ADVERTISEMENT

ಹಾಲು ಹರವಿ ಸೇವೆ ಸಲ್ಲಿಸಿದ ಮಕ್ಕಳು

ಮಲೆಮಹದೇಶ್ವರ ನಾಲ್ಕು ದಿನಗಳ ಜಾತ್ರೆಗೆ ಸಂಭ್ರಮದ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 7:34 IST
Last Updated 24 ಅಕ್ಟೋಬರ್ 2014, 7:34 IST

ಪಿರಿಯಾಪಟ್ಟಣ: ಪಟ್ಟಣದ ಹೊರವಲಯದಲ್ಲಿರುವ ಪ್ರಸಿದ್ಧ ಮಲೆಮಹದೇಶ್ವರ ಸ್ವಾಮಿಯ ನಾಲ್ಕು ದಿನಗಳ ಜಾತ್ರಾ ಮಹೋತ್ಸವ ಹಾಗೂ ಪೂಜಾ ಕಾರ್ಯಕ್ಕೆ ಬುಧವಾರ ರಾತ್ರಿ  ಚಾಲನೆ ನೀಡಲಾಯಿತು.

ದೇವರ ಮೂಲಸ್ಥಳವಾದ ಮಹದೇಶ್ವರ ಮಠದಿಂದ ರಾತ್ರಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಗುರುವಾರ ಬೆಳಿಗ್ಗೆ ಮಹದೇಶ್ವರಸ್ವಾಮಿಯ ಹಾಲು ಹರವಿ ಕಾರ್ಯಕ್ರಮ ನಡೆಸಲಾಯಿತು.

ಮಹದೇಶ್ವರಸ್ವಾಮಿ ಮಠದಿಂದ  ಚಿಕ್ಕಕೆರೆಯವರೆಗೆ ಮೆರವಣಿಗೆ ಸಾಗಿದ ಬಾಲಕಿಯರು ಕಳಸ ಹೊರುವ ಮೂಲಕ ಹಾಲು ಹರವಿ ಸೇವೆ ಸಲ್ಲಿಸಿದರು. ಅನಾರೋಗ್ಯ ಅಥವಾ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಹಾಲು ಹರವಿ ಸೇವೆ ಸಲ್ಲಿಸುವುದಾಗಿ ಹರಕೆ ಹೊರುವುದು ಇಲ್ಲಿನ ಪದ್ಧತಿ. ಅದರಂತೆ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಹಾಲು ಹರವಿ ಸಂದರ್ಭದಲ್ಲಿ ಮಕ್ಕಳು ಹಾಲು ಹರವಿ ಸೇವೆ ಸಲ್ಲಿಸುವರು.

ಶುಕ್ರವಾರ (ಅ. 24) ರಾತ್ರಿ ಕೊಂಡೋತ್ಸವ ಮತ್ತು ರಥೋತ್ಸವ ನಡೆಯಲಿದ್ದು, ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ. ಶನಿವಾರ (ಅ. 25) ಪಂಜಿನ ಉತ್ಸವ ನಡೆಯಲಿದ್ದು, ರಾತ್ರಿ ಸ್ವಾಮಿಯ ಮೆರವಣಿಗೆಯು ವಿವಿಧ ಕಲಾತಂಡಗಳ ನೇತೃತ್ವದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗುವುದು. ಭಾನುವಾರ (ಅ. 26) ಬೆಳಿಗ್ಗೆ ದೇವರನ್ನು ಮೂಲಸ್ಥಾನಕ್ಕೆ ತರಲಾಗುವುದು.

ರಾವಂದೂರಿನಲ್ಲಿ ಜಾತ್ರೆ:
ರಾವಂದೂರಿನಲ್ಲಿರುವ ಮಹದೇಶ್ವರ ದೇವಾಲಯದಲ್ಲಿ ಅಮಾವಾಸ್ಯೆ  ಪ್ರಯುಕ್ತ ಗುರುವಾರ ಜಾತ್ರಾಮಹೋತ್ಸವ ಜರುಗಿತು.
ಸುತ್ತಮುತ್ತಲಿನ ಗ್ರಾಮದ ಭಕ್ತರು ಹರಕೆ  ತೀರಿಸಿದರು. ಭಕ್ತಾಧಿಗಳಿಗೆ ದೇವಾಲಯದ ವತಿಯಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.
ನಂತರ ಮಹದೇಶ್ವರ ಪ್ರತಿಮೆಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.