ADVERTISEMENT

ಮಧ್ಯರಾತ್ರಿ ಕಳೆದರೂ ಮುಚ್ಚುವುದಿಲ್ಲ ಮದ್ಯದಂಗಡಿ

ಕಿರಿಕಿರಿ ತಪ್ಪಿಸಲು ಎರಡು ಬಾರಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ; ಮಹಿಳೆಯರ ಅಳಲು

ಜಿ.ಬಿ.ನಾಗರಾಜ್
Published 31 ಡಿಸೆಂಬರ್ 2017, 12:05 IST
Last Updated 31 ಡಿಸೆಂಬರ್ 2017, 12:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ‘ಮದ್ಯದಂಗಡಿ ಸಮೀಪ ಖಾಸಗಿ ಕ್ಲಿನಿಕ್‌ ಇದೆ. ವೈದ್ಯರು ಬೆಳಿಗ್ಗೆ ಮತ್ತು ಸಂಜೆ ಮಾತ್ರ ಸಿಗುತ್ತಾರೆ. ಸಂಜೆಯ ನಂತರ ಮದ್ಯದಂಗಡಿಯ ಮುಂಭಾಗ ಕ್ಲಿನಿಕ್‌ಗೆ ಹೋಗಲು ಆಗುತ್ತಿಲ್ಲ. ಹೀಗಾಗಿ, ಬೆಳಿಗ್ಗೆ ವೈದ್ಯರನ್ನು ಭೇಟಿಯಾಗುತ್ತೇವೆ. ಸಂಜೆಯಾದರೆ ಬೇರೊಂದು ಮಾರ್ಗದಲ್ಲಿ ಸಂಚರಿಸುತ್ತೇವೆ...’

ಸುಣ್ಣದಕೇರಿಯ 3ನೇ ಕ್ರಾಸ್ ಮಹಿಳೆಯೊಬ್ಬರ ಅಳಲು. ಕಾಕರವಾಡಿ, ಲಕ್ಷ್ಮಿಪುರಂ, ಕೆ.ಆರ್‌.ಮೊಹಲ್ಲಾದ ಬಹುತೇಕ ನಿವಾಸಿಗಳ ನೋವು ಇದಕ್ಕಿಂತ ಭಿನ್ನವಾಗಿಲ್ಲ. ಮದ್ಯದಂಗಡಿಗಳಿಂದ ಉಂಟಾಗುತ್ತಿರುವ ಕಿರಿಕಿರಿ ತಪ್ಪಿಸುವಂತೆ ಎರಡು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಕಿರುಕುಳ ತಾಳದೆ ಮುಸ್ಲಿಂ ಸಮುದಾಯ ಭವನವೊಂದು ಬಾಗಿಲು ಮುಚ್ಚಿದೆ.

ನಾರಾಯಣಶಾಸ್ತ್ರಿ ರಸ್ತೆಯ ತಾತಯ್ಯ ವೃತ್ತದಿಂದ ಸಿದ್ದಪ್ಪ ಚೌಕದವರೆಗೆ ಇರುವ ಮೂರು ಮದ್ಯದಂಗಡಿಗಳಿಂದ ಇಲ್ಲಿನ ನಿವಾಸಿಗಳು ಬೇಸತ್ತಿದ್ದಾರೆ. ಜನವಸತಿ ಬಡಾವಣೆಯ ಮುಖ್ಯರಸ್ತೆಯಲ್ಲಿ ಮದ್ಯದಂಗಡಿಗಳಿಗೆ ಅವಕಾಶ ನೀಡಿರು ವುದು ಸ್ಥಳೀಯರಿಗೆ ಕಿರಿಕಿರಿಯುಂಟು ಮಾಡಿದೆ. ವಿದ್ಯಾರಣ್ಯಪುರಂ, ನಂಜುಮಳಿಗೆಯ ಕಡೆ ಸಾಗುವ ವಾಹನ ಸವಾರರಿಗೂ ಕೆಟ್ಟ ಅನುಭವಗಳಾಗಿವೆ.

ADVERTISEMENT

‘ಸಂಜೆ 6 ಗಂಟೆಯ ಬಳಿಕ ಮದ್ಯದಂಗಡಿಯ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಪುರುಷರ ಸಂಖ್ಯೆ ಹೆಚ್ಚಾಗಿರುತ್ತದೆ. ಮದ್ಯ ಸೇವಿಸಿದ ಅಮಲಿನಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಕೆಣಕುತ್ತಾರೆ. ಇದನ್ನು ಪ್ರಶ್ನಿಸಿದರೆ ಮೇಲೆ ಬೀಳುತ್ತಾರೆ. ಇವರೊಂದಿಗೆ ಗಲಾಟೆ ಮಾಡಿ ಸಾಕಾಗಿದೆ. ಹೀಗಾಗಿ, ನಾವೇ ಸುಮ್ಮನಾಗಿದ್ದೇವೆ’ ಎಂದು ಅಸಹಾಯಕತೆ ವ್ಯಕ್ತ ಪಡಿಸುತ್ತಾರೆ ಸುಣ್ಣದಕೇರಿ ಮಹಿಳೆಯರು.

ಮದ್ಯದಂಗಡಿಯ ಮುಂಭಾಗದಲ್ಲಿ ವಾಹನಗಳನ್ನು ವ್ಯವಸ್ಥಿತವಾಗಿ ನಿಲುಗಡೆ ಮಾಡುವುದಿಲ್ಲ. ಇದರಿಂದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿಯೇ ಗುಂಪುಗೂಡಿ ಮಹಿಳೆಯರನ್ನು ಕೆಣಕುತ್ತಾರೆ. ಟ್ಯೂಷನ್‌ಗೆ ತೆರಳುವ ಮಕ್ಕಳು ಹಾಗೂ ಟೈಲರಿಂಗ್‌ ತರಬೇತಿಗೆ ಸಾಗುವ ಮಹಿಳೆಯರು ಬೇರೊಂದು ಮಾರ್ಗದಲ್ಲಿ ಸಂಚರಿಸುತ್ತಾರೆ.

ಮದ್ಯದಂಗಡಿಗಳನ್ನು ರಾತ್ರಿ 11 ಗಂಟೆಗೆ ಮುಚ್ಚಬೇಕು ಎಂಬ ನಿಯಮವಿದೆ. ಆದರೆ, ಸುಣ್ಣದಕೇರಿಯ ಬಾರುಗಳಲ್ಲಿ ಮಧ್ಯರಾತ್ರಿವರೆಗೂ ಮದ್ಯ ಸಿಗುತ್ತದೆ. ನಿಗದಿತ ಸಮಯಕ್ಕೆ ಬಾಗಿಲು ಹಾಕಿದರೂ ಗಿರಾಕಿಗಳ ಸಂಖ್ಯೆ ಕಡಿಮೆಯಾಗಿರುವುದಿಲ್ಲ. ಬಾಗಿಲು ಹಾಕಿದ ಬಳಿಕ ಇಲ್ಲಿ ಮತ್ತೊಂದು ಲೋಕ ತೆರೆದುಕೊಳ್ಳುತ್ತದೆ. ಬಾರುಗಳ ಮುಂಭಾಗದಲ್ಲಿನ ವಾಹನಗಳೇ ಸಾಕ್ಷ್ಯ ಒದಗಿಸುತ್ತವೆ. ಹೀಗಾಗಿ, ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸುತ್ತಾರೆ ಸ್ಥಳೀಯರು.

ಚಾಮರಾಜ ಜೋಡಿರಸ್ತೆಯ ಬಾರುಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಲಕ್ಷ್ಮಿ ಟಾಕೀಸ್ ಸಮೀಪದ ಬಾರೊಂದಕ್ಕೆ ಮಧ್ಯರಾತ್ರಿಯೂ ಗ್ರಾಹಕರು ಬರುತ್ತಾರೆ. ಸರಸ್ವತಿಪುರಂ ವಿಶ್ವಮಾನವ ಜೋಡಿರಸ್ತೆಯ ಬೇಕ್‌ ಪಾಯಿಂಟ್ ಸಮೀಪದ ಬಾರ್‌ ಮಧ್ಯರಾತ್ರಿಯವರೆಗೆ ತೆರೆದಿರುತ್ತದೆ. ಗೋಕುಲಂನ ನಿರ್ಮಲಾ ಕಾನ್ವೆಂಟ್‌ ಸಮೀಪದ ಬಾರು ರಾತ್ರಿಯಾದಂತೆ ರಂಗೇರುತ್ತಿದೆ.

‘ಸಂಜೆ ವಾಯುವಿಹಾರ ಮುಗಿಸಿಕೊಂಡು ಮನೆಗೆ ಬರಲು ಬೇಸರವಾಗುತ್ತದೆ. ಬಾಗಿಲು ಭದ್ರ ಮಾಡಿಕೊಂಡರೂ ಪಕ್ಕದ ಮದ್ಯದಂಗಡಿಯಲ್ಲಿ ಜಮಾಯಿಸಿದವರ ಗಲಾಟೆ ಕಿವಿಗೆ ಅಪ್ಪಳಿಸುತ್ತದೆ. ಮನೆಯಿಂದ ಹೊರಹೋಗಲು ಮಕ್ಕಳು ಅಂಜುತ್ತಾರೆ. ಹಲವು ಬಾರಿ ಪೊಲೀಸರಿಗೆ ದೂರು
ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸರು ಮಾಮೂಲಿ ಪಡೆದು ಸುಮ್ಮನಾಗುತ್ತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕೃಷ್ಣಮೂರ್ತಿಪುರಂ 2ನೇ ಕ್ರಾಸ್‌ ಮಹಿಳೆ.

ಕೃಷ್ಣಮೂರ್ತಿಪುರಂ ಅಂಬೇಡ್ಕರ್‌ ರಸ್ತೆಯಲ್ಲಿ ಎರಡು ಬಾರುಗಳಿವೆ. ಬೆಳಿಗ್ಗೆ 9.30ಕ್ಕೆ ಬಾಗಿಲು ತೆರೆದರೆ ರಾತ್ರಿ 11ಕ್ಕೆ ಮುಚ್ಚುತ್ತವೆ. ಇಲ್ಲಿಗೆ ಬರುವ ಗ್ರಾಹಕರು ಪಾದಚಾರಿ ಮಾರ್ಗದಲ್ಲಿಯೇ ಕುಳಿತು ಮದ್ಯ ಸೇವಿಸುತ್ತಾರೆ. ಅಕ್ಕಪಕ್ಕದ ಖಾಲಿ ನಿವೇಶನವೂ ಮದ್ಯಪಾನಿಗಳ ಅಡ್ಡೆಯಾಗಿದೆ. ಈ ಮಾರ್ಗದಲ್ಲಿ ಸಾಗುವ ಮಹಿಳೆಯರು ಹಾಗೂ ಮಕ್ಕಳನ್ನು ಕೆಣಕುತ್ತಾರೆ. ಆಗಾಗ ಗಲಾಟೆಗಳೂ ನಡೆಯುತ್ತವೆ.

ಮದ್ಯ ಸೇವಿಸಿದ ಪುಂಡರ ಹಾವಳಿ ಹೆಚ್ಚಾಗಿದೆ. ಮದ್ಯದಂಗಡಿಯಿಂದ ಉಂಟಾಗುತ್ತಿರುವ ಕಿರುಕುಳದ ವಿರುದ್ಧ ಬಂಬೂಬಜಾರಿನಲ್ಲಿ ನಿವಾಸಿಗಳು ಧ್ವನಿ ಎತ್ತಿದ್ದಾರೆ. ಯರಗನಹಳ್ಳಿ ಮಹಿಳೆಯರೂ ಬಾರುಗಳ ವಿರುದ್ಧ ಹೋರಾಟ ನಡೆಸಿದ್ದಾರೆ.

ಎಲ್ಲೆಂದರಲ್ಲಿ ಕುಳಿತು ಕುಡಿಯುವುದು ಹಾಗೂ ಕಾಲಮಿತಿ ಮೀರಿದರೂ ಬಾಗಿಲು ಹಾಕದಿರುವ ಮದ್ಯದಂಗಡಿಗಳ ವಿರುದ್ಧ ಕ್ರಮ ಕೈಗೊಂಡರೆ ಪುಂಡರ ಹಾವಳಿಗೆ ಕಡಿವಾಣ ಬೀಳುತ್ತದೆ ಎಂಬುದು ಇವರ ಆಗ್ರಹ.

***

ಕಹಿ ಅನುಭವ ಹಂಚಿಕೊಳ್ಳಿ

ಪುಂಡರ ಹಾವಳಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಕಹಿ ಅನುಭವಗಳಾಗಿವೆ. ಕೆಲ ಪುರುಷರೂ ಇಂತಹ ಸಮಸ್ಯೆ ಅನುಭವಿಸಿರಬಹುದು. ಇದನ್ನು ಹಂಚಿಕೊಳ್ಳುವ ಮೂಲಕ ಆಡಳಿತ ವ್ಯವಸ್ಥೆಯ ಗಮನ ಸೆಳೆಯಲು ಸಾಧ್ಯವಿದೆ. ಮಾಹಿತಿ ನೀಡಿದವರ ಹೆಸರು, ವಿಳಾಸವನ್ನು ಗೋಪ್ಯವಾಗಿಡಲಾಗುತ್ತದೆ. ನಿಮ್ಮ ಸಮಸ್ಯೆಗಳನ್ನು ನಮಗೆ ತಿಳಿಸಿ.

ವಾಟ್ಸ್‌ಆ್ಯಪ್‌ ಸಂಖ್ಯೆ– 9513322937,
ಇ ಮೇಲ್‌–editorialmysore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.