ADVERTISEMENT

ಬಡ್ತಿ ಮೀಸಲಿಗೆ ಒತ್ತಾಯಿಸಿ ತಮಟೆ ಚಳವಳಿ

ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:21 IST
Last Updated 23 ಮಾರ್ಚ್ 2017, 6:21 IST

ಮೈಸೂರು: ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌್ ನೀಡಿದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪುರಭವನದ ಮುಂಭಾಗದ ಅಂಬೇಡ್ಕರ್‌ ಪ್ರತಿಮೆಯ ಎದುರು ಬುಧವಾರ ತಮಟೆ ಚಳವಳಿ ನಡೆಸಿದರು.

ನ್ಯಾಯಾಲಯದ ಆದೇಶವನ್ನು ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸಿ ನೌಕರರನ್ನು ಇಕ್ಕಟ್ಟಿಗೆ ಸಿಲುಕಿಸಬಾರದು. ಇರುವ ಹುದ್ದೆಯಲ್ಲೇ ನೌಕರರನ್ನು ಮುಂದುವರಿಸಬೇಕು. ಬಡ್ತಿ ಮೀಸಲು ಸೌಲಭ್ಯವನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಶತಮಾನಗಳಿಂದ ದಲಿತರು ಶೋಷಣೆ ಅನುಭವಿಸಿದ್ದಾರೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಶೋಷಿತ ಸಮುದಾಯವನ್ನು ಮೇಲೆತ್ತುವ ಉದ್ದೇಶದಿಂದ ಡಾ.ಬಿ.ಆರ್‌.ಅಂಬೇ ಡ್ಕರ್‌ ಅವರು ಮೀಸಲಾತಿ ಸೌಲಭ್ಯ ಕಲ್ಪಿಸಿದ್ದಾರೆ. ಪ್ರಬಲ ಸಮುದಾಯಗಳ ನಡುವೆ ಸ್ಪರ್ಧಿಸಲು ಸಾಧ್ಯವಿಲ್ಲದ್ದರಿಂದ ಬಡ್ತಿ ಮೀಸಲಾತಿ ಸೌಲಭ್ಯ ನೀಡಲಾಗಿದೆ. ಇದನ್ನೂ ಕಿತ್ತುಕೊಂಡರೆ ದಲಿತರ ಏಳಿಗೆ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನವನ್ನು ಜಾರಿಗೆ ತರುವ ವ್ಯವಸ್ಥೆ ರೋಗಗ್ರಸ್ಥವಾಗಿದೆ. ಪುರೋಹಿತಶಾಹಿ ವ್ಯವಸ್ಥೆ ಇಂದಿಗೂ ಅಸಮಾನತೆ ಬಯಸುತ್ತಿದೆ. ರಾಜಕೀಯ ಪಕ್ಷಗಳಿಗೆ ಇಚ್ಛಾಶಕ್ತಿಯ ಕೊರತೆ ಕಾಡುತ್ತಿದೆ. ಕೇವಲ ಮತಬೇಟೆಗಾಗಿ ರಾಜಕೀಯ ಮಾಡುತ್ತಿವೆ. ಸಂವಿಧಾನವನ್ನೇ ಬುಡಮೇಲು ಮಾಡುವ ಷಡ್ಯಂತ್ರಗಳು ನಡೆಯುತ್ತಿವೆ ಎಂದರು.

ಸಮಿತಿಯ ವಿಭಾಗೀಯ ಸಂಚಾಲಕ ದೇವಗಳ್ಳಿ ಸೋಮಶೇಖರ್‌, ಜಿಲ್ಲಾ ಸಂಚಾಲಕ ರಾಜಶೇಖರ ಕೋಟೆ, ಸಂಘಟನಾ ಸಂಚಾಲಕ ಬೆಲವತ್ತ ರಾಮಚಂದ್ರ ಇದ್ದರು.

ವಿದ್ಯಾರ್ಥಿಗಳ ಧರಣಿ: ಮಹಿಳಾ ಅಧ್ಯಯನ ವಿಭಾಗಕ್ಕೆ ವರ್ಗಾವಣೆಗೊಂಡಿರುವ ಪ್ರೊ.ಎಸ್‌.ಎಂ.ಮಂಗಳಾ ಅವರನ್ನು ಅಭಿವೃದ್ಧಿ ಅಧ್ಯಯನ ಸಂಸ್ಥೆಯ ನಿರ್ದೇಶಕಿಯಾಗಿ ಮರುನೇಮಕ ಮಾಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಧರಣಿ ನಡೆಸಿದರು.

ಮಾನಸಗಂಗೋತ್ರಿಯ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಎದುರು ಜಮಾಯಿಸಿದ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ನಾಲ್ವರು ಬೋಧಕ ಸಿಬ್ಬಂದಿ ಇದ್ದಾರೆ. ಮಂಗಳಾ ಅವರನ್ನು ಹೊರತುಪಡಿಸಿ ಉಳಿದವರು ಅತಿಥಿ ಉಪನ್ಯಾಸಕರು. ಇವರ ವರ್ಗಾವಣೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ತುಳಸಿ ಮಾಲಾ ಅವರನ್ನು ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದರಿಂದ ಯಾವುದೇ ಪ್ರಯೋಜವಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.