ADVERTISEMENT

ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಸಿ.ಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 9:03 IST
Last Updated 21 ಮೇ 2017, 9:03 IST

ಮೈಸೂರು: ‘ಈ ಬಾರಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮುಂಗಾರು ಕೂಡ ಅವಧಿಗೆ ಮುನ್ನವೇ ಆರಂಭವಾಗಲಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಶಿಸ್ತಕ್ರಮ ಎದುರಿಸಬೇಕಾಗುತ್ತದೆ...’

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್‌ ಅವರಿಗೆ ಸಿ.ಎಂ ಸಿದ್ದರಾಮಯ್ಯ ನೀಡಿದ ಎಚ್ಚರಿಕೆ ಇದು. ಬಿತ್ತನೆ ಬೀಜಕ್ಕೆ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡದಂತೆಯೂ ಅವರು ಸೂಚನೆ ನೀಡಿದರು.

ಸರ್ಕಾರಿ ಅತಿಥಿಗೃಹದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್‌ ಮಾತನಾಡಿ, ‘ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 45ರಷ್ಟು ಹೆಚ್ಚುವರಿ ಮಳೆಯಾಗಿದೆ. ಸುಮಾರು 4 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ 1.77 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ’ ಎಂದರು.

ADVERTISEMENT

‘ಈಗ ಬೀಳುತ್ತಿರುವ ಮಳೆಯ ಹೆಸರೇನಾದರೂ ಗೊತ್ತೇ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು. ಅನಿರೀಕ್ಷಿತವಾಗಿ ಎದುರಾದ ಪ್ರಶ್ನೆಗೆ ಸಾವರಿಸಿಕೊಂಡ ಸೋಮಸುಂದರ್‌, ‘ಕೃತಿಕ ಮುಗಿದು ರೋಹಿಣಿ ಮಳೆ ಆರಂಭವಾಗಿದೆ’ ಎಂದರು.

‘ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರಿಗೆ ಬಿತ್ತನೆ ಮಾಡಲಾಗುತ್ತದೆ. ರೋಹಿಣಿ ಅಥವಾ ಆಶ್ಲೇಷ ಮಳೆಗೆ ರಾಗಿ ಬಿತ್ತನೆಯಾಗುತ್ತದೆ. ಆದರೆ, ನೀವು ನೀಡಿದ ಅಂಕಿ–ಅಂಶದಲ್ಲಿ ಈಗಾಗಲೇ ರಾಗಿ ಬಿತ್ತನೆಯಾಗಿದೆ ಎಂಬ ಮಾಹಿತಿ ಇದೆಯಲ್ಲ ಹೇಗೆ?’ ಎಂದು ಸಿದ್ದರಾಮಯ್ಯ ಅಧಿಕಾರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದರು.

‘ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಪರದಾಡುವಂತೆ ಆಗಬಾರದು. ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ದಾಸ್ತಾನು ಇಟ್ಟುಕೊಳ್ಳಬೇಕು. ಕೀಟನಾಶಕವನ್ನು ಸಮಯಕ್ಕೆ ಸರಿಯಾಗಿ ಪೂರೈಸಬೇಕು’ ಎಂದು ತಾಕೀತು ಮಾಡಿದರು.

ಪೈಪ್‌ಲೈನ್‌ ದುರಸ್ತಿಗೆ ಗಡುವು: ‘ಮೈಸೂರಿನ 65 ವಾರ್ಡ್‌ಗಳ ಪೈಕಿ 56 ವಾರ್ಡ್‌ಗಳಲ್ಲಿ ನಿತ್ಯವೂ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, 9 ವಾರ್ಡ್‌ಗಳಿಗೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ’ ಎಂಬ ಪಾಲಿಕೆಯ ಆಯುಕ್ತ ಜಿ.ಜಗದೀಶ್‌ ಅವರ ಮಾತಿಗೆ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು. ವಾಣಿ ವಿಲಾಸ ನೀರು ಸರಬರಾಜು ನಿಗಮದ ಮುಖ್ಯ ಎಂಜಿನಿಯರ್‌ ಜಯರಾಂ ಅವರನ್ನು ತರಾಟೆಗೆ ತೆಗೆದುಕೊಂಡರು.

‘ವಾರ್ಡ್‌ ವಿಂಗಡಣೆಯಾಗಿ 25 ವರ್ಷಗಳಾಗಿವೆ. ಇನ್ನೂ ಕೆಲವು ಬಡಾವಣೆಗಳಿಗೆ ನಿತ್ಯ ನೀರು ನೀಡಲು ಸಾಧ್ಯವಾಗುತ್ತಿಲ್ಲ ಎಂದರೆ ಹೇಗೆ? ನೂತನ ಪೈಪ್‌ಲೈನ್‌ ಹಾಕಲು ಇನ್ನೂ ಎಷ್ಟು ಸಮಯ ಬೇಕಾಗುತ್ತದೆ. ಮುಂದಿನ ಮಾರ್ಚ್‌ ವೇಳೆಗೆ ಕಾಮಗಾರಿ ಪೂರ್ಣಗೊಳಿಸದೆ ಇದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ರಮಾಬಾಯಿನಗರ ಹಾಗೂ ಮಹದೇವಪುರ ಬಡಾವಣೆ ನಗರ ದಲ್ಲಿದ್ದರೂ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿವೆ. ಕುಡಿಯವ ನೀರು ಇಲ್ಲದೆ ಸುಮಾರು 5 ಸಾವಿರ ಕುಟುಂಬ ಪರದಾಡುತ್ತಿವೆ. ಈ ಬಡಾವಣೆಗಳಿಗೆ ಪ್ರತ್ಯೇಕ ಯೋಜನೆಯೊಂದನ್ನು ರೂಪಿಸಬೇಕು’ ಎಂದು ಸೂಚಿಸಿದರು.

ಖಾತ್ರಿ ಯೋಜನೆ–ತರಾಟೆ: ‘ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಲ್ಲಿ ಕಳಪೆ ಸಾಧನೆ ತೋರಿದ್ದು ಏಕೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್‌ ಅವರನ್ನು ಪ್ರಶ್ನಿಸಿದರು.‘ರಾಮನಗರ ಮತ್ತು ಕೋಲಾರದಲ್ಲಿ ಖಾತ್ರಿ ಯೋಜನೆ ಉತ್ತಮವಾಗಿ ಅನುಷ್ಠಾನಗೊಂಡಿವೆ. ಆದರೆ, ಮೈಸೂರು ಜಿಲ್ಲೆ ರಾಜ್ಯದಲ್ಲಿ 8 ಸ್ಥಾನದಲ್ಲಿದೆ. ಇದರಲ್ಲಿ ಉಂಟಾದ ಸಮಸ್ಯೆಯಾದರೂ ಏನು’ ಎಂದು ಎಲ್ಲ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಎದುರಿಗೆ ಕರೆದು ಕೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಂಸದ ಆರ್‌.ಧ್ರುವನಾರಾಯಣ, ಶಾಸಕರಾದ ಜಿ.ಟಿ.ದೇವೇಗೌಡ, ಎಚ್‌.ಪಿ. ಮಂಜುನಾಥ್‌, ಎಂ.ಕೆ.ಸೋಮಶೇಖರ್‌, ಕಳಲೆ ಕೇಶವಮೂರ್ತಿ, ವರುಣಾ ಕ್ಷೇತ್ರದ ವಸತಿ ಯೋಜನೆಗಳ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ, ಪೊಲೀಸ್‌ ಕಮಿಷನರ್‌ ಡಾ.ಎ.ಸುಬ್ರಮಣ್ಯೇಶ್ವರ ರಾವ್‌, ಎಸ್ಪಿ ರವಿ ಡಿ.ಚನ್ನಣ್ಣನವರ ಇದ್ದರು.

* * 

7,970 ರೈತರಿಗೆ ಫಸಲ್‌ ಬಿಮಾ ಯೋಜನೆಯ ವಿಮೆ ಹಣ ವಿತರಣೆಯಾಗಬೇಕಿದೆ. ರೈತರಿಗೆ ಸರಿಯಾಗಿ ಸ್ಪಂದಿಸುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಲಾಗುವುದು
ಡಿ.ರಂದೀಪ್‌
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.