ADVERTISEMENT

ಮೇ ಅಂತ್ಯದೊಳಗೆ ಧನಾತ್ಮಕ ನಿರ್ಧಾರ: ಸಚಿವ ತನ್ವೀರ್‌ ಸೇಠ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:22 IST
Last Updated 24 ಏಪ್ರಿಲ್ 2017, 6:22 IST
ಮೈಸೂರಿನಲ್ಲಿ ಭಾನುವಾರ ನಡೆದ ‘ಮುಡಾ’ ಕೆಥೆಡ್ರಲ್‌ ಪ್ಯಾರಿಷ್‌ ಸೊಸೈಟಿ ನಿವೇಶನ ಆಕಾಂಕ್ಷಿಗಳ ಸಭೆಯಲ್ಲಿ ಸಚಿವ ತನ್ವೀರ್‌ ಸೇಠ್‌ ಮಾತನಾಡಿದರು
ಮೈಸೂರಿನಲ್ಲಿ ಭಾನುವಾರ ನಡೆದ ‘ಮುಡಾ’ ಕೆಥೆಡ್ರಲ್‌ ಪ್ಯಾರಿಷ್‌ ಸೊಸೈಟಿ ನಿವೇಶನ ಆಕಾಂಕ್ಷಿಗಳ ಸಭೆಯಲ್ಲಿ ಸಚಿವ ತನ್ವೀರ್‌ ಸೇಠ್‌ ಮಾತನಾಡಿದರು   

ಮೈಸೂರು: ‘ಮುಡಾ’ ಕೆಥೆಡ್ರಲ್‌ ಪ್ಯಾರಿಷ್‌ ಸೊಸೈಟಿ ನಿವೇಶನಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಮಾಹಿತಿ ಪಡೆದು ಮೇ ಅಂತ್ಯದೊಳಗೆ ಧನಾತ್ಮಕ ನಿರ್ಧಾರ ಪ್ರಕಟಿಸುವೆ ಎಂದು ಸಚಿವ ತನ್ವೀರ್ ಸೇಠ್‌ ಇಲ್ಲಿ ಭರವಸೆ ನೀಡಿದರು.

‘ಮುಡಾ’ ಕೆಥೆಡ್ರಲ್‌ ಪ್ಯಾರಿಷ್‌ ಸೊಸೈಟಿ ನಿವೇಶನ ಆಕಾಂಕ್ಷಿಗಳ ಸಭೆಯಲ್ಲಿ ಭಾನುವಾರ ಅವರು ಮಾತನಾಡಿದರು.

ಈ ವಿಷಯದಲ್ಲಿ 1,462 ಕುಟುಂಬಳಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಮುಖ್ಯಮಂತ್ರಿ ಅವರ ಜತೆ ಮಾತುಕತೆ ನಡೆಸಿ ನಗರಾಭಿವೃದ್ಧಿ ಸಚಿವ ಆರ್‌.ರೋಷನ್‌ ಬೇಗ್‌ ಅವರಿಗೆ ನಿರ್ದೇಶನ ನೀಡಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಮನವಿ ಮಾಡುವುದಾಗಿ ಅವರು ತಿಳಿಸಿದರು.

ADVERTISEMENT

ಕಾನೂನು ನೆಪದಲ್ಲಿ ವಿಳಂಬ ಆಗಿದೆ. ಸರ್ಕಾರದ ಮಟ್ಟದಲ್ಲಿ ನಿರ್ದೇಶನ ಬಂದರೆ ಕೂಡಲೇ ಸ್ಪಂದಿಸುವುದಾಗಿ ‘ಮುಡಾ’ ಆಯುಕ್ತರು ತಿಳಿಸಿದ್ದಾರೆ ಎಂದರು.

ಈ ಬಾರಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ₹ 175 ಕೋಟಿ ನೀಡಲಾಗಿದೆ. ಸರ್ಕಾರದ ಅನೇಕ ಸವಲತ್ತುಗಳು ಬಳಕೆ ಆಗುತ್ತಿಲ್ಲ. ಅವುಗಳ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕು. ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಂ ಡಿದೆ. ಅವುಗಳನ್ನು ಬಳಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ವಾಸು, ಮುಖ್ಯಮಂತ್ರಿ ಅವರ ಮನವೊಲಿಸಿ ನಿವೇಶನ ನೀಡಲು ಒತ್ತಡ ಹೇರಲಾಗುವುದು ಎಂದರು.

ಮೈಸೂರು ಕೇಂದ್ರ ಗ್ರಂಥಾಲಯ ನಿರ್ಮಾಣ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಬೇಕು. ಸರ್ಕಾರಿ ಶಾಲೆ, ಕಾಲೇ ಜುಗಳಲ್ಲಿ ಶೌಚಾಲಯ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಬಿಷಪ್‌ ಡಾ.ವಿಲಿಯಂ, ಮಾಜಿ ಬಿಷಪ್‌ ಡಾ.ಥಾಮಸ್‌ ವಾಳಪಿಳ್ಳೈ, ಶಾಸಕ ಎಂ.ಕೆ.ಸೋಮಶೇಖರ್‌, ಎಸಿಐಸಿಎಂ ಅಧ್ಯಕ್ಷ ಎಂ.ಲಕ್ಷ್ಮಣ, ಧರ್ಮಗುರು ದಯಾನಂದ ಪ್ರಭು, ಡಿ.ಗೋಪಾಲ್‌, ಅನ್ವರ್‌ ಪಾಷಾ, ದೇವಿಪ್ರಸಾದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.