ADVERTISEMENT

ಮತ್ತೊಂದು ಹುಲಿಯ ಹೆಜ್ಜೆ ಗುರುತು ಪತ್ತೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 9:07 IST
Last Updated 7 ನವೆಂಬರ್ 2017, 9:07 IST
ಕಾರ್ಯಾಚರಣೆ ನಿರತ ಆನೆಗಳು
ಕಾರ್ಯಾಚರಣೆ ನಿರತ ಆನೆಗಳು   

ಹಂಪಾಫುರ: ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಅರಣ್ಯ ವ್ಯಾಪ್ತಿಯ ಕಾರಾಪುರ ಕಬಿನಿ ರಿವರ್ ಲಾಡ್ಜ್ (ಜಂಗಲ್ ಲಾಡ್ಜ್) ಸಮೀಪದ ಮಳಲಿ ಗ್ರಾಮದ ಬಳಿ ಮತ್ತೊಂದು ಹುಲಿ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಜಂಗಲ್ ಲಾಡ್ಜ್‌ ಆವರಣ ಹಾಗೂ ಮಳಲಿ ಗ್ರಾಮದಲ್ಲಿ ಪತ್ತೆಯಾದ ಹುಲಿ ಹೆಜ್ಜೆ ಗುರುತುಗಳು ಪರಸ್ಪರ ಹೋಲಿಕೆಯಾಗುತ್ತಿಲ್ಲ. ಇದರಿಂದ ಇವೆರಡೂ ಬೇರೆ ಬೇರೆ ಹುಲಿಗಳು ಎಂಬ ಅನುಮಾನಕ್ಕೆ ಪುಷ್ಟಿ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಗ್ರಾಮದಲ್ಲಿ ಮೇಕೆಯೊಂದನ್ನು ಚಿರತೆ ತಿಂದು ಹಾಕಿದೆ. ಆರಂಭದಲ್ಲಿ ಇದು ಹುಲಿಯದೇ ಕೃತ್ಯ ಎಂದು ಶಂಕಿಸಲಾಗಿತ್ತು. ಆದರೆ, ಪ್ರತ್ಯಕ್ಷದರ್ಶಿಗಳು ಮೇಕೆಯನ್ನು ಚಿರತೆ ತಿನ್ನುತ್ತಿದ್ದ ದೃಶ್ಯ ನೋಡಿದ್ದಾಗಿ ತಿಳಿಸಿದ್ದಾರೆ.

ಕಾರ್ಯಾಚರಣೆ ಸ್ಥಗಿತ: ಸೋಮವಾರ ಮುಂಜಾನೆ 6 ಗಂಟೆಯಿಂದಲೇ ಹುಲಿ ಪತ್ತೆ ಕಾರ್ಯಾಚರಣೆಯನ್ನು ದಸರಾ ಆನೆಗಳ ಸಹಾಯದಿಂದ ಆರಂಭಿಸಲಾಯಿತು. ಇದರಲ್ಲಿ ಅರ್ಜುನ, ಅಭಿಮನ್ಯು ಹಾಗೂ ಕೃಷ್ಣ ಆನೆಗಳು ಭಾಗಿಯಾಗಿದ್ದವು. ಆದರೆ, ಮಧ್ಯಾಹ್ನದವರೆಗೂ ಹುಲಿ ಕುರಿತು ಹೆಜ್ಜೆ ಗುರುತುಗಳಾಗಲಿ ಅಥವಾ ಮತ್ತಾವುದೇ ಸುಳಿವುಗಳು ದೊರೆಯದೆ ಇದ್ದುದರಿಂದ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು.

ADVERTISEMENT

ಜಂಗಲ್‌ಲಾಡ್ಜ್‌ನಿಂದ ಹೊರಕ್ಕೆ ಹುಲಿ?
ಹೊಸದಾಗಿ ಅಳವಡಿಸಲಾಗಿದ್ದ ನಾಲ್ಕು ಕ್ಯಾಮೆರಾಗಳ ಪೈಕಿ 2 ಕ್ಯಾಮೆರಾದಲ್ಲಿ ಹುಲಿಯು ಜಂಗಲ್ ಲಾಡ್ಜ್‌ನಿಂದ ಹೊರ ಹೋಗುತ್ತಿರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ. ಆದರೆ, ಈ ವಿಷಯವನ್ನು ಅಧಿಕಾರಿಗಳು ದೃಢಪಡಿಸಿಲ್ಲ.

ಬೋಟ್ ಮೂಲಕ ಕಾರ್ಯಾಚರಣೆ: ಕ್ಯಾಮೆರಾದಲ್ಲಿ ಸೆರೆಯಾದ ಹುಲಿ ಹೊರಗಡೆ ಹೋದ ಜಾಗದಲ್ಲಿ ಕಬಿನಿ ಹಿನ್ನೀರು ಇದ್ದು, ಅರಣ್ಯ ಇಲಾಖೆ ಸಿಬ್ಬಂದಿ ಜಂಗಲ್ ಲಾಡ್ಜ್‌ನ ಬೋಟುಗಳ ಮೂಲಕ ಎರಡೂ ಕಡೆಯ ದಂಡೆಯನ್ನು ಪರಿಶೀಲಿಸಿದರು. ಆದರೆ, ಇಲ್ಲಿಯೂ ಹುಲಿಯ ಯಾವುದೇ ಹೆಜ್ಜೆ ಗುರುತುಗಳು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಲಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆಲ ಅರಣ್ಯ ಸಿಬ್ಬಂದಿಯನ್ನು ಸ್ಥಳದಲ್ಲಿ ಬಿಟ್ಟು ತಮ್ಮ ತಮ್ಮ ಸ್ವಸ್ಥಾನಕ್ಕೆ ತೆರಳಿದ್ದಾರೆ. ಆನೆಗಳನ್ನೂ ಶಿಬಿರಗಳಿಗೆ ಕಳುಹಿಸಲಾಗಿದೆ.‌ ಎ.ಪಿ.ಸಿ.ಸಿ.ಎಫ್ ಜಯರಾಮ್, ಪಿ.ಸಿ.ಸಿ.ಎಫ್ ಪೊನ್ನಾಟಿ ಶ್ರೀಧರ್, ನಾಗರಹೊಳೆ ವನ್ಯಜೀವಿ ವಲಯದ ಕೃತಿಕಾ, ರಾಜಕುಮಾರ್, ಅಂತರಸಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಎಸ್.ಟಿ.ಪಿ.ಎಫ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಡಿ.ಬಿ.ಕುಪ್ಪೆ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ಅಂತರಸಂತೆ ವಲಯಾರಣ್ಯಾಧಿಕಾರಿ ವಿನಯ್, ಮೇಟಿಕುಪ್ಪೆ ವಲಯಾರಣ್ಯಾಧಿಕಾರಿ ಶರಣಬಸಪ್ಪ. ವೈದ್ಯ ಮುಜೀಬು ರೆಹಮಾನ್ ಕಾರ್ಯಾಚರಣೆಯಲ್ಲಿದ್ದರು.

ಕಳೆದ ಕೆಲ ದಿನಗಳ ಹಿಂದೆ ಬಂಡೀಪುರ ಅರಣ್ಯದ ಹೆಡಿಯಾಲ ವ್ಯಾಪ್ತಿಯ ಬರಗಿ ಹಾಗೂ ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ವಲಯ ಅಂತರಸಂತೆಯ ಜಮೀನುಗಳಲ್ಲಿ ಹುಲಿ ಹಾಣಿಸಿಕೊಂಡು ಆತಂಕ ಸೃಷ್ಟಿಸಿದ್ದವು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 2 ಹುಲಿಗಳನ್ನು ಒಂದೊಂದು ದಿನಗಳ ಅಂತರದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.