ADVERTISEMENT

ಪಾಲಿಕೆ ಸದಸ್ಯನ ವಿರುದ್ಧ ಪ್ರತಿಭಟನೆ; ದೂರು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 6:31 IST
Last Updated 13 ಏಪ್ರಿಲ್ 2017, 6:31 IST
ಪಾಲಿಕೆ ಸದಸ್ಯ ಬಿ.ಎಂ.ನಟರಾಜ್ ಅವರು ಅಭಿವೃದ್ಧಿ ಅಧಿಕಾರಿ ನಿಂಗಶೆಟ್ಟಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪಾಲಿಕೆ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು
ಪಾಲಿಕೆ ಸದಸ್ಯ ಬಿ.ಎಂ.ನಟರಾಜ್ ಅವರು ಅಭಿವೃದ್ಧಿ ಅಧಿಕಾರಿ ನಿಂಗಶೆಟ್ಟಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪಾಲಿಕೆ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು   

ಮೈಸೂರು: ಪಾಲಿಕೆಯ 57ನೇ ವಾರ್ಡಿನ ಸದಸ್ಯ ಬಿ.ಎಂ.ನಟರಾಜ್ ವಿರುದ್ಧ ಪಾಲಿಕೆ ಸಿಬ್ಬಂದಿ ಬುಧವಾರ ಪ್ರತಿಭಟನೆ ನಡೆಸಿದರು.ವಲಯ ಕಚೇರಿ 9ರ ಅಭಿವೃದ್ಧಿ ಅಧಿಕಾರಿ ನಿಂಗಶೆಟ್ಟಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪಾಲಿಕೆ ಸದಸ್ಯರಿಂದ ಇದೇ ರೀತಿ ಕಿರುಕುಳ ಮುಂದುವರಿದರೆ ಕರ್ತವ್ಯ ನಿರ್ವಹಿಸುವುದು ಅಸಾಧ್ಯ ಎಂದು ಕಿಡಿಕಾರಿದರು.

‘ಗೌರವ ನೀಡಿ, ಗೌರವ ಪಡೆದುಕೊಳ್ಳಿ’, ‘ಗೂಂಡಾಗಿರಿ ಬಿಡಿ’, ಎಂಬ ನಾಮಫಲಕಗಳನ್ನು ಹಿಡಿದ ಪ್ರತಿಭಟನಾಕಾರರು, ನಟರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.ಸ್ಥಳಕ್ಕೆ ಬಂದ ಮೇಯರ್ ಎಂ.ಜೆ.ರವಿಕುಮಾರ್, ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಏ. 15ರಂದು ಸಂಧಾನ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಯುಕ್ತ ಜಿ.ಜಗದೀಶ್, ‘ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಗೌರವ ಕೊಡಬೇಕು. ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ತಪ್ಪು. ಹಳೆಯ ಕೆಲಸಗಳಿಗೆ ಹೊಸ ಬಿಲ್ ಮಾಡಬಾರದು ಹಾಗೂ ಟೆಂಡರ್ ಕರೆಯದೇ ಯಾವುದೇ ಕಾಮಗಾರಿ ಕೈಗೊಳ್ಳ ಬಾರದು. ನಂಜನಗೂಡು ವಿಧಾನಸಭಾ ಉಪಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಸಮಸ್ಯೆ ಕುರಿತು ಚರ್ಚಿಸ ಲಾಗುವುದು’ ಎಂದು ಹೇಳಿದರು.

ADVERTISEMENT

ಏನಿದು ಪ್ರಕರಣ?: ವಲಯ ಕಚೇರಿ 9ರ ವ್ಯಾಪ್ತಿಗೆ ಬರುವ ಕಾವೇರಿ ರಸ್ತೆ ಅಭಿವೃದ್ಧಿ ಯೋಜನೆಗೆ ಮಂಜೂರಾತಿ ದೊರೆಯುವ ಮೊದಲೇ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದರು. ರಸ್ತೆಯನ್ನು ಅಗೆದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದರು. ಆಯುಕ್ತ ಜಿ.ಜಗದೀಶ್ ನಂಜನಗೂಡು ವಿಧಾನಸಭಾ ಉಪ ಚುನಾವಣಾ ಕಾರ್ಯದಲ್ಲಿ ನಿರತರಾಗಿ ರುವುದರಿಂದ ಅನುಮೋದನೆ ತಡವಾಗುತ್ತದೆ. ಚುನಾವಣಾ ನೀತಿಸಂಹಿತೆ ಇರುವುದರಿಂದ ಏನೂ ಮಾಡಲಾಗದು ಎಂದು ಅಭಿವೃದ್ಧಿ ಅಧಿಕಾರಿ ನಿಂಗಶೆಟ್ಟಿ ಹೇಳಿದ್ದಾರೆ. ಈ ಹಂತದಲ್ಲಿ ತರಾತುರಿಯಲ್ಲಿ ಕಾಮಗಾರಿಗೆ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿ ನಟರಾಜ್ ಅವರು ಅವಾಚ್ಯ ಶಬ್ಧಗಳನ್ನು ಪ್ರಯೋಗಿಸಿದರು. ಇದರಿಂದ ಮಾನಸಿಕ ಕಿರುಕುಳ ಉಂಟಾಗಿದೆ ಎಂದು ನಿಂಗಶೆಟ್ಟಿ ನಜರ್‌ಬಾದ್ ಠಾಣೆಗೆ ದೂರು ನೀಡಿದ್ದಾರೆ.

ಚಿದಾನಂದಮೂರ್ತಿ ವಿರುದ್ಧ ಪ್ರತಿಭಟನೆ  

ಮೈಸೂರು: ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಬೇರೆ ಬೇರೆ ಎಂಬ ಸಂಶೋಧಕ ಚಿದಾನಂದ ಮೂರ್ತಿ ಅವರ ಹೇಳಿಕೆ ವಿರುದ್ಧ ರಾಜ್ಯ ನೇಕಾರರ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ನ್ಯಾಯಾಲಯದ ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ. ಈ ಕುರಿತು ಸಾಕಷ್ಟು ಆಧಾರಗಳಿವೆ. ಆದರೆ, ಚಿದಾನಂದಮೂರ್ತಿ ಅವರು ಪ್ರತಿ ವರ್ಷ ದೇವರ ದಾಸಿಮಯ್ಯ ಜಯಂತಿ ಸಂದರ್ಭದಲ್ಲಿ ವಿವಾದವನ್ನು ಕೆದಕುತ್ತಲೇ ಇದ್ದಾರೆ. ಇದು ಸರಿಯಲ್ಲ ಎಂದು ಪ್ರತಿಭಟನಾ ನಿರತರು ಆಕ್ಷೇಪ ವ್ಯಕ್ತಪಡಿಸಿದರು.

1966ರಲ್ಲಿ ಇದೇ ಚಿದಾನಂದ ಮೂರ್ತಿ ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ. ಇವರ ಕಾಲ 1040 ಎಂದು ಹೇಳಿದ್ದರು. ಆದರೆ, ಈಗ ತಮ್ಮ ಹೇಳಿಕೆಯನ್ನೇ ಬದಲಿಸಿದ್ದಾರೆ. ಈ ಮೂಲಕ ಅವರ ಸಂಶೋಧನಾ ಸಾಮರ್ಥ್ಯವನ್ನೇ ಪ್ರಶ್ನಿಸುವಂತಾಗಿದೆ ಎಂದು ಹೇಳಿದರು.
ತನ್ವೀರ್‌ಸೇಠ್‌ ಹಲ್ಲೆ ಯತ್ನ;

ಪ್ರತಿಭಟನೆ

ಮೈಸೂರು: ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾದ ಸಚಿವ ತನ್ವಿರ್‌ಸೇಠ್ ಮೇಲಿನ ಹಲ್ಲೆ ಯತ್ನದ ವಿರುದ್ಧ ವಿವಿಧ ಸಂಘಟನೆಗಳು ಹಾಗೂ ಜೆನರ್ಮ್ ಫಲಾನುಭವಿಗಳು ಬುಧವಾರ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ದಲಿತರ ಏಳಿಗೆಗೆ ತನ್ವೀರ್‌ಸೇಠ್ ಶ್ರಮಿಸುತ್ತಿದ್ದಾರೆ. ಅವರ ತೇಜೋವಧೆ ಮಾಡಲೆಂದೇ ಕೆಲವರು ಅವರಿಗೆ ಹಲ್ಲೆ ನಡೆಸುವ ಯತ್ನಕ್ಕೆ ಮುಂದಾಗಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಗಾಂಧಿನಗರದ ಬುದ್ದ, ಬಸವ, ಅಂಬೇಡ್ಕರ್ ಸಂಘ, ಜೈ ಭೀಮ್ ಯುವಕರ ಸಂಘ, ಅಂಬೇಡ್ಕರ್ ಸ್ಫೋರ್ಟ್ಸ್ ಕ್ಲಬ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.