ADVERTISEMENT

‘ಪದ್ಮಾವತಿ’ ಬಿಡುಗಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 5:36 IST
Last Updated 24 ನವೆಂಬರ್ 2017, 5:36 IST

ಮೈಸೂರು: ತೆರೆ ಕಾಣಲು ಸಜ್ಜಾಗಿರುವ ಹಿಂದಿ ಚಲನಚಿತ್ರ ‘ಪದ್ಮಾವತಿ’ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಮಹಾರಾಣ ಪ್ರತಾಪ ಸಿಂಗ್‌ ರಜಪೂತ ಕ್ಷತ್ರೀಯ ಸಮಾಜದ ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಕೋಟೆ ಆಂಜನೇಯಸ್ವಾಮಿ ದೇಗುಲದ ಎದುರು ಜಮಾಯಿಸಿದ ರಜಪೂತ ಸಮುದಾಯದ ಸದಸ್ಯರು, ಕೈಯಲ್ಲಿ ಭಾಗವಧ್ವಜ ಹಿಡಿದು ಸ್ವಾಭಿಮಾನಿ ಜಾಥಾ ಹೊರಟರು. ಗಾಂಧಿಚೌಕ, ಸಯ್ಯಾಜಿರಾವ್‌ ರಸ್ತೆ, ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ, ಮೆಟ್ರೊಪೋಲ್‌ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ವಿರುದ್ಧ ಘೋಷಣೆ ಕೂಗಿದರು.

ರಾಣಿ ಪದ್ಮಾವತಿ ಅವರು ರಾಜಸ್ತಾನದ ಚಿತ್ತೋರಗಡದ ರಾಜ ರತನ್‌ಸಿಂಗ್‌ ಅವರ ಧರ್ಮಪತ್ನಿ. ಜೀವಿತಾವಧಿಯಲ್ಲಿ ಶೌರ್ಯ, ಸಾಹಸ ಮೆರೆದು ಇಡೀ ದೇಶಕ್ಕೆ ಮನೆ ಮಾತಾಗಿದ್ದಾರೆ. ಇವರ ಬಗ್ಗೆ ಚಿತ್ರ ನಿರ್ಮಿಸುವುದು ಸ್ವಾಗತಾರ್ಹ. ಆದರೆ, ಅವರನ್ನು ಕೆಟ್ಟದಾಗಿ ಚಿತ್ರಿಸಿ ಪ್ರದರ್ಶನಕ್ಕೆ ಮುಂದಾಗಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಚಿತ್ರ ತೆರೆಕಂಡರೆ ಶತಮಾನಗಳಿಂದ ಬೇರೂರಿರುವ ಜನರ ನಂಬಿಕೆಗಳು ಬುಡಮೇಲಾಗುತ್ತವೆ. ಪದ್ಮಾವತಿ ಜೀವನಕ್ಕೂ ಕಳಂಕ ಅಂಟುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.