ADVERTISEMENT

ರಾಷ್ಟ್ರೀಯ ಉದ್ಯಾನದಲ್ಲಿ ಗಜ ಗಣತಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಮೇ 2017, 5:35 IST
Last Updated 17 ಮೇ 2017, 5:35 IST
ರಾಷ್ಟ್ರೀಯ ಉದ್ಯಾನದಲ್ಲಿ ಗಜ ಗಣತಿಗೆ ಚಾಲನೆ
ರಾಷ್ಟ್ರೀಯ ಉದ್ಯಾನದಲ್ಲಿ ಗಜ ಗಣತಿಗೆ ಚಾಲನೆ   

ಮೈಸೂರು: ನಾಗರಹೊಳೆ ಹಾಗೂ ಬಂಡೀಪುರ ರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಆನೆಗಣತಿ ಕಾರ್ಯಕ್ಕೆ ಮಂಗಳವಾರ ಚಾಲನೆ ದೊರೆಯಿತು.

30 ಮಂದಿ ಮಹಿಳೆಯರೂ ಸೇರಿದಂತೆ, 150 ಮಂದಿ ಸ್ವಯಂಸೇವಕರು 500ಕ್ಕೂ ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ 176 ಬೀಟ್‌ ಅರಣ್ಯ ವಲಯಕ್ಕೆ ತಲುಪಿದ್ದಾರೆ. ಪ್ರತಿ ಬೀಟ್‌ಗೂ ಒಬ್ಬ ಸ್ವಯಂಸೇವಕರು ಹಾಗೂ ಐವರು ಸಿಬ್ಬಂದಿಯನ್ನು ಒಳಗೊಂಡ ತಂಡ ರಚಿಸಲಾಗಿದೆ. ಬುಧವಾರ ಬೆಳಿಗ್ಗೆ 6 ಗಂಟೆಯಿಂದಲೇ ಗಣತಿ ಕಾರ್ಯದಲ್ಲಿ ತೊಡಗಲಿದ್ದಾರೆ.

4ರಿಂದ 6 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಪ್ರತಿ ಬೀಟ್‌ನಲ್ಲಿ ಮೊದಲ ದಿನ ‘ಸ್ಯಾಂಪಲ್ ಬ್ಲಾಕ್ ಕೌಂಟ್’ ಪದ್ಧತಿ ಅನುಸಾರ ಗಣತಿ ನಡೆಯಲಿದೆ. ಇಲ್ಲಿ ತಂಡವು ದಿನಪೂರ್ತಿ ಸುತ್ತಾಡಿ ಕಣ್ಣಿಗೆ ಕಂಡ ಆನೆಗಳನ್ನು ನಿಗದಿತ ನಮೂನೆಯಲ್ಲಿ ದಾಖಲಿಸಿಕೊಳ್ಳಲಿದೆ.

ADVERTISEMENT

ಎರಡನೇ ದಿನ ಪರೋಕ್ಷ ವಿಧಾನ ಅನುಸರಿಸಲಿದ್ದು, ಇದರಲ್ಲಿ 2 ಚದರ ಕಿ.ಮೀ ಅರಣ್ಯ ಪ್ರದೇಶದಲ್ಲಿ ಒಂದು ನಿಗದಿತ ಲೈನ್‌ನಲ್ಲಿ ನಡೆದುಕೊಂಡು ಸಾಗುತ್ತಾರೆ. ಇಲ್ಲಿ ಸಿಗುವ ಆನೆ ಲದ್ದಿಯ ಸಂಖ್ಯೆಯನ್ನು ನಮೂದಿಸಿಕೊಳ್ಳುತ್ತಾರೆ.

ಮೂರನೇ ದಿನ ಜಲಮೂಲಗಳು ಇರುವ ಕಡೆ ಕುಳಿತು ಅಲ್ಲಿಗೆ ನೀರು ಕುಡಿಯಲು ಬರುವ ಆನೆಗಳ ಸಂಖ್ಯೆಯನ್ನು ದಾಖಲಿಸಿಕೊಳ್ಳುತ್ತಾರೆ. ನಂತರ, ಈ ಎಲ್ಲ ದತ್ತಾಂಶಗಳನ್ನು ವಿಶ್ಲೇಷಿಸಿ ಆನೆಗಳ ಸಂಖ್ಯೆಯನ್ನು ಪತ್ತೆ ಹಚ್ಚಲಾಗುತ್ತದೆ.

ಅರಣ್ಯದಲ್ಲಿ ನಿರ್ಮಿಸಿರುವ ಬೇಟೆ ತಡೆ ಶಿಬಿರಗಳಲ್ಲಿ ರಾತ್ರಿ ವೇಳೆ ಸ್ವಯಂಸೇವಕರು ಹಾಗೂ ಸಿಬ್ಬಂದಿ ತಂಗಲಿದ್ದಾರೆ. ಇವರಿಗೆ ಅಗತ್ಯವಾಗಿ ಬೇಕಾದ ಆಹಾರ, ನೀರು, ತುರ್ತು ಔಷಧ ಸಂಗ್ರಹಿಸಿಡಲಾಗಿದೆ. ಅಲ್ಲಲ್ಲಿ, ಅಂಬುಲೆನ್ಸ್‌ ವಾಹನವೂ ಇರಲಿದ್ದು, ಅಗತ್ಯ ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬಂಡೀಪುರ ರಕ್ಷಿತ ಅರಣ್ಯದ ಸಿಸಿಎಫ್ ಹೀರಲಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಪಿಎಸ್ ವಿಶೇಷ: ಈ ಬಾರಿ ಗಣತಿ ಕಾರ್ಯದಲ್ಲಿ ಜಿಪಿಎಸ್‌ ಬಳಸುತ್ತಿರುವುದರಿಂದ ನಿಖರವಾದ ಅಂಕಿ ಅಂಶಗಳು ದೊರೆಯುವ ಸಾಧ್ಯತೆ ಹೆಚ್ಚಿದೆ. ಜತೆಗೆ, ಆನೆಗಳ ಲಿಂಗಾನುಪಾತವನ್ನೂ ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಕಣ್ಣಿಗೆ ಕಂಡ ಆನೆಗಳಲ್ಲಿ ಗಂಡು ಹಾಗೂ ಹೆಣ್ಣು ಆನೆಗಳ ಸಂಖ್ಯೆ, ಅವುಗಳ ಅಂದಾಜು ವಯಸ್ಸನ್ನೂ ದಾಖಲಿಸಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

**

ಸ್ವಯಂಸೇವಕರು ಹಾಗೂ ಸಿಬ್ಬಂದಿ ಸೂಚಿಸಿದ ಬೀಟ್‌ಗೆ ತಲುಪಿದ್ದಾರೆ. ಬುಧವಾರ ಬೆಳಿಗ್ಗೆ 6 ಗಂಟೆಯಿಂದಲೇ ಗಣತಿ ಕಾರ್ಯ ನಡೆಸಲಿದ್ದಾರೆ
-ಮಣಿಕಂಠನ್,
ನಾಗರಹೊಳೆ ರಕ್ಷಿತಾರಣ್ಯದ ಸಿಸಿಎಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.