ADVERTISEMENT

‘ಶಾಲೆಗಳ ಹೆಚ್ಚುವರಿ ಕೊಠಡಿಗಳಲ್ಲಿ ಅಂಗನವಾಡಿ ಕೇಂದ್ರ’

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 8:39 IST
Last Updated 9 ಸೆಪ್ಟೆಂಬರ್ 2017, 8:39 IST

ಹುಣಸೂರು: ಅಂಗನವಾಡಿ ಕೇಂದ್ರಗಳಿಗೆ ಕೊಠಡಿ ಸಮಸ್ಯೆ ನೀಗಿಸಲು ತಾಲ್ಲೂಕಿನಲ್ಲಿ 132 ಶಾಲೆಗಳಲ್ಲಿನ ಹೆಚ್ಚುವರಿ ಕೊಠಡಿ ಬಳಸಿಕೊಳ್ಳಲು ಮನವಿ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಸುಮಂಗಲಾ ಶುಕ್ರವಾರ ತಿಳಿಸಿದರು.

ತಾ.ಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು, ‘ಅಂಗನವಾಡಿ ಕೇಂದ್ರಗಳು ಕಳಪೆ ಕಟ್ಟಡಗಳಲ್ಲಿವೆ. ಶಾಲೆಗಳ ಹೆಚ್ಚುವರಿ ಕೊಠಡಿಗಳನ್ನು ಬಳಸಿಕೊಂಡು ಸಮಸ್ಯೆ ನಿವಾರಿಸಲು ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ’ ಎಂದರು.

ಹುಣಸೂರು ನಗರದಲ್ಲಿ ಈಗಾಗಲೇ ನಾಲ್ಕು ವಾರ್ಡ್‌ಗಳ ಶಾಲೆಗಳಿಗೆ ಕೇಂದ್ರ ವರ್ಗಾವಣೆ ಮಾಡಿ ಮಕ್ಕಳ ಪಾಲನೆ ನಡೆದಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತಾ.ಪಂ ಉಪಾಧ್ಯಕ್ಷ ಪ್ರೇಮಕುಮಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೀದಿ ವ್ಯಾಪಾರಿಗಳ ಪಟ್ಟಿ ಪಡೆದು ವರ್ಷಕಳೆದರೂ ಸರ್ಕಾರದ ನೆರವು ₹ 10 ಸಾವಿರ ನೀಡಿಲ್ಲ ಎಂದು ಆಕ್ಷೇಪಿಸಿದರು.

ADVERTISEMENT

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ರಕ್ಷಣೆಗೆ ನೀಡಿದ ಸೊಳ್ಳೆಪರದೆ ಬಳಸುತ್ತಿಲ್ಲ, ಇದರಿಂದ ಡೆಂಗಿ ಹರಡಲಿದೆ, ತಾಲ್ಲೂಕಿನ 81 ಕೇಂದ್ರಗಳಿಗೆ ಶೌಚಾಲಯ ಇಲ್ಲ, ಈಗಾಗಲೇ ತಾ.ಪಂ ವತಿಯಿಂದ ₹ 8.60 ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಾ.ಪಂ. ಇಒ ಹೇಳಿದರು.

ಅಧಿಕಾರಿಯು ಇದಕ್ಕೆ, ನಗರ ವ್ಯಾಪ್ತಿಯ 80 ಬೀದಿ ವ್ಯಾಪಾರಿಗಳಿಗೆ ಶಾಸಕರು ಅನುದಾನ ವಿತರಿಸಿದ್ದಾರೆ. ಗ್ರಾಮೀಣ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂದರು. ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಷಡಾಕ್ಷರಪ್ಪ ಅವರು, ಕಳೆದ ಬೇಸಿಗೆ ಬರ ಎದುರಿಸಲು ಖರೀದಿಸಿದ ಮೇವಿನಲ್ಲಿ 40 ಟನ್‌ ಮೇವು ವಿತರಿಸಲಾಗಿದ್ದು, 50 ಟನ್ ಮೇವು ಉಳಿಕೆಯಾಗಿದೆ. ಇದನ್ನು ಪಿಂಜರಾಪೋಲ್‌ ಗೆ ನೀಡಲಾಗುತ್ತದೆ ಎಂದರು.

ಜಿ.ಪಂ ಕುಡಿಯುವ ನೀರು ವಿಭಾಗದ ಅಧಿಕಾರಿ ಮೋಹನಕುಮಾರ್‌ ಅವರು, ‘ಪ್ರಸಕ್ತ ಸಾಲಿನಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಕಾವೇರಿ ನದಿಯಿಂದ ಹರವೆ ಪಂಚಾಯಿತಿಗೆ ಹಾಗೂ ಕಬಿನಿ ನದಿಯಿಂದ ಧರ್ಮಾಪುರ ಪಂಚಾಯಿತಿ ವ್ಯಾಪ್ತಿಗೆ ₹ 50 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧವಾಗಿದೆ’ ಎಂದರು.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಗಣಪತಿ, ಜಾಬಗೆರೆ ಗ್ರಾಮದಲ್ಲಿ ಸೆಸ್ಕಾಂ ಕುಡಿಯುವ ನೀರು ಯೋಜನೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಆಕ್ಷೇಪಿಸಿದರು.
ಕೃಷಿ ಇಲಾಖೆ ಅಧಿಕಾರಿ ನವೀನ್‌, ತಾಲ್ಲೂಕಿನಲ್ಲಿ ವಾಡಿಕೆ ಮಳೆಗಿಂತಲೂ 73 ಮಿ.ಮಿ. ಮಳೆ ಕೊರತೆಯಾಗಿದೆ. ಬಿಳಿಕೆರೆ, ಆಸ್ಪತ್ರೆಕಾವಲ್‌, ಉದ್ದೂರು ನಾಲಾ, ನಲ್ಲೂರು ಪಾಲಾ ನಾಲಾ ಪ್ರದೇಶದ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತಕ್ಕೆ ಕೊಳೆ ರೋಗ ಕಾಣಿಸಿಕೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.