ADVERTISEMENT

ವಾಹನ ನೀಡಲು ಖಾಸಗಿ ಶಾಲೆಗಳು ಹಿಂದೇಟು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 5:46 IST
Last Updated 17 ನವೆಂಬರ್ 2017, 5:46 IST

ಮೈಸೂರು: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ವಾಹನ ನೀಡಲು ಖಾಸಗಿ ಶಾಲೆಗಳು ಹಿಂದೇಟು ಹಾಕುತ್ತಿವೆ. ಜಿಲ್ಲೆಯಲ್ಲಿ 1,155 ಖಾಸಗಿ ಶಾಲೆಗಳಿವೆ. ಡಿಡಿಪಿಐ ಮಂಜುಳಾ ಅವರು ಖಾಸಗಿ ಶಾಲೆಗಳ ಸಭೆ ನಡೆಸಿ ಆಡಳಿತ ಮಂಡಳಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೇವಲ 27 ಶಾಲೆಗಳು ವಾಹನ ನೀಡಲು ಮುಂದೆ ಬಂದಿವೆ. ಸಮ್ಮೇಳನದ ವಿವಿಧ ಕಾರ್ಯಕ್ರಮಗಳು ನಡೆಯಲಿರುವ ಸ್ಥಳಗಳಿಗೆ ವಸತಿಗೃಹಗಳಿಂದ ಅತಿಥಿ ಗಳನ್ನು ಕರೆದುಕೊಂಡು ಹೋಗಲು ವಾಹನಗಳ ಕೊರತೆ ಎದುರಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾ ಘಟಕವು ಸುಮಾರು 150 ವಾಹನಗಳಿಗೆ ಬೇಡಿಕೆ ಇಟ್ಟಿದೆ. ಕೆಎಸ್‌ಆರ್‌ಟಿಸಿ ಬಸ್ಸೊಂದಕ್ಕೆ ದಿನಕ್ಕೆ ₹ 9,000 ಬಾಡಿಗೆ ನೀಡಬೇಕಿರುವುದರಿಂದ ಸಾಧ್ಯವಾದಷ್ಟು ಖಾಸಗಿ ಶಾಲೆಗಳ ವಾಹನಗಳನ್ನೇ ಬಳಸಿಕೊಳ್ಳಲು ಮುಂದಾಗಿದೆ. ಡೀಸೆಲ್‌ ಹಾಗೂ ಚಾಲಕರಿಗೆ ಭತ್ಯೆ ನೀಡಲು ನಿರ್ಧರಿಸಿದೆ.

ಇದುವರೆಗೆ 8,000 ಪ್ರತಿನಿಧಿಗಳು ವಸತಿ ಸೌಕರ್ಯಕ್ಕಾಗಿ ನೋಂದಣಿ ಮಾಡಿಸಿದ್ದಾರೆ. ಅಲ್ಲದೆ, 2,000ಕ್ಕೂ ಅಧಿಕ ಗಣ್ಯರು, ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಇವರಿಗೆಲ್ಲ ವಸತಿ ಶಾಲೆಗಳು, ಹಾಸ್ಟೆಲ್‌ಗಳು, ಛತ್ರಗಳು, ಭವನಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.

ADVERTISEMENT

15 ಕಿ.ಮೀ ದೂರದಲ್ಲಿರುವ ದೊಡ್ಡಹುಂಡಿ, ವರಕೋಡು, ಹೊಸಕೋಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸಾವಿರ ಮಂದಿಗೆ ತಂಗುವ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.