಗಳಲ್ಲಿ ಅಧಿಕ ದರಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿವೆ. ಯಾವುದೇ ಅಧಿಕಾರಿ ಈ ಕುರಿತು ಪ್ರಶ್ನಿಸಿದರೂ ನ್ಯಾಯಬದ್ದವಾಗಿ ಕಟ್ಟಿರುವ ₹ 200 ಹಾಗೂ ₹ 400ರ ರಸೀತಿ ತೋರಿಸುತ್ತಾರೆ. ಹೀಗಾಗಿ, ಕಡಿವಾಣ ಹಾಕುವುದು ದುಸ್ತರವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಸಾರ್ವಜನಿಕರು ಫೋನ್ ಮಾಡಿದರೆ ನೀರಿಲ್ಲ: ಸಾರ್ವಜನಿಕರು ಫೋನ್ ಮಾಡಿದರೆ ಕೇಂದ್ರವು ನೀರು ಪೂರೈಸುವುದಿಲ್ಲ. ಬದಲಿಗೆ, ಆ ಕೇಂದ್ರದ ಎಂಜಿನಿಯರ್, ನಿರ್ದಿಷ್ಟ ಬಡಾವಣೆಗೆ ನೀರು ಸರಬರಾಜು ಮಾಡಿಲ್ಲ. ಟ್ಯಾಂಕರ್ ನೀರನ್ನು ಸರಬರಾಜು ಮಾಡಬಹುದು ಎಂದು ಶಿಫಾರಸು ಮಾಡಿದರೆ ಮಾತ್ರ ಟ್ಯಾಂಕರ್ ನೀರನ್ನು ಸರಬರಾಜು ಮಾಡಲಾಗುತ್ತದೆ. ಹೀಗಾಗಿ, ಅನಿವಾರ್ಯವಾಗಿ ಸಾರ್ವಜನಿಕರೂ ಖಾಸಗಿ ಟ್ಯಾಂಕರ್‌ ನೀರನ್ನೇ ನೆಚ್ಚಿಕೊಂಡಿದ್ದಾರೆ.

ಅಕ್ರಮ ವ್ಯವಹಾರಕ್ಕೆ ತಡೆ!: ಹಣ ಪಾವತಿಸದೆ ನಸುಕಿನ ವೇಳೆಗೆ ಇಲ್ಲಿಂದ ಅಕ್ರಮವಾಗಿ ನೀರನ್ನು ತುಂಬಿಸಿಕೊಂಡು ಟ್ಯಾಂಕರ್‌ಗಳಲ್ಲಿ ಕೆಲವು ವ್ಯಕ್ತಿಗಳು ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ಆನಂದ್, ಬೆಳ್ಳಂಬೆಳಿಗ್ಗೆ ಸ್ಥಳಕ್ಕೆ ಹೋಗಿ ಎರಡು ಟ್ಯಾಂಕರ್‌ಗಳನ್ನು ವಶಪಡಿಸಿ­ಕೊಂಡರು. ನಂತರ, ಒಂದಿಷ್ಟು ಅಕ್ರಮಕ್ಕೆ ತಡೆ ಬಿದ್ದಿದೆಯಾದರೂ ಶುಲ್ಕ ಪಾವತಿಸಿ ನೀರನ್ನು ಖರೀದಿಸುವ ದಂಧೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ.

ನಿಯಂತ್ರಣ ಕಷ್ಟ: ಈ ಕುರಿತು ಪ್ರತಿಕ್ರಿಯಿಸಿದ ಆನಂದ್, ‘ಕೆಲವು ಅಪಾರ್ಟ್‌ಮೆಂಟ್‌ಗಳಿಗೆ ಸಾಕಾಗುವಷ್ಟು ನೀರು ಪೂರೈಕೆಯಾಗುವುದಿಲ್ಲ. ಆಸ್ಪತ್ರೆ, ಖಾಸಗಿ ವಸತಿ ನಿಲಯಗಳು, ಪೇಯಿಂಗ್ ಗೆಸ್ಟ್‌ಗಳಿಗೆ ಟ್ಯಾಂಕರ್ ನೀರಿನ ಅವಶ್ಯ ಇರುತ್ತದೆ. ನೇರವಾಗಿ ಅವರೇ ಟ್ಯಾಂಕರ್ ಸಮೇತ ಬಂದು ಶುಲ್ಕ ಪಾವತಿಸಿ ನೀರು ತುಂಬಿ­ಕೊಂಡು ಹೋಗಬೇಕು. ಬಂದವರು ಕೊಡುವ ಕಾರಣ ನಿಜವೋ ಸುಳ್ಳೋ ಗೊತ್ತಾಗುವುದಿಲ್ಲ. ನಿಯಮದಂತೆ ಹಣ ಪಾವತಿಸಿ, ತುಂಬಿಸಿಕೊಂಡು ಹೋಗುತ್ತಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಹಳೆಯ ದರ: ನೀರು ಮಾರಾಟಕ್ಕೆ ವಿಧಿಸಿರುವ ದರವೂ ಅತ್ಯಂತ ಹಳೆಯದು. ಒಂದು ಲೀಟರ್ ನೀರನ್ನು ಶುದ್ದೀಕರಣ ಮಾಡಲು ₹ 8 ತಗಲುತ್ತದೆ ಎಂಬ ಹಳೆಯ ಲೆಕ್ಕಾಚಾರದ ಮಾದರಿಯಲ್ಲೇ ದರ ನಿಗದಿಯಾಗಿದೆ. ದರ ಹೆಚ್ಚು ಮಾಡಲು ಪಾಲಿಕೆಯ ಕೌನ್ಸಿಲ್ ಅನುಮತಿ ಅಗತ್ಯ ಇದೆ. ಅಧಿಕಾರಿಗಳೇ ಏಕಾಏಕಿ ದರವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು
ಅವರು ಹೇಳಿದರು.

ಕಳ್ಳರ ಮೇಲೆ ಹದ್ದಿನ ಕಣ್ಣು
ಮೈಸೂರು: ವಾಣಿವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ಅಕ್ರಮವಾಗಿ ನೀರನ್ನು ತೆಗೆದುಕೊಂಡು ಹೋಗುವವರ ವಿರುದ್ಧ ಶಿಸ್ತಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

    ಕೇಂದ್ರದಲ್ಲಿರುವ ಎಲ್ಲ 12 ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಿದ್ದು, ನಿತ್ಯ ಅದರ ಚಲನವಲನಗಳ ಮೇಲೆ ನಿಗಾ ವಹಿಸಿದ್ದಾರೆ. ಅಧಿಕಾರಿಗಳು, ಚಾಲಕರು ಅಕ್ರಮವಾಗಿ
ನೀರು ಕಳುಹಿಸದಂತೆ ಎಚ್ಚರವಹಿಸಿದ್ದು, ಅಕ್ರಮವಾಗಿ ನೀರು ತುಂಬಲಾಗುತ್ತಿದ್ದ ಎರಡು ಖಾಸಗಿ ಟ್ಯಾಂಕರ್‌ಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಆನಂದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT