ADVERTISEMENT

ಪೂರ್ಣಯ್ಯ ಕಾಲುವೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 7:31 IST
Last Updated 4 ಸೆಪ್ಟೆಂಬರ್ 2017, 7:31 IST
ಪೂರ್ಣಯ್ಯ ಕಾಲುವೆ ಒತ್ತುವರಿ ತೆರವು
ಪೂರ್ಣಯ್ಯ ಕಾಲುವೆ ಒತ್ತುವರಿ ತೆರವು   

ಮೈಸೂರು: ಬೋಗಾದಿ ಗ್ರಾಮ ಬಳಿಯ ದಿವಾನ್ ಪೂರ್ಣಯ್ಯ ಕಾಲುವೆಯ ಏರಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ 7 ಮನೆಗಳನ್ನು ಜಿಲ್ಲಾಡಳಿತ ಭಾನುವಾರ ತೆರವುಗೊಳಿಸಿದೆ.

ಇಲ್ಲಿನ ಶಾರದಾನಗರ ರೈಲ್ವೆ ಬಡಾವಣೆ ಪಕ್ಕದಲ್ಲಿ ಸರ್ಕಾರಿ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿದ್ದನ್ನು ‘ಪ್ರಜಾವಾಣಿ‘ಯು ವರದಿ ಮಾಡಿತ್ತು. ಅಲ್ಲದೇ, ಇದೇ ಜಾಗದಲ್ಲಿ ಮತ್ತಷ್ಟು ಮನೆಗಳನ್ನು ಅಕ್ರಮವಾಗಿ ನಿರ್ಮಿಸಲು ನಡೆಯುತ್ತಿದ್ದ ಸಿದ್ಧತೆ ಕುರಿತು ಪ್ರಕಟಿಸಲಾಗಿತ್ತು.

‘ಪ್ರಜಾವಾಣಿ’ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತವು ಇದೀಗ ಒತ್ತುವರಿ ತೆರವುಗೊಳಿಸಿದೆ. ಜಿಲ್ಲಾಧಿಕಾರಿ ಡಿ.ರಂದೀಪ್‌ ಅವರ ಆದೇಶದ ಮೇರೆಗೆ ತಹಶೀಲ್ದಾರ್‌ ರಮೇಶ್ ಬಾಬು ಹಾಗೂ ತಂಡವು ಜೆಸಿಬಿ ಯಂತ್ರಗಳ ಸಹಾಯದಿಂದ ಕಟ್ಟಡಗಳನ್ನು ತೆರವುಗೊಳಿಸಿತು.

ADVERTISEMENT

15 ದಿನ ಸಿಕ್ಕಿದ್ದ ಕಾಲಾವಕಾಶ: ಇಲ್ಲಿ 7 ಮನೆಗಳನ್ನು 6 ತಿಂಗಳ ಹಿಂದೆಯೇ ಅಕ್ರಮವಾಗಿ ನಿರ್ಮಿಸಲಾಗಿತ್ತು. ಈ ಕುರಿತು ಇಲ್ಲಿನ ಸ್ಥಳೀಯರು ನಿರಂತರವಾಗಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ‘ಪ್ರಜಾವಾಣಿ’ಯೂ ಈ ಕುರಿತು ನಿರಂತರ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಹೊಸತಾಗಿ ಮನೆಗಳನ್ನು ನಿರ್ಮಿಸಲು ನಡೆಯುತ್ತಿದ್ದ ಸಿದ್ಧತೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿ, ನಿರ್ಮಾಣ ಸಾಮಗ್ರಿಗಳನ್ನೂ ತೆರವುಗೊಳಿಸಿತ್ತು. ಅಲ್ಲದೇ, ಹಿಂದೆ ನಿರ್ಮಿಸಲಾಗಿದ್ದ ಮನೆಗಳಲ್ಲಿ ಬಾಡಿಗೆಗೆ ಕುಟುಂಬಗಳು ವಾಸವಿದ್ದ ಕಾರಣ, ಆ ಕುಟುಂಬಗಳಿಗೆ ಖಾಲಿ ಮಾಡುವಂತೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು.

ಈ ನಡುವೆ, ಮನೆಯನ್ನು ನಿರ್ಮಿಸಿದ್ದ ವ್ಯಕ್ತಿಯು ಕಟ್ಟಡ ನೆಲಮಸಗೊಳಿಸದಂತೆ ತಡೆಯಾಜ್ಞೆ ಕೋರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತಡೆಯಾಜ್ಞೆ ನೀಡಲು ನ್ಯಾಯಾಲಯವು ತಿರಸ್ಕರಿಸಿದ್ದು, ಜಿಲ್ಲಾಡಳಿತವು ಭಾನುವಾರ ತೆರವು ಕಾರ್ಯಾಚರಣೆ ನಡೆಸಿತು.

ಕಾನೂನಿನಂತೆ ಕ್ರಮ
ಕಾನೂನಿನ ಪ್ರಕಾರ ನಾವು ಕ್ರಮ ತೆಗೆದುಕೊಂಡಿದ್ದೇವೆ. ಅಕ್ರಮವಾಗಿ ಕಟ್ಟಡಗಳ್ನು ನಿರ್ಮಿಸಕೂಡದು. ತೆರವು ಮಾಡದಂತೆ ತಡೆಯಾಜ್ಞೆ ಕೋರಿ ಕಟ್ಟಡದ ಮಾಲೀಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತಡೆಯಾಜ್ಞೆಯನ್ನು ನೀಡಲು ನ್ಯಾಯಾಲಯ ತಿರಸ್ಕರಿಸಿದ್ದು ತರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಲು ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಲಾಗುತ್ತಿದೆ. ನಂತರ ಸಮೀಕ್ಷೆ ನಡೆದು ತೆರವು ಕಾರ್ಯಾಚರಣೆಗೆ ಸಿದ್ಧತೆ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.