ADVERTISEMENT

ಪ್ರಾಣಕ್ಕೆ ಕಂಟಕವಾಗುವ ಅಪಘಾತ ವಲಯ

ಪೊಲೀಸ್‌ ಇಲಾಖೆಯಿಂದ ಸಮೀಕ್ಷೆ, 106 ವಲಯಗಳ ಗುರುತು; ರಸ್ತೆ ಸುರಕ್ಷತೆಗೆ ಪರಿಹಾರೋಪಾಯ

ಜಿ.ಬಿ.ನಾಗರಾಜ್
Published 3 ಮಾರ್ಚ್ 2017, 6:36 IST
Last Updated 3 ಮಾರ್ಚ್ 2017, 6:36 IST
ಪ್ರಾಣಕ್ಕೆ ಕಂಟಕವಾಗುವ ಅಪಘಾತ ವಲಯ
ಪ್ರಾಣಕ್ಕೆ ಕಂಟಕವಾಗುವ ಅಪಘಾತ ವಲಯ   

ಮೈಸೂರು: ಜಿಲ್ಲೆಯಲ್ಲಿ ಅಪಘಾತ ಸಂಭ ವಿಸುವ 106 ಸ್ಥಳಗಳನ್ನು ಗುರುತಿಸಿರುವ ಜಿಲ್ಲಾ ಪೊಲೀಸರು, ಅಪಘಾತ ತಡೆಗೆ ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.

ಅಪಘಾತಕ್ಕೆ ಪ್ರಮುಖ 12 ಕಾರಣ ಗಳನ್ನು ಪತ್ತೆಹಚ್ಚಲಾಗಿದೆ. ರಸ್ತೆ ಅಪಘಾತ ನಿಯಂತ್ರಣಕ್ಕೆ ಕೈಗೊಳ್ಳ ಬೇಕಾದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯ ಕುರಿತು ಪೊಲೀಸರು ಗಮನ ಸೆಳೆದಿದ್ದಾರೆ.

ಅ. 26ರ ಬೆಳಿಗ್ಗೆ 6.45ರಲ್ಲಿ ಹುಣಸೂರು ತಾಲ್ಲೂಕಿನ ಜಡಗನ ಕೊಪ್ಪಲು ಬಳಿ ಸಾರಿಗೆ ಬಸ್‌ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದರು. ಮಂಜು ಮುಸುಕಿದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್‌ಗೆ ಲಾರಿ ಡಿಕ್ಕಿ ಹೊಡೆದಿತ್ತು. ಈ ಘಟನೆಯ ಬಳಿಕ ಜಿಲ್ಲೆಯಲ್ಲಿರುವ ಅಪಘಾತ ವಲಯಗಳ ಸಮೀಕ್ಷೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ತಂಡವೊಂದನ್ನು ರಚಿಸಿದ್ದರು.

ಹೆಚ್ಚಿದ ವಾಹನ ದಟ್ಟಣೆ: ಮೂರು ರಾಷ್ಟ್ರೀಯ (212, 275, 150ಎ) ಹಾಗೂ 13 ರಾಜ್ಯ ಹೆದ್ದಾರಿಗಳು ಜಿಲ್ಲೆ ಯನ್ನು ಹಾದು ಹೋಗಿವೆ. ತಮಿಳು ನಾಡು, ಕೇರಳ ರಾಜ್ಯಗಳು ಜಿಲ್ಲೆ ಯೊಂದಿಗೆ ಸಂಪರ್ಕ ಬೆಸೆದಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಏರಿದೆ.

ಪ್ರಮುಖ ಬಹುರಾಷ್ಟ್ರೀಯ ಕಂಪೆನಿಗಳು ಮೈಸೂರಿನಲ್ಲಿದ್ದು, ರಫ್ತು ವಹಿವಾಟು ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ, ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಅಪಘಾತದ ಪ್ರಮಾಣವೂ ಏರುಗತಿಯಲ್ಲಿದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸ ಲಾಗಿದೆ.

ಕಬಿನಿ ಮತ್ತು ಕೆಆರ್ಎಸ್‌ ಜಲಾಶಯದ ಹಲವು ನಾಲೆಗಳು ಜಿಲ್ಲೆಯಲ್ಲಿವೆ. ಕೃಷಿ ಚಟುವಟಿಕೆಗೆ ಪೂರಕವಾಗಿ ನಿರ್ಮಿಸಿದ ನಾಲೆಗಳು ರಸ್ತೆಯ ಅಕ್ಕಪಕ್ಕದಲ್ಲಿಯೇ ಇವೆ. ರಾತ್ರಿ ವೇಳೆ ಸಂಚರಿಸುವ ವಾಹನ ಚಾಲಕರಿಗೆ ಸಣ್ಣ ಸೇತುವೆ, ನಾಲೆ ಕಣ್ಣಿಗೆ ಬೀಳುತ್ತಿಲ್ಲ. ಮಂಜು ಮುಸುಕಿದಾಗ ಹೆಚ್ಚಿನ ಅಪಘಾತ ಸಂಭವಿಸುತ್ತಿವೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ.

ಎಚ್.ಡಿ.ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲ್ಲೂಕು ಪಶ್ಚಿಮಘಟ್ಟದ ತಪ್ಪಲಿನಲ್ಲಿವೆ. ಇಲ್ಲಿನ ಭೌಗೋಳಿಕ ಪರಿಸರ ಗುಡ್ಡಗಾಡು ಪ್ರದೇಶದಿಂದ ಕೂಡಿದೆ. ಈ ತಾಲ್ಲೂಕಿನ ಬಹುತೇಕ ರಸ್ತೆಗಳು ಅಂಕು ಡೊಂಕಿನಿಂದ ಕೂಡಿವೆ. ಇಲ್ಲಿ ವಾಹನ ಚಾಲನೆ ಮಾಡುವಾಗ ಮೈಯಲ್ಲಾ ಕಣ್ಣಾಗಿರಬೇಕು. ತಿ.ನರಸೀಪುರ, ಮೈಸೂರು ಹಾಗೂ ನಂಜನಗೂಡು ತಾಲ್ಲೂಕಿನ ಬಹುತೇಕ ರಸ್ತೆಗಳು ತೀವ್ರ ತಿರುವಿನಿಂದ ಕೂಡಿವೆ ಎಂಬುದು ಬೆಳಕಿಗೆ ಬಂದಿದೆ.

ಅಪಾಯಕಾರಿ ಕೂಳಗಾಲ ಗೇಟ್‌: ಎಚ್.ಡಿ.ಕೋಟೆ ತಾಲ್ಲೂಕಿನ ಕೊಳಗಾಲ ಗೇಟ್‌ ಹೆಚ್ಚು ಅಪಾಯಕಾರಿ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ‘ಟಿ’ ಆಕಾರದ ಜಂಕ್ಷನ್‌ ಇರುವ ಇಲ್ಲಿ 16 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಸೋಲಾರ್ ಬ್ಲಿಂಕರ್‌ಗಳನ್ನು ಅಳವಡಿಸಿದರೆ ಈ ಪ್ರಮಾಣ ಕಡಿಮೆಯಾಗಲಿದೆ. ಕೋಟೆ ಪ್ಯಾಲೆಸ್ ಎದುರು ಹಾಗೂ ಕೊಡರಳಿ ಮರದ ಬಳಿ ತಲಾ 7, ಎಚ್‌.ಡಿ.ಕೋಟೆ–ಮೈಸೂರು ರಸ್ತೆಯ ಬೊಪ್ಪನಹಳ್ಳಿ ಗೇಟ್‌ ಬಳಿ 6 ಮಂದಿ ಮೃತಪಟ್ಟಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆ ಠಾಣೆ ವ್ಯಾಪ್ತಿಯ ಹಳೆಯೂರು ಗೇಟ್‌ ಬಳಿ 6, ತಿ.ನರಸೀಪುರದ ಹೊಸ ಸೇತುವೆ ಮೇಲೆ 7 ಮಂದಿ ಮೃತಪಟ್ಟಿದ್ದಾರೆ. ತಿರುವಿನಲ್ಲಿ ಸೇತುವೆ ಇರುವ ಕಾರಣಕ್ಕೆ ವೇಗ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಯನ ವರದಿ ಸೂಚಿಸಿದೆ.

*
ಸಾರಿಗೆ ಬಸ್‌ಗಳಿಂದ ಉಂಟಾದ ಅಪಘಾತಗಳೇ ಹೆಚ್ಚು. ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯಿಂದ ಇಂಥ ಅವಘಡ ಸಂಭವಿಸುತ್ತಿವೆ. ಕ್ರಿಯಾ ಯೋಜನೆ ಅನುಷ್ಠಾನಗೊಂಡರೆ ಅಪಘಾತಗಳು ನಿಯಂತ್ರಣಕ್ಕೆ ಬರಲಿವೆ
-ರವಿ ಡಿ.ಚನ್ನಣ್ಣನವರ,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.