ADVERTISEMENT

ಮಾರುಕಟ್ಟೆ ಸಂಶೋಧನೆಗೆ ಒತ್ತು ನೀಡಿ

ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 9:20 IST
Last Updated 1 ಸೆಪ್ಟೆಂಬರ್ 2014, 9:20 IST

ಮೈಸೂರು: ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕೂ ಮುನ್ನ ಕೈಗಾರಿಕೆಗಳು ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಸಲಹೆ ನೀಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ಕೈಗಾರಿಕೆಗಳ ಸಂಘ, ಜಿಲ್ಲಾ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘ, ಜಿಲ್ಲಾ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕೇಂದ್ರ, ರಾಷ್ಟ್ರೀಯ ಆಹಾರ ಸಂರಕ್ಷಣಾ ಕೋಶದ ಆಶ್ರಯದಲ್ಲಿ ನಗರದ ಖಾಸಗಿ ಹೋಟೆಲಿನಲ್ಲಿ ಭಾನುವಾರ ಏರ್ಪಡಿಸಿದ್ದ ‘ಆಹಾರ ಸಂರಕ್ಷಣಾ ಕೈಗಾರಿಕೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಯೋಜನೆ’ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚೀನಾ ಸಂಶೋಧನೆಗೆ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಕೈಗಾರಿಕಾ ಕ್ಷೇತ್ರದಲ್ಲಿ ಜಪಾನ್‌ ಮುಂದುವರಿಯಲು ಸಂಶೋಧನೆಯೇ ಕಾರಣ. ಆದರೆ, ಭಾರತದ ಕೈಗಾರಿಕೋದ್ಯಮಿಗಳು ಇದನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೃಷಿ ಮತ್ತು ಕೈಗಾರಿಕೆ ಸೇರಿದಂತೆ ಇತರ ಕ್ಷೇತ್ರಗಳ ಕುರಿತು ದೇಶದಲ್ಲಿ ಅರಿವಿನ ಕೊರತೆ ಇದೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡುವ ಕುರಿತು ಚಿಂತಿಸುವ ಅಗತ್ಯವಿದೆ. ವಸ್ತುವೊಂದನ್ನು ಮರು ವಿನ್ಯಾಸಗೊಳಿಸುವುದಕ್ಕೂ ಮುನ್ನ ಅಧ್ಯಯನ ನಡೆಸಬೇಕು ಎಂದು ಹೇಳಿದರು.

ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಸೌಲಭ್ಯ ನೀಡುವುದಕ್ಕೆ ಏಕಗವಾಕ್ಷಿ ವ್ಯವಸ್ಥೆ ರೂಪಿಸುವ ಚಿಂತನೆ ಸರ್ಕಾರದ ಮುಂದಿದೆ. ಮನಸ್ಸಿಗೆ ಬಂದಂತೆ ಕೈಗಾರಿಕೆ ಸ್ಥಾಪಿಸುವುದರಲ್ಲಿ ಅರ್ಥವಿಲ್ಲ. ಅವುಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಮಗ್ರವಾಗಿ ಆಲೋಚಿಸುವ ಅಗತ್ಯವಿದೆ. ಮೈಸೂರನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸಲು ಸಾಕಷ್ಟು ಅವಕಾಶಗಳಿವೆ. ಈ ಕುರಿತು ಸರ್ಕಾರ ಗಮನ ಹರಿಸಲಿದ್ದು, ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.

ದೇಶದಲ್ಲಿ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲ ಸಾಕಷ್ಟಿದೆ. ಆದರೂ, ಭಾರತ ಅಭಿವೃದ್ಧಿ ಹೊಂದು­ತ್ತಿರುವ ಸಾಲಿನಲ್ಲೇ ಇರುವುದು ವಿಪರ್ಯಾಸ. ಸಹಕಾರಿ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳು ಸಾಕಷ್ಟು ಲಾಭದಲ್ಲಿವೆ. ಆದರೆ, ಸರ್ಕಾರಿ ಒಡೆತನದ ಸಕ್ಕರೆ ಕಾರ್ಖಾನೆಗಳು ನೆಲ ಕಚ್ಚುತ್ತಿವೆ. ಕೈಗಾರಿಕೆಯಲ್ಲಿ ಶಿಸ್ತು ಮತ್ತು ಯೋಜನೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಸರ್ಕಾರಿ ಕಾರ್ಖಾನೆಗಳಲ್ಲಿ ಈ ಕೊರತೆ ಇದೆ ಎಂದು ಒಪ್ಪಿಕೊಂಡರು.

ಶಾಸಕರಾದ ವಾಸು, ತನ್ವೀರ್ ಸೇಟ್‌, ‘ಕಾಸಿಯ’ ಅಧ್ಯಕ್ಷ ಚಿದಾನಂದ ಎಂ. ರಾಜಮನೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್‌, ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ರಾಮ್‌ ರಾಜಶೇಖರನ್‌, ಡಿಎಫ್‌ಆರ್‌ಎಲ್‌ ನಿರ್ದೇಶಕ ಡಾ.ಹರ್ಷವರ್ಧನ್‌ ಬಾತ್ರ, ಪಿ. ವಿಶ್ವನಾಥ್‌, ಡಾ.ವಿಷಕಂಠ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.