ADVERTISEMENT

ಬಿಸಿಲ ಧಗೆಯಲ್ಲೂ ಕುಗ್ಗದ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 7:27 IST
Last Updated 10 ಏಪ್ರಿಲ್ 2017, 7:27 IST
ಬಿಸಿಲ ಧಗೆಯಲ್ಲೂ ಕುಗ್ಗದ ಉತ್ಸಾಹ
ಬಿಸಿಲ ಧಗೆಯಲ್ಲೂ ಕುಗ್ಗದ ಉತ್ಸಾಹ   

ನಂಜನಗೂಡು: ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನಕ್ಕೆ ಬಿಸಿಲ ಧಗೆಯ ನಡುವೆಯೂ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬೆಳಗ್ಗೆ 7 ಗಂಟೆಯಿಂದಲೇ ಗ್ರಾಮಾಂ ತರ ಪ್ರದೇಶದಲ್ಲಿ ಬಿರುಸಿನ ಮತದಾನ ನಡೆದಿದ್ದು, ಪಟ್ಟಣ ಪ್ರದೇಶದಲ್ಲಿ ಮಂದಗತಿಯ ಮತದಾನ ನಡೆದಿದೆ.
ಗ್ರಾಮಾಂತರ ಪ್ರದೇಶದ ಹಲವು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಕೆಲಕಡೆ ಗೊಂದಲ ಉಂಟಾಯಿತು. ಮತ್ತೊಂದೆಡೆ ವೃದ್ಧರು ಸರತಿ ಸಾಲಿನಲ್ಲಿ ಉತ್ಸಾಹ ದಿಂದ ಮತದಾನ ಮಾಡಿದರು.

ಉಷ್ಣಾಂಶ 36 ಡಿಗ್ರಿ ದಾಟಿತ್ತು. ಹೀಗಾಗಿ, ಮತಗಟ್ಟೆಗಳ ಬಳಿ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಿತ್ತು. ಎಳನೀರು, ಮಜ್ಜಿಗೆ, ಲಸ್ಸಿ ಭರದಿಂದ ಮಾರಾಟವಾದವು. ಕೆಲವೆಡೆ ಕಾರ್ಯ ಕರ್ತರು ಮತದಾರರಿಗೆ ತಂಪು ಪಾನೀಯ ಸರಬರಾಜು ಮಾಡುತ್ತಿ ದ್ದುದು ಕಂಡು ಬಂತು.

ಒಟ್ಟು 236 ಮತಗಟ್ಟೆ ಸ್ಥಾಪಿಸಿ 1,400 ಸಿಬ್ಬಂದಿಯನ್ನು ನಿಯೋಜಿಸ ಲಾಗಿತ್ತು. ಕೆಲವೆಡೆ ಸಂಜೆ 5.30ರವರೆಗೆ ಮತದಾನ ನಡೆಯಿತು. ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏ.13ರಂದು ಮತ ಎಣಿಕೆ ನಡೆಯಲಿದ್ದು, ಈ ಅಭ್ಯರ್ಥಿಗಳ ಭವಿಷ್ಯ ಗೊತ್ತಾಗಲಿದೆ.

ADVERTISEMENT

ಚಿನ್ನದಗುಡಿಹುಂಡಿ ಗ್ರಾಮದಲ್ಲಿನ ಮತಗಟ್ಟೆಯಲ್ಲಿ  94 ವರ್ಷದ ಮಾದೇ ಗೌಡ ಅವರು ಹಕ್ಕು ಚಲಾವಣೆ ಮಾಡಿ ದರು. 60 ವರ್ಷಗಳಿಂದ ಮತದಾನ ಮಾಡುತ್ತಿರುವುದಾಗಿ ಅವರು ಹೇಳಿದರು.

ಮೊದಲ ಬಾರಿ ಮತದಾನ: ಕ್ಷೇತ್ರದ ಯುವಕ ಹಾಗೂ ಯುವತಿಯರು ಇದೇ ಮೊದಲ ಬಾರಿ ಮತದಾನ ಮಾಡಿದರು. ಮೊದಲ ಬಾರಿ ಹಕ್ಕು ಚಲಾಯಿಸಿದ  ಯುವತಿ ಸುಷ್ಮಿತಾ ಖುಷಿ ವ್ಯಕ್ತಪಡಿಸಿದರು. ಅವರು ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ಮಾಡಿದರು. ‘ಯಾರಾದರೂ ಗೆಲ್ಲಲಿ ನಂಜನಗೂಡು ಅಭಿವೃದ್ಧಿ ಮಾಡಲಿ’ ಎಂದರು.ಕ್ಷೇತ್ರದಲ್ಲಿ ಹಲವು ಕಡೆ ಮತಯಂತ್ರ ಹಾಗೂ ವಿವಿ ಪ್ಯಾಟ್‌ ಕೈಕೊಟ್ಟಿತು. ಸುಮಾರು 15 ವಿವಿ ಪ್ಯಾಟ್‌ ಹಾಗೂ ವಿವಿಧ ಯಂತ್ರಗಳನ್ನು ಬದಲಾಯಿಸ ಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.