ADVERTISEMENT

ರಸ್ತೆ ಬದಿ ಕಾದು ಕುಳಿತಿದ್ದ ಜವರಾಯ...

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 6:21 IST
Last Updated 12 ಏಪ್ರಿಲ್ 2017, 6:21 IST
ರಸ್ತೆ ಬದಿ ಕಾದು ಕುಳಿತಿದ್ದ ಜವರಾಯ...
ರಸ್ತೆ ಬದಿ ಕಾದು ಕುಳಿತಿದ್ದ ಜವರಾಯ...   

ಹುಣಸೂರು: ದುಡಿದು ದಣಿವಾರಿಸಿ ಕೊಳ್ಳಲು ಬಂದವರ ಮೇಲೆ ಜವರಾಯ ಕರುಣೆ ತೊರಲಿಲ್ಲ. ಅಂಗಡಿ ಮುಂದೆ ನಿಂತು ಬಿಸಿ ಬಿಸಿ ಚಹಾ ಹೀರುತ್ತಿದ್ದ ಅವರಿಗೆ ಸಾವು ಬಂದೆರಗುತ್ತಿದೆ ಎಂಬ ಪರಿವೇ ಇರಲಿಲ್ಲ. ಗೆಳೆಯರೊಂದಿಗೆ ಹರಟಿ ಇನ್ನೇನು ಹೊರಡಬೇಕು ಎನ್ನು ವಷ್ಟರಲ್ಲಿ ವಿಧಿ ಅಟ್ಟಹಾಸ ಮೆರೆಯಿತು... ತಾಲ್ಲೂಕಿನ ಆಜಾದ್‌ ನಗರದ ಬಳಿ ಹಾದುಹೋಗಿರುವ ರಾಮನಾಥಪುರ–  ತೆರಕಣಾಂಬಿ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯಾಹ್ನ ಯಾರೂ ಊಹಿಸಲಾರದ ದುರ್ಘಟನೆ ನಡೆದು ಹೋಯಿತು.

ಒಣಗಿ ನಿಂತಿದ್ದ ಬೃಹತ್ ಮರ ಏಕಾಏಕಿ ಬುಡಸಮೇತ ಮುರಿದುಬಿದ್ದು, ಎರಡು ಜೀವ ಬಲಿ ಪಡೆಯಿತು. ಹುಣಸೂರಿನ ಚಿಕ್ಕಹುಣಸೂರು ಬಡಾವಣೆ ನಿವಾಸಿ ಮಹೇಶ್‌ (38) ಮತ್ತು ರಾಮೇನಹಳ್ಳಿ ನಿವಾಸಿ ಪ್ರಕಾಶ್ (60) ವಿಧಿಯಾಟಕ್ಕೆ ಬಲಿಯಾದವರು.ಮಹೇಶ್‌ ಮತ್ತು ಸ್ನೇಹಿತ ಚಿನ್ನು ಇಬ್ಬರೂ ಹಲವು ವರ್ಷಗಳಿಂದ ಹಳ್ಳಿಗಳ ಮೇಲೆ ಬಟ್ಟೆ ವ್ಯಾಪಾರ ಮಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದರು. ಅಂತೆಯೇ ಮಂಗಳವಾರವೂ ರಾಗಿ ಗಂಜಿಯ ಊಟ ಮಾಡಿಸಿಕೊಂಡು ಎಚ್.ಡಿ.ಕೋಟೆಯತ್ತ ಹೊರಟ್ಟಿದ್ದರು.

ಮನೆಯಿಂದ ಹೊರಟು ಕೇವಲ 5 ಕಿ.ಮೀ. ಸಾಗಿ ಆಜಾದ್ ನಗರದ ಬಳಿ ಬಂದಾಗ ಅವರಿಗೆ ಚಹಾ ಕುಡಿಯು ವಂತಾಗಿದೆ. ರಸ್ತೆ ಬದಿ ಇದ್ದ ಅಂಗಡಿ ಮುಂದೆ ಬೈಕ್ ನಿಲ್ಲಿಸಿ ಚಹಾ ಕುಡಿದರು. ಆದರೆ, ಜವರಾಯ ಇಲ್ಲಿಯೇ ಕಾದು ಕುಳಿತ್ತಿದ್ದಾನೆ ಎಂಬುದು ಅವರ ಅರಿವಿಗೆ ಬರಲಿಲ್ಲ.ಮಹೇಶ್ ಮತ್ತು ಚಿನ್ನು ಚಹಾ ಕುಡಿದು ಅಂಗಡಿಯವರಿಗೆ ದುಡ್ಡು ಕೊಟ್ಟು ಹೊರಬಂದರು. ಆದರೆ, ಅಂಗಡಿಯಿಂದ ಹೊರಬಂದವರ ಮೇಲೆ ಮರದ ರೂಪದಲ್ಲಿ ಜವರಾಯ ಮೇಲೆರಗಿದ. ನೋಡನೋಡುತ್ತಿ ದ್ದಂತೆಯೇ ಮಹೇಶ್ ಹೆಣವಾದರು. ಜವರಾಯನ ಅಟ್ಟಹಾಸದಲ್ಲಿ ಚಿನ್ನು ಬದುಕುಳಿದರು. ಸ್ನೇಹಿತನ ರೂಪದಲ್ಲಿ ಸಾವಿನಿಂದ ಪಾರಾದರು.

ADVERTISEMENT

ಅಲ್ಲಿಯೇ ಇದ್ದ ಸ್ನೇಹಿತ ವೆಂಕಟೇಶ್ ಅವರು ಮಾತನಾಡಲು ಕರೆದಾಗ ಚಿನ್ನು ಅವರತ್ತ ತೆರಳಿದರು. ಅವರು ಅತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ಇತ್ತ ಮಹೇಶ್ ಮೇಲೆ ಬೃಹತ್ ಮರ ಬಿದ್ದಿತ್ತು. ಕಣ್ಣೆದುರೇ ಮಹೇಶ್ ಹೆಣವಾದರು. ಮನೆ ಬಿಟ್ಟ 10 ನಿಮಿಷದಲ್ಲಿಯೇ ರಸ್ತೆ ಬದಿ ಜವರಾಯ ಕಾದುಕುಳಿತ್ತಿದ್ದ ಸುಳಿವು ಅವರಿಗೇ ಸಿಕ್ಕಲೇ ಇಲ್ಲ.

‘ಮಹೇಶ್‌ ಮತ್ತು ನಾನು ಟೀ ಕುಡಿದು ಅಂಗಡಿಯಿಂದ ಹೊರ ಬರುತ್ತಿ ದ್ದೆವು. ಈ ವೇಳೆ ನನ್ನ ಸ್ನೇಹಿತ ವೆಂಕಟೇಶ್‌ ಮಾತನಾಡಲು ಕರೆದರು. ಇದರಿಂದ ಅವರನ್ನು ಮಾತನಾಡಿಸಲು ನಾನು ಸ್ವಲ್ಪ ದೂರ ಹೋಗುತ್ತಿ ದ್ದಂತೆಯೇ ಮರ ಬಿತ್ತು. ನಾನು ಬದುಕುಳಿದೆ, ಆದರೆ, ಸ್ನೇಹಿತ ಹೆಣವಾದ’ ಎಂದು ಚಿನ್ನು ಕಣ್ಣೀರು ಹಾಕಿದರು.

ಮಹೇಶ್ ಅವರಿಗೆ ಪತ್ನಿ ಲತಾ, ವಿನಯ್‌ಕುಮಾರ್‌ ಮತ್ತು ಯೋಗೇಶ್‌ ಎಂಬ ಪುತ್ರರಿದ್ದಾರೆ. ವಿಷಯ ತಿಳಿಯುತ್ತಿ ದ್ದಂತೆಯೇ ಸ್ಥಳಕ್ಕೆ ಬಂದ ಪತ್ನಿ, ಮಕ್ಕಳ ರೋದನ ಮುಗಿಲುಮುಟ್ಟುತ್ತಿತ್ತು. ತನ್ನದ ಲ್ಲದ ತಪ್ಪಿಗೆ ಜೀವ ತೆರಬೇಕಾ ಯಿತು ಎಂದು ಪತ್ನಿ ಲತಾ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುತ್ತಿತ್ತು.

ಬೇಸರ ಕಳೆಯಲು ಬಂದ ರೈತ ಸಾವಿನ ದವಡೆಗೆ ಸಿಲುಕಿದ: ಮರದಡಿ ಸಿಲುಕಿ ಮೃತಪಟ್ಟ ರೈತ ಪ್ರಕಾಶ್‌ ಅವರದ್ದೂ ಮನಕಲಕುವ ಕಥೆಯೇ. ರಸ್ತೆ ಪಕ್ಕದಲ್ಲಿ ಜಮೀನು ಗುತ್ತಿಗೆ ಪಡೆದು ಕೃಷಿ ಕೈಗೊಂಡಿದ್ದರು. ಎರಡು– ಮೂರು ದಿನಗಳಿಂದ ಉತ್ತಮ ಮಳೆಯಾದ್ದರಿಂದ ಕೃಷಿ ಭೂಮಿಯಲ್ಲಿ ಬೆಳಿಗ್ಗೆಯಿಂದಲೂ ತಂಬಾಕು ನಾಟಿ ಕೆಲಸದಲ್ಲಿ ತೊಡಗಿ ದ್ದರು. ಬೇಸರ ಕಳೆಯುವುದಕ್ಕಾಗಿ ಚಹಾ ಸೇವಿಸಲು ರಸ್ತೆ ಬದಿಯ ಅಂಗಡಿಗೆ ಬಂದಿದ್ದರು. ಆದರೆ, ಮತ್ತೆ ಅವರು ಹೊಲದ ಕೆಲಸಕ್ಕೆ ಹಿಂದಿರುಗಲಿಲ್ಲ. ಇವರಿಗೆ ಪತ್ನಿ ಚಂದ್ರಮ್ಮ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಗಾಯ: ಘಟನೆಯಲ್ಲಿ ಆಜಾದ್‌ ನಗರದ ನಿವಾಸಿ, ವಿದ್ಯುತ್ ಗುತ್ತಿಗೆದಾರ ನಜೀರ್‌ ಎಂಬುವವರಿಗೆ ಗಾಯವಾಗಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. 2  ದ್ವಿಚಕ್ರ ವಾಹನ ಜಖಂಗೊಂಡಿವೆ.

ಪ್ರತಿಭಟನೆ: ಮೃತಪಟ್ಟವರ ಕುಟುಂಬದವರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು.
ಬಳಿಕ ಸ್ಥಳಕ್ಕೆ ಬಂದ ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಪುಟ್ಟಸ್ವಾಮಿ ಪ್ರತಿಭಟನಾಕಾರರ ಮನವೊಲಿಸಿದರು.ನಂತರ ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.