ADVERTISEMENT

ಬಂಡಿ ಉತ್ಸವ; ದೇವಿಗೆ ಅವಭೃತ ಸ್ನಾನ

ಬನ್ನೂರು: ಹೇಮಾದ್ರಂಬ ಚೌಕ ಎಂದು ಕೂಗುತ್ತಾ ಸಾಗಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 9:11 IST
Last Updated 11 ಫೆಬ್ರುವರಿ 2017, 9:11 IST

ಬನ್ನೂರು: ಬಂಡಿ ಜಾತ್ರೆ ಅಂಗವಾಗಿ ಹೇಮಾದ್ರಂಬ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಮಾಕನ ಹಳ್ಳಿಯ ದೇವಿ ತೋಪಿಗೆ ಶುಕ್ರವಾರ ಸಂಭ್ರಮದಿಂದ ಕರೆದೊಯ್ದು, ಕಾವೇರಿ ಮಡುವಿನಲ್ಲಿ ಅವಭೃತ ಸ್ನಾನ ಮಾಡಿಸಲಾಯಿತು.

ಹೇಮಾದ್ರಂಬ ಚೌಕ ಎಂದು ಕೂಗುತ್ತಾ, ಬಣ್ಣ ಬಣ್ಣದ ರಂಗೋಲಿ ಹಾಕಿದ್ದ ಹಾದಿಯಲ್ಲಿ, ಭಕ್ತರು ಮಾಡುತ್ತಿದ್ದ ಪುಷ್ಪವೃಷ್ಟಿಯ ನಡುವೆ ಹೇಮಾದ್ರಂಬ ಉತ್ಸವ ಮೂರ್ತಿಯನ್ನು ದೇವಿತೋಪಿಗೆ ಕರೆದೊಯ್ಯಲಾಯಿತು.

ಇದಕ್ಕೂ ಮುನ್ನ ದೇವಾಲಯದಲ್ಲಿ ಜಮಾಯಿಸಿದ್ದ ನೂರಾರು ಭಕ್ತರು ಪೂಜೆ ಸಲ್ಲಿಸಿದರು. ಅಲ್ಲದೇ, ಹೆಬ್ಬರೆಗೆ ಪೂಜೆ ಸಲ್ಲಿಸಿ, ಅದರ ಜೊತೆಯಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ದೇವಿಗೆ ಸಮರ್ಪಿಸಿದ ಎಳನೀರನ್ನು ವಿತರಿಸಲಾಯಿತು.

ದೇವಿತೋಪಿನಲ್ಲಿ ಪೂಜೆ: ದೇವಿ ತೋಪಿಗೆ ಉತ್ಸವಮೂರ್ತಿ ಪ್ರವೇಶಿಸುತ್ತಿ ದ್ದಂತೆ, ಕಾವೇರಿ ಮಡುವಿನಲ್ಲಿ ನೆರೆದಿದ್ದ ಭಕ್ತರು ಜೈಕಾರ ಹಾಕಿ ಸ್ವಾಗತಿಸಿದರು.
ಅಲ್ಲಿ, ದೊಡ್ಡಕಟ್ಟಿಗೆಗೆ ಅಗ್ಗಿಷ್ಟಿಕೆಯನ್ನು ಹೊತ್ತಿಸಿ, ದೇವಿಗೆ ಅರ್ಪಿಸಲು ಪ್ರಸಾದವನ್ನು ಸಿದ್ಧಪಡಿಸಲಾಯಿತು. ಬಳಿಕ ದೇವಿಯನ್ನು ಕಾವೇರಿ ಮಡುವಿಗೆ ಕರೆದೊಯ್ದು ಅವಭೃತ ಸ್ನಾನ ಮಾಡಿಸಲಾಯಿತು.

ನಂತರ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಬಳಿಕ ಅನ್ನಸಂತರ್ಪಣೆ ಮಾಡಲಾಯಿತು.

ಜನ ಮನಸೂರೆಗೊಂಡ ಬಂಡಿ ಉತ್ಸವ: ಮಧ್ಯಾಹ್ನ ಬನ್ನೂರಿನ ಹೇಮಾದ್ರಿ ಚಿತ್ರಮಂದಿರದ ಸಮೀಪದಲ್ಲಿ ಬಂಡಿ ಉತ್ಸವ ನಡೆಯಿತು. ಬಂಡಿಗಳಿಗೆ ರಾಸುಗಳನ್ನು ಕಟ್ಟಿ ಒಬ್ಬರಿಗಿಂತ ಒಬ್ಬರು ವೇಗವಾಗಿ ಓಡಿಸಿ ಸಂಭ್ರಮಿಸಿದರು. ಈ ವೇಳೆ ಪ್ರೇಕ್ಷಕರು ಸಹ ಜೋರಾಗಿ ಕೂಗುತ್ತಾ ಉತ್ಸಾಹ ಹೆಚ್ಸಿಸಿದರು.

ಬಂಡಿ ಓಟವನ್ನು ನೋಡಲು ಸುತ್ತಮುತ್ತಲಿನ ಗ್ರಾಮದ ಬಂದಿದ್ದರು. ಅನೇಕರು ಮನೆಗಳ ಮೇಲೆ, ಮರಗಳ ಮೇಲೆ ಏರಿ ಬಂಡಿ ಓಟವನ್ನು ಆಸ್ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.