ADVERTISEMENT

ಸಚಿವ ಭೇಟಿ: ಮನವೊಲಿಕೆ ಯತ್ನ

6ನೇ ದಿನಕ್ಕೆ ಕಾಲಿಟ್ಟ ಫಾಲ್ಕನ್ ಕಾರ್ಮಿಕರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 8:58 IST
Last Updated 28 ಮಾರ್ಚ್ 2015, 8:58 IST

ಮೈಸೂರು: ಸ್ಥಗತಗೊಂಡಿರುವ ಫಾಲ್ಕನ್‌ ಟೈರ್ಸ ಕಾರ್ಖಾನೆಯನ್ನು ಪುನರ್‌ ಆರಂಭಿಸಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾರ್ಮಿಕರನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಶುಕ್ರವಾರ ಭೇಟಿ ಮಾಡಿ ಮನವೊಲಿಸಲು ಯತ್ನಿಸಿದರು.

ಬಳಿಕ ಮಾತನಾಡಿದ ಅವರು, ಕಾರ್ಖಾನೆ ಸ್ಥಗಿತಗೊಂಡು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಕೂಡ ಗಮನ ಸೆಳೆದಿದೆ. ಈ ವಿಚಾರವನ್ನು ವಿಧಾನಮಂಡಲದ ಅಧಿವೇಶದಲ್ಲಿ ಪ್ರಸ್ತಾಪಿಸಿ, ಬಗೆಹರಿಸಲು ಯತ್ನಿಸಲಾಗುವುದು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು. ಅಲ್ಲದೇ, ಕಾರ್ಮಿಕರು ಹಾಗೂ ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಲಾಗುವುದು ಎಂದರು.

ಆಗ ಪ್ರತಿಕ್ರಿಯಿಸಿದ ಫಾಲ್ಕನ್‌ ಟೈರ್ಸ ಕಾರ್ಮಿಕರ ಸಂಘದ ಡಿ.ವಿ. ದೇವರಾಜ್‌, ಮಾಲೀಕರ ಧನದಾಹದಿಂದ ಕಾರ್ಖಾನೆ ಬಿಕ್ಕಟ್ಟಿಗೆ ಒಳಗಾಗಿದೆ. 39 ವರ್ಷದ ಬಳಿಕ ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳುವವರೆಗೆ ಧರಣಿಯನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಕಾರ್ಖಾನೆ ದುಸ್ಥಿತಿಗೆ ಕಾರಣ ಆಗಿರುವ ರೂಹಿಯಾ ಸಮೂಹ ಸಂಸ್ಥೆಗಳ ವಿರುದ್ಧ ಆರಂಭಿಸಿದ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.