ADVERTISEMENT

ವಿದ್ಯುತ್‌ ತಗುಲಿ ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:24 IST
Last Updated 15 ಏಪ್ರಿಲ್ 2017, 5:24 IST

ಮೈಸೂರು: ಕ್ಯಾತಮಾರನಹಳ್ಳಿಯ ಎ.ಕೆ.ಕಾಲೊನಿಯಲ್ಲಿ ಪ್ರತಿ ವರ್ಷ ಏ. 14ರಂದು ಹಬ್ಬದ ವಾತಾವರಣ ಕಳೆಗಟ್ಟುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮದಿನ ವನ್ನು ಊರ ಹಬ್ಬದಂತೆ ಆಚರಿಸುವ ಬಡಾವಣೆಯಲ್ಲಿಗ ಸೂತಕ ಆವರಿಸಿದೆ. ಜಯಂತಿಯ ಸಿದ್ಧತೆಯಲ್ಲಿ ತೊಡಗಿದ್ದ ಮೂವರು ವಿದ್ಯುತ್‌ ಅವಘಡಕ್ಕೆ ಬಲಿ ಯಾಗಿದ್ದು ಜನತೆಯನ್ನು ಶೋಕ ಸಾಗರಕ್ಕೆ ತಳ್ಳಿದೆ.

ಕಾಲೊನಿಯ ದಲಿತ ಯುವಕರು ಜೈ ಭೀಮ್‌ ಗೆಳೆಯರ ಬಳಗ ಹಾಗೂ ಜೈ ಭೀಮ್‌ ವಿಚಾರ ಸಮಿತಿ ರಚಿಸಿಕೊಂಡು ಒಂದೂವರೆ ದಶಕದಿಂದ ಅಂಬೇಡ್ಕರ್‌ ಜಯಂತಿ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿನ ಬೀದಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತವೆ. ಎಲ್ಲೆಡೆ ಅಂಬೇಡ್ಕರ್‌ ಭಾವಚಿತ್ರದ ಕಟೌಟ್‌ಗಳು, ಬ್ಯಾನರ್‌ಗಳು ರಾರಾಜಿ ಸುತ್ತವೆ. ಆದರೆ, ಶುಕ್ರವಾರ ಇಲ್ಲಿ ಸ್ಮಶಾನ ಮೌನ ಆವರಿಸಿತ್ತು.

ದಿನಗೂಲಿ ಕಾರ್ಮಿಕರೇ ಹೆಚ್ಚಾ ಗಿರುವ ಈ ಬಡಾವಣೆಯಲ್ಲಿ ಕೈಲಾದಷ್ಟು ಹಣ ಹಾಕಿಕೊಂಡು ಸಂಭ್ರಮದಿಂದ ಜಯಂತಿ ಆಚರಿಸುತ್ತಾರೆ. ನಿಂಬೆ ಹಣ್ಣು ವೃತ್ತದಲ್ಲಿ 25 ಅಡಿ ಎತ್ತರದ ಕಟೌಟ್‌ ನಿಲ್ಲಿಸುವಾಗ ವಿದ್ಯುತ್‌ ತಗುಲಿ ಮಣಿಕಂಠ (24), ಶಿವ (25), ಕುಮಾರಸ್ವಾಮಿ (42) ಮೃತಪಟ್ಟಿದ್ದು ಸ್ಥಳೀಯರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.

ADVERTISEMENT

‘ಅಂಬೇಡ್ಕರ್‌ ಜಯಂತಿ ಸಿದ್ಧತೆ ಗುರುವಾರದಿಂದ ಆರಂಭವಾಗಿತ್ತು. ಮಧ್ಯರಾತ್ರಿ 12ಕ್ಕೆ ಕೇಕ್‌ ಕತ್ತರಿಸಿ ಸಿಹಿ ಹಂಚಿಕೊಂಡು ಸಂಭ್ರಮಿಸುತ್ತಿದ್ದೆವು. ಕಟೌಟ್‌ ಕಟ್ಟಿದ ಬಳಿಕ ಕೇಕ್‌ ಕತ್ತರಿಸಲು ಎಲ್ಲರೂ ನಿರ್ಧರಿಸಿದ್ದೆವು. 15ಕ್ಕೂ ಹೆಚ್ಚು ಸದಸ್ಯರು ಕಟೌಟ್‌ ಕಟ್ಟುವಲ್ಲಿ ಮಗ್ನರಾಗಿ ದ್ದೆವು. ಜೋರಾಗಿ ಬೀಸುತ್ತಿದ್ದ ಗಾಳಿಗೆ ನಿಯಂತ್ರಣ ಕಳೆದುಕೊಂಡ ಕಟೌಟ್‌ ಹಿಂದಕ್ಕೆ ವಾಲಿತು. ಇದಕ್ಕೆ ಕಬ್ಬಿಣದ ರಾಡುಗಳನ್ನು ಅಳವಡಿಸಿ ದ್ದರಿಂದ ವಿದ್ಯುತ್‌ ಪ್ರವಹಿಸಿತು’ ಎಂದು ಪ್ರತ್ಯಕ್ಷ ದರ್ಶಿ ಈಶ್ವರ್‌ ‘ಪ್ರಜಾವಾಣಿ’ಗೆ ಘಟನೆ ವಿವರಿಸಿದರು.

‘ಕುಮಾರಸ್ವಾಮಿ ಸ್ಥಳದಲ್ಲೇ ಮೃತ ಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಮಣಿಕಂಠ, ಶಿವ, ರಾಘವೇಂದ್ರ, ಶಿವಕುಮಾರ್‌ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದೆವು. ರಾಘವೇಂದ್ರ, ಶಿವಕುಮಾರ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗಿದ್ದ ಗೆಳೆಯರು ಕ್ಷಣಾರ್ಧದಲ್ಲಿ ಶವವಾಗಿದ್ದನ್ನು ಕಂಡು ಆಘಾತ ಗೊಂಡಿದ್ದೇವೆ’ ಎಂದು ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆ  ಮಾತನಾಡಿದರು.

ಅನ್ನಸಂತರ್ಪಣೆಗೆ ಸಿದ್ಧತೆ ನಡೆದಿತ್ತು: ಜಯಂತಿ ಅಂಗವಾಗಿ ಏ. 14ರಿಂದ 30ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಯುವಕರು ಹಮ್ಮಿಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ ನಿಂಬೆಹಣ್ಣು ವೃತ್ತ ದಿಂದ ಪುರಭವನದ ಅಂಬೇಡ್ಕರ್‌ ಪ್ರತಿಮೆಯವರೆಗೆ ದ್ವಿಚಕ್ರ ವಾಹನ ಜಾಥಾ ಕೂಡ ನಿಗದಿಯಾಗಿತ್ತು. ಕಾಲೊನಿ ಬಡ ಮಕ್ಕಳಿಗೆ ಪುಸ್ತಕ ವಿತರಣೆ ಸಮಾರಂಭಕ್ಕೆ ಮೇಯರ್‌ ಎಂ.ಜೆ. ರವಿ ಕುಮಾರ್‌ ಅವರನ್ನು ಆಹ್ವಾನಿಸಲಾಗಿತ್ತು.

ಏ. 29ರಂದು ಕಾಲೊನಿಯ ನಿವಾಸಿಗಳಿಗೆ ಅನ್ನಸಂತರ್ಪಣೆ ಮಾಡಲು ನಿರ್ಧರಿಸಲಾಗಿತ್ತು. ಅಂದು ರಾತ್ರಿ ಮನೋರಂಜನೆ, ಅಂಬೇಡ್ಕರ್‌ ಹೋರಾ ಟದ ಕುರಿತು ಅರಿವು ಮೂಡಿಸುವ ಸಮಾರಂಭ ಆಯೋಜಿ ಸಲಾಗಿತ್ತು. ಏ. 30ರಂದು ಮೆರವಣಿಗೆ ನಡೆಯಲಿತ್ತು.

‘ದಲಿತರಲ್ಲಿ ಸ್ವಾಭಿಮಾನ ಬಿತ್ತಿದ ಅಂಬೇಡ್ಕರ್‌ ಬಗೆಗೆ ಮಣಿಕಂಠ, ಶಿವಗೆ ಅಪಾರ ಅಭಿಮಾನವಿತ್ತು. 10 ವರ್ಷ ಗಳಿಂದಲೂ ಜಯಂತಿಯ ಕಾರ್ಯಕ್ರಮ ಗಳಲ್ಲಿ ತೊಡಗಿಸಿ ಕೊಂಡಿದ್ದರು. ಸಿದ್ಧತೆ ಗಮನಿಸಲು ಬಂದಿದ್ದ ಕುರುಬಾರಹಳ್ಳಿ ಕುಮಾರ ಸ್ವಾಮಿ ಕೂಡ ಕಟೌಟ್‌ ಕಟ್ಟಲು ನೆರವಾಗಿ ಶವವಾದರು’ ಎಂದು ಜೈ ಭೀಮ್‌ ವಿಚಾರ ಸಮಿತಿ ಸದಸ್ಯ ಕುಮಾರಸ್ವಾಮಿ ಕಣ್ಣೀರಾದರು.

ಕುಟುಂಬಕ್ಕೆ ಆಧಾರವಾಗಿದ್ದರು: ಪಾಲಿಕೆ ಉದ್ಯೋಗಿಯಾಗಿದ್ದ ಕೆಂಚಯ್ಯ ಅಕಾಲಿಕ ನಿಧನರಾದ ಬಳಿಕ ಅವರ ಪುತ್ರ ಮಣಿಕಂಠನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು.ಪಾಲಿಕೆಯ ಚುನಾವಣಾ ಘಟಕದಲ್ಲಿ ಕಾರ್ಯ ನಿರ್ವ ಹಿಸಿದ ಅವರನ್ನು, ಈಚೆಗೆ ಕಾನೂನು ವಿಭಾಗಕ್ಕೆ ನಿಯೋಜಿ ಸಲಾಗಿತ್ತು. ತಾಯಿ, ಇಬ್ಬರು ಸಹೋದರಿಯರಿದ್ದ ಕುಟುಂಬಕ್ಕೆ ಮಣಿಕಂಠ ಆಧಾರವಾಗಿದ್ದರು.

ಹುಲುಗಯ್ಯ ಅಗಲಿದ ಬಳಿಕ ಕುಟುಂ ಬದ ಜವಾಬ್ದಾರಿ ಹಿರಿಯ ಪುತ್ರ ಶಿವ ಮೇಲಿತ್ತು. ಮೂವರು ಸಹೋದರರು, ಒಬ್ಬ ಸಹೋದರಿ, ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಶಿವ ನನ್ನು ಕಳೆದು ಕೊಂಡಿದ್ದು ಕುಟುಂಬಕ್ಕೆ ಆಘಾತವ ಮೂಡಿಸಿದೆ. ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ಕುಮಾರಸ್ವಾಮಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.