ADVERTISEMENT

ಯುವ ಸಂಭ್ರಮದಲ್ಲಿ ಗಮನ ಸೆಳೆದ ‘ನಿರೀಕ್ಷೆ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 10:47 IST
Last Updated 26 ಸೆಪ್ಟೆಂಬರ್ 2016, 10:47 IST

ಮೈಸೂರು: ‘ತಬ್ಬಲಿಯು ನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೋಗುವೆನು ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನಾ...’

ಈ ಗೀತೆಗೆ ಇಲ್ಲಿನ ರಾಮಕೃಷ್ಣ ನಗರದ ‘ನಿರೀಕ್ಷೆ’ ವಿಶೇಷ ಮಕ್ಕಳ ಶಾಲೆಯ ಮಕ್ಕಳು ಅಭಿನಯಿಸುತ್ತಿದ್ದಂತೆ ಅದುವರೆಗೂ ಭರಪೂರ ಕರತಾಡನ, ಶಿಳ್ಳೆ, ಕೂಗಾಟಗಳಿಂದ ತುಂಬಿದ್ದ ಇಡೀ ಬಯಲು ರಂಗಮಂದಿರದಲ್ಲಿ ನಡೆಯುತ್ತಿದ್ದ ‘ಯುವ ಸಂಭ್ರಮ’ ಒಂದರೆ ಕ್ಷಣ ಸ್ತಬ್ಧವಾಯಿತು.

ವಿಶೇಷ ಮಕ್ಕಳು ಹಸುಗಳ ರೀತಿ ಅಭಿನಯಿಸಿದ್ದು, ಹುಲಿರಾಯನ ಪ್ರತಾಪ ನೋಡುಗರ ಮನಗೆದ್ದಿತು. ಕೊನೆಗೆ, ‘ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು’ ಎಂಬ ಸಾಲು ನೆರೆದಿದ್ದವರ ಮನ ಕಲಕಿತು.

ವೇದಿಕೆಯ ಮೇಲೆ ಬೆಂಕಿ!: ಸುಳ್ಯ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ರಾಜಸ್ತಾನದ ಮರುಭೂಮಿ ಯಲ್ಲಿನ ಬುಡಕಟ್ಟು ಜನರ ನೃತ್ಯ ವಿಶೇಷವಾಗಿ ಕಂಡು ಬಂತು.

ಒಬ್ಬೊಬ್ಬ ಕಲಾವಿದರು 4 ಮಡಕೆಗಳನ್ನು ತಲೆ ಮೇಲೆ ಹೊತ್ತು, ಕೊನೆಯ ಮಡಕೆಯ ಮೇಲೆ ಬೆಂಕಿ ಹೊತ್ತಿಸಿಕೊಂಡು, ರಾಜಾಸ್ತಾನದ ಜನಪದ ಗೀತೆಗೆ ಹೆಜ್ಜೆ ಹಾಕಿದ ಪರಿ ವಿಸ್ಮಯ ಮೂಡಿಸಿತು. 

ಕಲಾವಿದರ ರಾಜಾಸ್ತಾನದ ವೇಷ ಭೂಷಣ, ಎರಡೂ ಕೈಗಳ ಕುಣಿಸುವಿಕೆ, ತಾಳಬದ್ದ ನೃತ್ಯ ಇವುಗಳ ಹಾಡು ಅರ್ಥವಾಗದೇ ಇದ್ದರೂ ತಲೆ ಕುಣಿಸು ವಂತೆ ಮಾಡುವಲ್ಲಿ ಸಫಲವಾಯಿತು.

4 ಮಡಕೆಯನ್ನು ತಲೆ ಮೇಲಿಟ್ಟು ಮಲಗಿಕೊಂಡು, ಒಂಟಿ ಕಾಲಿನಲ್ಲಿ ನಿಂತು ನರ್ತಿಸಿದ ಪರಿ ಕಂಡು ಪ್ರೇಕ್ಷಕ ಸಮುದಾಯ ನಿಬ್ಬೆರಗಾಯಿತು. ಬೆಂಕಿಯ ಬೆಳಕು ರಂಗವಿನ್ಯಾಸದ ಬೆಳಕನ್ನೇ ನಾಚಿಸುವಂತೆ ಪ್ರಧಾನವಾಗಿ ಕಂಡು ಬಂತು. ಬೆಂಕಿಯ ಹೊಗೆ ವೇದಿಕೆಯಲ್ಲಿ ಮತ್ತು ಪ್ರೇಕ್ಷಕ ವೃಂದದ ಮುಂಭಾಗ ವ್ಯಾಪಿಸಿ ಒಂದು ಬಗೆಯ ಹೊಸ ಅನುಭೂತಿಯನ್ನು ನೀಡಿತು.

ದೇಶಭಕ್ತಿಯ ಝಲಕುಗಳು: ಇನ್ನುಳಿದ ತಂಡಗಳ ಪ್ರದರ್ಶನಗಳಲ್ಲಿ ದೇಶಭಕ್ತಿಯು ಉಕ್ಕಿ ಹರಿಯಿತು.
ಹೊಳೆನರಸೀಪುರದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ದೇಶಭಕ್ತಿ ಸಂಸ್ಕೃತಿ ಪರಂಪರೆ ಕುರಿತ ನೃತ್ಯರೂಪಕದಲ್ಲಿ ಆರಂಭದಲ್ಲಿ ಬಂದ ಮಿಲಿಟರಿ ಪೋಷಾಕಿನ ತಂಡ ಗಮನ ಸೆಳೆಯಿತು. ನಂತರ, ‘ಚೆಕ್‌ ದೇ ಇಂಡಿಯಾ’, ‘ಜಯ್ ಹೋ’ ಹಾಡಿನ ತುಣುಕುಗಳಿಗೆ ವಿದ್ಯಾರ್ಥಿ ವೃಂದ ಹೆಜ್ಜೆ ಹಾಕಿದರು.

ಚಾಮರಾಜನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿ ಗಳು ಆರಂಭದಲ್ಲಿ ಶ್ವೇತವಸ್ತ್ರಧಾರಿಗಳಾಗಿ ಬಂದರೂ ನಂತರ ಕೊನೆಗೆ ಅವರು ಕೇಸರಿ, ಹಸಿರು ಬಣ್ಣಗಳನ್ನು ವೇದಿಕೆಯ ಮೇಲೆಯೇ ಬಳಿದುಕೊಂಡು ವಿಶಿಷ್ಟ ವಾಗಿ ಗಮನ ಸೆಳೆದರು. ಹುಣಸೂರಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಮಹಿಷಾಸುರ ಮರ್ಧಿನಿ ಕಥೆ, ಒನಕೆ ಓಬವ್ವ ಕಥೆಗಳ ಜತೆಗೆ ಆಧುನಿಕ ಸಂಗತಿಗಳನ್ನು ಬೆರೆಸಿ ನೃತ್ಯ ರೂಪಕವನ್ನು ಪ್ರದರ್ಶಿಸಿದ್ದು ವಿಶೇಷವಾಗಿ ಕಂಡು ಬಂತು. ಚಾಮರಾಜನಗರದ ಜೆಎಸ್ ಎಸ್ ಮಹಿಳಾ ಕಾಲೇಜಿನ ‘ಏಳುಮಲೆ ಮೇಲೆ ಕುಂತಾನೆ ಮಾದೇವ’, ‘ಉಳುವ ಯೋಗಿ ನೋಡಲ್ಲಿ’ ಹಾಡು, ‘ಚೆಲ್ಲಿದರು ಮಲ್ಲಿಗೆಯಾ...’ ಗೀತೆಗಳ ತುಣುಕುಗಳು ಕಣ್ಮನ ಸೆಳೆದವು. ಕೆಲ ಯುವಕರು ಅಶ್ಲೀಲ ಪದ ಬಳಸಿ ಕೂಗಾಟ ನಡೆಸಿ ದಾಗ ಅನಿವಾರ್ಯವಾಗಿ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.