ADVERTISEMENT

ಮಹಾದಾಯಿ ತೀರ್ಪಿಗೆ ಮಹಾವಿರೋಧ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 11:21 IST
Last Updated 29 ಜುಲೈ 2016, 11:21 IST
ಮಧ್ಯಂತರ ಅರ್ಜಿ ವಜಾಗೊಂಡಿದ್ದರಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಮೈಸೂರಿನ ಸಬ್‌ ಅರ್ಬನ್‌ ಬಸ್‌ ನಿಲ್ದಾಣದ ಬಳಿ ರಸ್ತೆತಡೆ ನಡೆಸಲಾಯಿತು
ಮಧ್ಯಂತರ ಅರ್ಜಿ ವಜಾಗೊಂಡಿದ್ದರಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಮೈಸೂರಿನ ಸಬ್‌ ಅರ್ಬನ್‌ ಬಸ್‌ ನಿಲ್ದಾಣದ ಬಳಿ ರಸ್ತೆತಡೆ ನಡೆಸಲಾಯಿತು   

ಮೈಸೂರು: ಮಹಾದಾಯಿ ನ್ಯಾಯ ಮಂಡಳಿ ಕರ್ನಾಟಕದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಜಿಲ್ಲೆಯಲ್ಲಿಯೂ ಆಕ್ರೋಶ ವ್ಯಕ್ತವಾಗಿದ್ದು, ರೈತರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಸರಣಿ ಪ್ರತಿಭಟನೆ ನಡೆಸಿದರು.

ಸಬ್ಅರ್ಬನ್ ಬಸ್‌ ನಿಲ್ದಾಣದಲ್ಲಿ ಬಸ್‌ ಸಂಚಾರ ತಡೆಯಲು ಮುಂದಾದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರನ್ನು ಲಷ್ಕರ್‌ ಠಾಣೆಯ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ಆಕಾಶವಾಣಿಗೆ ಮುತ್ತಿಗೆ ಹಾಕಲು ಮುಂದಾದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನ್ಯಾಯಾಲಯದ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿಯ ಎದುರು ಧರಣಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ರೈತರ ಬಂಧನ: ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಗನ್‌ಹೌಸ್ ಬಳಿಯ ಕುವೆಂಪು ಉದ್ಯಾನದಲ್ಲಿ ಬೆಳಿಗ್ಗೆ 10ಕ್ಕೆ ರೈತರು ಸಭೆ ಸೇರಿದರು. ಪ್ರತಿಭಟನೆಯ ನಿರ್ಧಾರ ಕೈಗೊಂಡು ಬೆಂಗಳೂರು–ನೀಲಗಿರಿ ರಸ್ತೆಯಲ್ಲಿ ಮೆರವಣಿಗೆ ಸಾಗಿದರು. ಸಬ್ಅರ್ಬನ್ ಬಸ್‌ ನಿಲ್ದಾಣದ ನಿರ್ಗಮನ ದ್ವಾರದ ಬಳಿ ಬಸ್‌ ತಡೆದು ಧರಣಿ ನಡೆಸಿದರು.

ಮಧ್ಯಂತರ ಅರ್ಜಿ ವಜಾಗೊಂಡಿದ್ದರಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕೇಂದ್ರ ಹಾಗೂ ಗೋವಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕಕ್ಕೆ ನೀರು ಕೊಡುವಂತೆ ಘೋಷಣೆ ಕೂಗಿದರು. ಬಳಿಕ ರಸ್ತೆಯಲ್ಲಿ ಮಲಗಿ ಸುಮಾರು 20 ನಿಮಿಷ ಬಸ್ ಸಂಚಾರ ತಡೆದರು.

ಬಸ್ ತಡೆದು ಪ್ರತಿಭಟನೆ ನಡೆಸದಂತೆ ಪೊಲೀಸರು ಮಾಡಿಕೊಂಡ ಮನವಿಯನ್ನು ರೈತರು ತಿರಸ್ಕರಿಸಿದರು. ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಪೊಲೀಸ್‌ ವಾಹನದಲ್ಲಿ ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಕವಾಯತು ಮೈದಾನಕ್ಕೆ ಸಾಗಿಸಿ ಬಿಡುಗಡೆಗೊಳಿಸಿದರು.

ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹ: ಮಹಾದಾಯಿ ಬಿಕ್ಕಟ್ಟು ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾ ನ್ಯಾಯಾಲಯದ ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂಬ ನಿಯಮವಿದೆ. ಆದರೆ, ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಮಂಡಳಿ ಹಾಗೂ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ತಾಂತ್ರಿಕ ಸಮಸ್ಯೆಯ ನೆಪವೊಡ್ಡಿ ರಾಜ್ಯದ ಅರ್ಜಿಯನ್ನು ತಿರಸ್ಕರಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಗಳ ನಡುವೆ ಸೃಷ್ಟಿಯಾಗಿರುವ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಕೂಡ ಇಚ್ಛಾಶಕ್ತಿ ತೋರುತ್ತಿಲ್ಲ. ಅಂತರರಾಷ್ಟ್ರೀಯ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುವ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದೇಶಕ್ಕೆ ತೆರಳುವುದನ್ನು ಬಿಟ್ಟು, ಕೂಡಲೇ ಮಧ್ಯಪ್ರವೇಶ ಮಾಡಿ ರಾಜ್ಯಗಳ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಇತ್ಯರ್ಥಪಡಿಸಬೇಕು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ರಸ್ತೆ ತಡೆ: ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಯಾದವಗಿರಿಯಲ್ಲಿ ಮೈಸೂರು–ಕೆಆರ್‌ಎಸ್‌ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತ.ರಾ.ಸು ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಆಕಾಶವಾಣಿ ಕೇಂದ್ರ ತಲುಪಿದರು. ಖಾಲಿ ಬಿಂದಿಗೆ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 15 ನಿಮಿಷ ವಾಹನಗಳನ್ನು ತಡೆದರು. ಬಳಿಕ ಆಕಾಶವಾಣಿ ಕೇಂದ್ರದತ್ತ ನುಗ್ಗಲು ಮುಂದಾದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಾದೇಶ ಅವರನ್ನು ಪೊಲೀಸರು ವಶಕ್ಕೆ ಪಡೆದು ಚದುರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಕಾರ್ಯಕರ್ತರು ನ್ಯಾಯಾಲಯದ ಎದುರು, ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.