ADVERTISEMENT

ಪಕ್ಷಿಧಾಮಗಳಲ್ಲಿ ‘ಹಕ್ಕಿ ಹಬ್ಬ’– ಸಚಿವ ರಮಾನಾಥ ರೈ

ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 9:05 IST
Last Updated 28 ಮಾರ್ಚ್ 2015, 9:05 IST
ಚಿತ್ರ ವೀಕ್ಷಿಸಿದ ಸಚಿವ
ಚಿತ್ರ ವೀಕ್ಷಿಸಿದ ಸಚಿವ   

ಶ್ರೀರಂಗಪಟ್ಟಣ: ರಾಜ್ಯದಲ್ಲಿರುವ 9 ಪ್ರಮುಖ ಪಕ್ಷಿಧಾಮಗಳಲ್ಲಿ ಮುಂದಿನ ವರ್ಷದಿಂದ ‘ಹಕ್ಕಿ ಹಬ್ಬ’ ಆಚರಿಸಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ಬಿ. ರಮಾನಾಥ ರೈ ತಿಳಿಸಿದರು.

ಇಲ್ಲಿಗೆ ಸಮೀಪದ ರಂಗನತಿಟ್ಟು ಪಕ್ಷಿಧಾಮದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಮತ್ತು ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿರುವ ಮೂರು ದಿನಗಳ ‘ಕರ್ನಾಟಕ ಹಕ್ಕಿ ಹಬ್ಬ’ವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ 520ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳಿದ್ದು, ಕೆಲವು ಅಳಿವಿನ ಅಂಚಿನಲ್ಲಿವೆ. ಮಾನವನ ದುರಾಸೆಯ ಫಲವಾಗಿ ಪಕ್ಷಿ ಮತ್ತು ಪ್ರಾಣಿ ಸಂಕುಲಕ್ಕೆ ಆಪತ್ತು ಎದುರಾಗಿದೆ. ಅವುಗಳನ್ನು ರಕ್ಷಿಸಬೇಕಾದರೆ ಜನ ಜಾಗೃತಿ ಮೂಡಿಸಬೇಕು ಎಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕ ವಿನಯ್‌ ಲೂತ್ರ ಮಾತನಾಡಿ, ಈ ‘ಹಕ್ಕಿ ಹಬ್ಬ’ ದಕ್ಷಿಣ ಭಾರತದಲ್ಲೇ ಮೊದಲು. ನಮ್ಮ ರಾಜ್ಯದಲ್ಲಿ ಕಾಣಸಿಗುವ ಪಕ್ಷಿಗಳ ಪೈಕಿ ಮೂರನೇ ಒಂದರಷ್ಟು ಪಕ್ಷಿಗಳು ವಿದೇಶಗಳಿಂದ ವಲಸೆ ಬರುತ್ತವೆ. ಗದಗ ಕೆರೆಗೆ ಅಪರೂಪದ ಗೀರು ಹೆಬ್ಬಾತು ಸಾವಿರಾರು ಕಿ.ಮೀ. ದೂರದಿಂದ ಬರುತ್ತದೆ. ಸಮುದ್ರಮಟ್ಟದಿಂದ 7 ಕಿ.ಮೀ. ಎತ್ತರದಲ್ಲಿ ಸತತ ಹಾರಾಟ ನಡೆಸುತ್ತದೆ. ವರ್ಷಕ್ಕೆ 80 ಸಾವಿರ ಕಿ.ಮೀ. ದೂರ ಕ್ರಮಿಸುವ ಹಕ್ಕಿಗಳೂ ಇವೆ. ರಂಗನತಿಟ್ಟು ಪಕ್ಷಿಧಾಮಕ್ಕೂ ವಿದೇಶಗಳಿಂದ ಕೆಲವು ಪಕ್ಷಿಗಳು ವಂಶಾಭಿವೃದ್ಧಿಗಾಗಿ ಬರುತ್ತವೆ. ರಾಜ್ಯದಲ್ಲಿ 406 ಹುಲಿ ಹಾಗೂ 6 ಸಾವಿರಕ್ಕೂ ಹೆಚ್ಚು ಆನೆಗಳು ಇರುವುದು ಗಣತಿಯಿಂದ ತಿಳಿದು ಬಂದಿದೆ ಎಂದು ಹೇಳಿದರು.

ಅರಣ್ಯ ಪಡೆ ಮುಖ್ಯಸ್ಥ ಜಿ.ವಿ. ಸುಗೂರ್‌ ಮಾತನಾಡಿ, ಗುಬ್ಬಚ್ಚಿಗಳು ಈಗ ಹುಡುಕಿದರೂ ಸಿಗುತ್ತಿಲ್ಲ. ಪಕ್ಷಿಗಳನ್ನು ಉಳಿಸದಿದ್ದರೆ ಮುಂದಿನ ತಲೆಮಾರಿನ ಜನರು ಕಂಪ್ಯೂಟರ್‌ನಲ್ಲಿ ಅವುಗಳನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸದ ಸಿ.ಎಸ್‌. ಪುಟ್ಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.