ADVERTISEMENT

ವಿವೇಕಾನಂದ ವೇಷದಲ್ಲಿ ಮಿಂಚಿದ ಚಿಣ್ಣರು

ನಗರದ ವಿವಿಧೆಡೆ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ, ಜಾಥಾ, ಸನ್ಮಾನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 7:37 IST
Last Updated 13 ಜನವರಿ 2017, 7:37 IST
ಮೈಸೂರಿನ ವಿವೇಕಾನಂದ ವೃತ್ತದಲ್ಲಿ ಯುವ ಭಾರತ್‌ ಸಂಘಟನೆಯ ಮೈಸೂರು ವಿಭಾಗ ಗುರುವಾರ ಹಮ್ಮಿಕೊಂಡಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಮೈಸೂರಿನ ವಿವೇಕಾನಂದ ವೃತ್ತದಲ್ಲಿ ಯುವ ಭಾರತ್‌ ಸಂಘಟನೆಯ ಮೈಸೂರು ವಿಭಾಗ ಗುರುವಾರ ಹಮ್ಮಿಕೊಂಡಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.   
ಮೈಸೂರು: ನಗರದ ವಿವಿಧೆಡೆ ವಿವೇಕಾನಂದ ಜಯಂತಿ ಅಂಗವಾಗಿ ಗುರುವಾರ ವಿಭಿನ್ನ ಕಾರ್ಯಕ್ರಮಗಳು ನಡೆದವು. ಕೆಲವು ಕಡೆ ಜಾಥಾ, ಜಾಗೃತಿ ಕಾರ್ಯಕ್ರಮ, ಯುವ ದಿನ, ಪ್ರಶಸ್ತಿ ಪ್ರದಾನ, ಯುವಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
 
ವಿವೇಕಾನಂದ ವೃತ್ತದಲ್ಲಿ ಯುವ ಭಾರತ್‌ ಸಂಘಟನೆಯ ಮೈಸೂರು ವಿಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಎಸ್‌.ಎ.ರಾಮದಾಸ್‌, ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. 
 
ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದ ಸಾಧನೆಗೆ ರಂಗ ಕೆ.ಅಯ್ಯಂಗಾರ್‌, ರಾಣಿಪ್ರಭಾ (ಸಾಮಾಜಿಕ), ಎಸ್‌.ನಿಶಾಂತ್‌ (ಕ್ರಿಕೆಟ್‌), ಶಶಾಂಕ್‌ ಮಹದೇವ್‌ (ಕರಾಟೆ), ಎ.ನಂದನ್‌ (ಪತ್ರಿಕಾ ಛಾಯಾಗ್ರಹಣ) ಮತ್ತಿತರರನ್ನು ಸನ್ಮಾನಿಸಲಾಯಿತು. 
 
ಕಾರ್ಯಕ್ರಮಕ್ಕೂ ಮೊದಲು ವಿವೇಕ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿಗಳು ಜಾಥಾ ನಡೆಸಿದರು.
 
ಸಮಾಜ ಸೇವಕ ಕೆ.ರಘುರಾಮ್‌ ವಾಜಪೇಯಿ, ಮೈಸೂರು ನಗರ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್‌, ಯುವ ಭಾರತ್‌ ಸಂಘಟನೆ ಸಂಚಾಲಕ ಜೋಗಿ ಮಂಜು, ಪಾಲಿಕೆ ಸದಸ್ಯರಾದ ಸೀಮಾ ಪ್ರಸಾದ್‌, ಜಗದೀಶ್‌, ಮ.ವಿ.ರಾಮಪ್ರಸಾದ್‌, ಸ್ನೇಕ್‌ಶ್ಯಾಮ್‌, ಕೆಎಂಪಿಕೆ ಟ್ರಸ್ಟ್‌ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮೈಸೂರು ಪ್ರಜ್ಞಾವಂತರ ವೇದಿಕೆ ಅಧ್ಯಕ್ಷ ಜಗದೀಶ್‌ ಕಡಕೊಳ, ಬಿ.ಎಂ.ರಘು ಇದ್ದರು.
 
ಸಾಂಸ್ಕೃತಿಕ ಸ್ಪರ್ಧೆ: ಟಿಟಿಎಲ್‌ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ದಿನಾಚರಣೆ ಮತ್ತು ಅಂತರ ಪ್ರೌಢಶಾಲೆಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.
 
33 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಸದ್ವಿದ್ಯಾ ಶಾಲೆ ಪಾರಿತೋಷಕ ಗೆದ್ದುಕೊಂಡಿತು. 
 
ಟಿಟಿಎಲ್‌ ಟ್ರಸ್ಟ್‌ ಕಾರ್ಯದರ್ಶಿ ಬಿ.ಎನ್‌.ಮಲ್ಲೇಶ್‌ಬಾಬು ಬಹುಮಾನ ವಿತರಿಸಿದರು. ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್‌.ಶಿವರಾಮೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಟಿಟಿಎಲ್‌ ವಿದ್ಯಾಸಂಸ್ಥೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಪ್ರೊ.ಎಚ್‌.ಎನ್‌.ಅಶ್ವತ್ಥನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಟಿಟಿಎಲ್‌ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಬಿ.ವಿ.ಪ್ರಶಾಂತ್‌, ಪ್ರಾಂಶುಪಾಲರಾದ ಡಾ.ಎಂ.ಪ್ರೀತಿ, ಪ್ರೊ.ಬಿ.ಎನ್‌.ಮಾರುತಿಪ್ರಸನ್ನ ಹಾಜರಿದ್ದರು.
 
‘ರಾಷ್ಟ್ರಜಾಗೃತಿ’ ವಿತರಣೆ: ವಿಶ್ವಹಿಂದೂ ಸಂರಕ್ಷಣಾ ವೇದಿಕೆ ವತಿಯಿಂದ ಕೆಆರ್‌ಎಸ್‌ ರಸ್ತೆಯ ಒಂಟಿಕೊಪ್ಪಲಿನ ಚೆಲುವಾಂಬ ಉದ್ಯಾನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಭಿನ್ನವಾಗಿ ಆಚರಿಸಲಾಯಿತು. 
 
ಯುವಕರಿಗೆ ‘ರಾಷ್ಟ್ರಜಾಗೃತಿ’ ಪುಸ್ತಕದ ಪ್ರತಿಗಳನ್ನು ಹಂಚಲಾಯಿತು. ವಿವೇಕಾನಂದ ಅವರ ವೇಷಭೂಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮಿಂಚಿದರು. ಬಳಿಕ ಸಾಧಕರನ್ನೂ ಸನ್ಮಾನಿಸಲಾಯಿತು.
 
ಆದಿಚುಂಚನಗಿರಿಯ ಮೈಸೂರು ಶಾಖಾ ಮಠದ ಸೋಮನಾಥಾನಂದ ಸ್ವಾಮೀಜಿ, ಮೇಲುಕೋಟೆಯ ಇಳೈ ಆಳ್ವಾರ್‌ ಸ್ವಾಮೀಜಿ, ಬಿಜೆಪಿಯ ಮೈಸೂರು ವಿಭಾಗ ಪ್ರಭಾರಿ ಎಲ್‌.ನಾಗೇಂದ್ರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಕೆ.ಹರೀಶ್‌ಗೌಡ, ಬಿಜೆಪಿ ಮುಖಂಡ ಕೆ.ಆರ್‌.ಮೋಹನ್‌ಕುಮಾರ್‌, ಪಾಲಿಕೆ ಸದಸ್ಯ ಡಿ.ನಾಗಭೂಷಣ್‌, ವಿಶ್ವಹಿಂದೂ ಧರ್ಮಸಂರಕ್ಷಣಾ ವೇದಿಕೆ ಸಂಚಾಲಕ ಬಿ.ವಿ.ಗದಾಧರ, ಜಿಲ್ಲಾ ಘಟಕದ         ಅಧ್ಯಕ್ಷ ಬಿ.ಎನ್‌.ಸ್ವಾಮಿಗೌಡ  ಇತರರು ಇದ್ದರು.
 
ಎಸ್‌ಬಿಆರ್‌ಆರ್‌ ಮಹಾಜನ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರು ಸ್ವಾಮಿ ವಿವೇಕಾನಂದ ಅವರ ತತ್ವ, ಆದರ್ಶಗಳ ಬಗ್ಗೆ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಡಾ.ವೆಂಕಟರಾಮು ಹಾಜರಿದ್ದರು. 
 
**
ಬಹುಮಾನ ವಿತರಣೆ
ವಿಶ್ವಹಿಂದೂ ಧರ್ಮ ಸಂರಕ್ಷಣಾ ವೇದಿಕೆ ವಿವೇಕಾನಂದ ಜಯಂತಿ ಅಂಗವಾಗಿ ಏರ್ಪಡಿಸಿದ್ದ ‘ಸಮಾಜಕ್ಕೆ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸ್ತುತಿ’ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಮೇಟಗಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್‌.ಹರ್ಷಿತಾ ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾರೆ.
 
ಹೆಬ್ಬಾಳು ಶಿಷ್ಕರಿಣಿ ಕೇಂದ್ರೀಯ ಶಾಲೆಯ ಪಿ.ಯಶ್ವಂತ (ದ್ವಿತೀಯ), ಮೇಟಗಳ್ಳಿ ಜೆಎಸ್‌ಎಸ್‌ ಪ್ರೌಢಶಾಲೆಯ ಪಿ.ಭೂಮಿಕಾ (ತೃತೀಯ) ಬಹುಮಾನ ಗೆದ್ದುಕೊಂಡರು. 
 
ಶಿಷ್ಕರಿಣಿ ಕೇಂದ್ರೀಯ ಶಾಲೆಯ ಕೆ.ಸ್ನೇಹಿತ್‌, ಹೆಬ್ಬಾಳು ಶಿವಾನಂದ ಪ್ರೌಢಶಾಲೆಯ ಆರ್‌.ರಕ್ಷಿತಾ ಸಮಾಧಾನಕರ ಬಹುಮಾನ ಗಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.