ADVERTISEMENT

ಸಾಲ ಯೋಜನೆ ಬಿಡುಗಡೆ

ಮಾರ್ಗದರ್ಶಿ ಬ್ಯಾಂಕ್‌: 2015–16ನೇ ಸಾಲಿಗೆ ಒಟ್ಟು ₹ 6,459 ಕೋಟಿ ಸಾಲ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 11:26 IST
Last Updated 27 ಮಾರ್ಚ್ 2015, 11:26 IST
ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹ ವಾರ್ಷಿಕ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಕೆ.ಎನ್‌. ಶಿವಲಿಂಗಯ್ಯ, ಸಿಇಒ  ಪಿ.ಎ. ಗೋಪಾಲ್‌, ಜಿಲ್ಲಾಧಿಕಾರಿ ಸಿ. ಶಿಖಾ, ಎಸ್‌ಬಿಎಂ ವಲಯದ ಡಿಜಿಎಂ ಪಿ. ಬಾಲಕೃಷ್ಣನ್‌ ಇದ್ದಾರೆ
ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹ ವಾರ್ಷಿಕ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಕೆ.ಎನ್‌. ಶಿವಲಿಂಗಯ್ಯ, ಸಿಇಒ ಪಿ.ಎ. ಗೋಪಾಲ್‌, ಜಿಲ್ಲಾಧಿಕಾರಿ ಸಿ. ಶಿಖಾ, ಎಸ್‌ಬಿಎಂ ವಲಯದ ಡಿಜಿಎಂ ಪಿ. ಬಾಲಕೃಷ್ಣನ್‌ ಇದ್ದಾರೆ   

ಮೈಸೂರು: ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್‌ 2015–16ನೇ ಸಾಲಿಗೆ ಆದ್ಯತಾ ವಲಯಕ್ಕೆ ₹ 5,183 ಕೋಟಿ ಮತ್ತು ಆದ್ಯತೆಯೇತರ ವಲಯಕ್ಕೆ ₹ 1,276 ಕೋಟಿ ಸೇರಿದಂತೆ ಒಟ್ಟು ₹ 6,459 ಕೋಟಿ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದೆ.

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಜಿಲ್ಲಾ ವಾರ್ಷಿಕ ಸಾಲ ಯೋಜನೆ’ಯನ್ನು ಸಂಸದ ಪ್ರತಾಪ ಸಿಂಹ ಬಿಡುಗಡೆ ಮಾಡಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಕೆ.ಎನ್‌. ಶಿವಲಿಂಗಯ್ಯ ಮಾತನಾಡಿ, ‘ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ ಆದ್ಯತಾ ವಲಯಕ್ಕೆ ₹ 729.40 ಕೋಟಿ ಹಾಗೂ ಆದ್ಯತೆಯೇತರ ವಲಯಕ್ಕೆ ₹ 156.20 ಕೋಟಿ ಹೆಚ್ಚಿನ ಸಾಲ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಸರ್ಕಾರಿ ವಲಯಕ್ಕೆ ₹ 3,624.20 ಕೋಟಿ ಹಾಗೂ ಖಾಸಗಿ ವಲಯಕ್ಕೆ ₹ 625.86 ಕೋಟಿಗಳಷ್ಟು ಹೆಚ್ಚಿನ ಸಾಲ ಬಿಡುಗಡೆ ಮಾಡಲಾಗುವುದು.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ₹ 560.74 ಕೋಟಿ, ಸಹಕಾರಿ ಬ್ಯಾಂಕುಗಳ ವಲಯದಲ್ಲಿ ಭೂ ಅಭಿವೃದ್ಧಿ ಬ್ಯಾಂಕಿಗೆ ₹ 39 ಕೋಟಿ, ಜಿಲ್ಲಾ ಸಹಕಾರಿ ಬ್ಯಾಂಕು ಮತ್ತು ಇತರೆ ಬ್ಯಾಂಕುಗಳಿಗೆ ₹ 289.80 ಕೋಟಿ ಹಾಗೂ ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ ₹ 43 ಕೋಟಿ ಬಿಡುಗಡೆ ಮಾಡಲಾಗುತ್ತದೆ’ ಎಂದರು.

‘ವಾರ್ಷಿಕ ಸಾಲ ಯೋಜನೆಯಲ್ಲಿ ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ, ಪಶುಸಂಗೋಪನಾ ಚಟುವಟಿಕೆಗಳಿಗಾಗಿ ಹೆಚ್ಚಿನ ಹಣ ಕಾಯ್ದಿರಿಸಲಾಗಿದೆ. ಸಣ್ಣ ನೀರಾವರಿಗೆ ₹ 39 ಕೋಟಿ, ಭೂ ಅಭಿವೃದ್ಧಿಗೆ ₹ 98 ಕೋಟಿ, ಕೃಷಿ ಯಾಂತ್ರೀಕರಣಕ್ಕೆ ₹ 75 ಕೋಟಿ, ತೋಟಗಾರಿಕೆಗೆ ₹ 100 ಕೋಟಿ, ಹೈನುಗಾರಿಕೆಗೆ ₹ 105 ಕೋಟಿ, ಕೋಳಿ ಸಾಕಾಣಿಕೆಗೆ ₹ 70 ಕೋಟಿ, ಇತರೆ ಪಶುಸಂಗೋಪನೆ ಚಟುವಟಿಕೆಗೆ ₹ 20 ಕೋಟಿ, ಮೀನುಗಾರಿಕೆಗೆ ₹ 6 ಕೋಟಿ. ಅರಣ್ಯೀಕರಣಕ್ಕೆ ₹ 5 ಕೋಟಿ ಹಾಗೂ ಇತರೆ ಕೃಷಿಪೂರಕ ಚಟುವಟಿಕೆ ಸೇರಿದಂತೆ ಒಟ್ಟು ₹ 676 ಕೋಟಿ ಕಾಯ್ದಿರಿಸಲಾಗಿದೆ’ ಎಂದು ಹೇಳಿದರು.
*
ಅಂಕಿ– ಅಂಶ
5,183 ಕೋಟಿ ರೂಪಾಯಿ ಆದ್ಯತಾ ವಲಯಕ್ಕೆ ವಿತರಣೆ
1,276 ಕೋಟಿ ಆದ್ಯತಾಯೇತರ ವಲಯಕ್ಕೆ ವಿತರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.