ADVERTISEMENT

ಸೃಷ್ಟಿಯ ಅಪವ್ಯಯ ಸಲ್ಲದು

‘ಪರಿಸರ ಮಿತ್ರ ಶಾಲೆ’ ಪ್ರಶಸ್ತಿ ಪ್ರದಾನ: ನ್ಯಾ. ಮುದಗಲ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2015, 11:36 IST
Last Updated 4 ಮಾರ್ಚ್ 2015, 11:36 IST

ಮೈಸೂರು: ‘ನಾವು ಕೇಳದಿದ್ದರೂ ಸೃಷ್ಟಿ ನಮಗೆಲ್ಲವನ್ನೂ ನೀಡಿದೆ. ಅದನ್ನು ನಾವೊಬ್ಬರೇ ಬಳಸದೆ ನಮ್ಮ ಹಿರಿಯರು ನಮಗೆ ಬಿಟ್ಟುಕೊಟ್ಟಂತೆ, ನಾವು ಮುಂದಿನ ಪೀಳಿಗೆಗೂ ನೀಡಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಹೇಳಿದರು.

ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜನಜಾಗೃತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಗರದ ಕೆ.ಆರ್.ಎಸ್. ರಸ್ತೆಯಲ್ಲಿರುವ ಐಡಿಯಲ್ ಜಾವಾ ರೋಟರಿ ಪ್ರೌಢಶಾಲಾ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಪರಿಸರ ಮಿತ್ರ ಶಾಲಾ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿದತ್ತವಾಗಿ ಲಭಿಸಿರುವ ನೈಸರ್ಗಿಕ ಸಂಪತ್ತನ್ನು ಮನುಷ್ಯ ತನ್ನ ದುರಾಸೆಯಿಂದ ಅಪವ್ಯಯ ಮಾಡ ಬಾರದು. ಅವುಗಳನ್ನು ಇತಿಮಿತಿಯಲ್ಲಿ ಉಪ ಯೋಗಿಸಿ, ಇತರರಿಗೂ ಅದರ ಪ್ರಯೋಜನ ಸಿಗುವಂತಾಗಬೇಕು. ಅದರಲ್ಲೂ ಮಕ್ಕಳು ಪರಿಸರ ಕಾಳಜಿ ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಸಿ. ಶಿಖಾ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ನಾಗರಿಕರಾಗುವುದರಿಂದ ಅವರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು. ಮಕ್ಕಳು ಮೊದಲು ತಮ್ಮ ಮನೆ, ಶಾಲೆ, ಗ್ರಾಮ ಹಾಗೂ ದೇಶದ ಬಗ್ಗೆ ಅಪಾರ ಗೌರವ ಬೆಳೆಸಿಕೊಳ್ಳಬೇಕು. ಈ ಸ್ಪರ್ಧೆಯಲ್ಲಿ ಮೈಸೂರು, ನಂಜನಗೂಡು, ಎಚ್.ಡಿ. ಕೋಟೆ ತಾಲ್ಲೂಕಿನ ಶಾಲೆಗಳು ಪೂರ್ಣವಾಗಿ ಭಾಗವಹಿಸಿಲ್ಲ. ಡಿಡಿಪಿಐ ಹಾಗೂ ಬಿಇಒಗಳು ಈ ಕೊರತೆ ತುಂಬಬೇಕಾಗಿದೆ ಎಂದು ಸೂಚಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ, ಹಿರಿಯ ಪರಿಸರ ಅಧಿಕಾರಿ ಎಂ. ಲಕ್ಷ್ಮಣ್, ಡಿಡಿಪಿಐ ಎಚ್.ಆರ್. ಬಸಪ್ಪ, ಜಿಲ್ಲಾ ಉಪ ಯೋಜನ ಸಮನ್ವಯಾಧಿಕಾರಿ ಎಸ್. ಚಂದ್ರ ಪಾಟೀಲ್, ಪರಿಸರ ಅಧಿಕಾರಿ ಪಿ. ನಿರಂಜನ, ಕೆ.ಎಲ್. ಸವಿತಾ, ಜನಜಾಗೃತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವಿ.ಎನ್. ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.