ADVERTISEMENT

ಸೋಲೇ ನನ್ನ ಚಳವಳಿ: ವಾಟಾಳ್

​ಪ್ರಜಾವಾಣಿ ವಾರ್ತೆ
Published 24 ಮೇ 2016, 9:39 IST
Last Updated 24 ಮೇ 2016, 9:39 IST

ಮೈಸೂರು: ‘ಸೋಲೇ ನನ್ನ ಚಳವಳಿ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ವ್ಯಾಖ್ಯಾನಿಸಿದರು. ಇಲ್ಲಿ ಅವರು ಸೋಮವಾರ ವಿಧಾನಪರಿಷತ್ತಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಚೆಗೆ ಅವರಿಗೆ ಸೋಲುಂಟಾಗುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ನನಗೆ 5 ಗೆಲುವು, 13 ಸೋಲಾಗಿದೆ. ಸೋಲೇ ನನಗೆ ಗೆಲುವಿನ ಮೆಟ್ಟಿಲು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೇಲ್ಮನೆ ಚುನಾವಣೆ ಬಹಳ ಪವಿತ್ರವಾದ ಚುನಾವಣೆ. ಇಲ್ಲಿ ಮೇಧಾವಿಗಳು, ಚಳವಳಿಗಾರರು ಇರಬೇಕಾದ ತಾಣ. ಆದರೆ, ಈಚೆಗೆ ಇದು ಧನಿಕರ, ಶೋಷಿತರ ಹಾಗೂ ರಿಯಲ್‌ ಎಸ್ಟೇಟ್ ಉದ್ಯಮಿದಾರರ ತಾಣವಾಗುತ್ತಿದೆ. ಇದನ್ನು ನಿಲ್ಲಿಸಲು ಚುನಾವಣೆಯಲ್ಲಿ ಸ್ಪರ್ಧಿಸಿರುವೆ ಎಂದು ತಿಳಿಸಿದರು.

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಲು ಹೊರಟಿರುವ ಬಿಜೆಪಿ ಕ್ರಮವನ್ನು ಖಂಡಿಸಿದ ಅವರು, ಇನ್ನಾದರೂ ಕನ್ನಡಿಗರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ವಾಟಾಳ್ ನಾಗರಾಜ್ ಪರಸ್ಪರ ಎದುರುಗೊಂಡು, ಆಲಂಗಿಸಿಕೊಂಡರು.
ಇದಕ್ಕೂ ಮುನ್ನ ಅವರು ಜೋಡಿಕುದುರೆ ಸಾರೋಟಿನಲ್ಲಿ ಬಂದು ನಾಮಪತ್ರ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ನಿರ್ಮಾಪಕ ಸಾ.ರಾ.ಗೋವಿಂದು, ‘ಬಿಜೆಪಿ ಅವರಿಗೆ ಧಮ್ ಇದ್ದರೆ ಹೈಕಮಾಂಡ್ ಆದೇಶವನ್ನು ಧಿಕ್ಕರಿಸಿ ಕನ್ನಡಿಗರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲಿ’ ಎಂದು ಸವಾಲು ಹಾಕಿದರು.

ಕಾದು ಕುಳಿತ ಕುಮಾರಸ್ವಾಮಿ: ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಹೆಚ್ಚು ಅಭ್ಯರ್ಥಿಗಳು ಬಂದಿದ್ದರು. ಇದರಿಂದಾಗಿ ಎಚ್.ಡಿ.ಕುಮಾರಸ್ವಾಮಿ ಗಂಟೆಗಟ್ಟಲೆ ಕಾಯಬೇಕಾಯಿತು. ವಾಟಾಳ್ ನಾಗರಾಜ್, ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಮಂಚೇಗೌಡ ಸೇರಿದಂತೆ ಅನೇಕರು ಏಕಕಾಲಕ್ಕೆ ನಾಮಪತ್ರ ಸಲ್ಲಿಸಲು ಬಂದರು. ಅವರೆಲ್ಲರ ಬೆಂಬಲಿಗರು ಪ್ರಾದೇಶಿಕ ಆಯುಕ್ತರ ಕಚೇರಿಯ ಹೊರಗೆ ಜಮಾಯಿಸಿದ್ದರಿಂದ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು.

ಶ್ರೀಕಂಠೇಗೌಡ ಅವರೊಂದಿಗೆ ಶಾಸಕರಾದ ಎಚ್.ಡಿ. ಕುಮಾರಸ್ವಾಮಿ, ಸಾ.ರಾ. ಮಹೇಶ್, ಚಿಕ್ಕಮಾದು, ವಿಧಾನಪರಿಷತ್ತಿನ ಉಪಸಭಾಪತಿ ಮರಿತಿಬ್ಬೇಗೌಡ ಜತೆಯಾದರು.

19 ಅಭ್ಯರ್ಥಿಗಳಿಂದ 29 ನಾಮಪತ್ರ ಸಲ್ಲಿಕೆ
ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಒಟ್ಟು 19 ಅಭ್ಯರ್ಥಿಗಳು 29 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕೊನೆಯ ದಿನವಾದ ಸೋಮವಾರ 16 ನಾಮಪತ್ರಗಳು ಸಲ್ಲಿಕೆಯಾದವು.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಾ.ಎಚ್.ಎನ್.ರವೀಂದ್ರ 1, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ 2, ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಟಿ.ಶ್ರೀಕಂಠೇಗೌಡ 3, ಕರುನಾಡ ಪಾರ್ಟಿ ಅಭ್ಯರ್ಥಿಯಾಗಿ ಎಚ್.ಕೆ.ಕೃಷ್ಣ 1, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕೆ.ಪಿ.ಚಿದಾನಂದ 1, ಪಕ್ಷೇತರ ಅಭ್ಯರ್ಥಿಯಾಗಿ ಆರ್.ಕೆ.ಗೋವಿಲ್ 1, ಎಚ್.ಎನ್. ಮಂಜೇಗೌಡ 2,  ಎಂ.ಎನ್.ರವಿಶಂಕರ 1, ವೀರಭದ್ರಸ್ವಾಮಿ 1, ವೈ.ಎಸ್. ಸಿದ್ಧರಾಜು 1, ಜಿ.ಎನ್.ಮಂಜು 1 ಹಾಗೂ ಜಿ.ಎಸ್.ವಿಶ್ವನಾಥ್ 1 ನಾಮಪತ್ರ ಸಲ್ಲಿಸಿದರು.   

ಮೇ 24ರಂದು ಬೆಳಿಗ್ಗೆ 11ರಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 26ರ ಮಧ್ಯಾಹ್ನ 3 ಗಂಟೆಯೊಳಗೆ ಉಮೇದುವಾರಿಕೆ ಹಿಂಪಡೆಯಬಹುದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.