ADVERTISEMENT

ಹಾಸ್ಟೆಲ್‌ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 9:36 IST
Last Updated 25 ಅಕ್ಟೋಬರ್ 2016, 9:36 IST

ಮೈಸೂರು: ಇಲ್ಲಿನ ಶಾಂತವೇರಿ ಗೋಪಾಲಗೌಡ ನಗರದಲ್ಲಿರುವ ಸಮಾಜಕಲ್ಯಾಣ ಇಲಾಖೆಗೆ ಸೇರಿದ ವೃತ್ತಿಪರ ವಿದ್ಯಾರ್ಥಿನಿಲಯದ ಅವ್ಯವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿಗಳು ಸೋಮವಾರ ರಾತ್ರಿ ದಿಢೀರ್‌ ಪ್ರತಿಭಟನೆ ನಡೆಸಿದರು.

ಕಲುಷಿತ ಆಹಾರ ಸೇವಿಸಿ ಭೀಮರಾವ್‌ ಹಾಗೂ ವೀರೇಶ್‌ ಎಂಬುವವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಹಾಸ್ಟೆಲ್‌ ಆವರಣದಲ್ಲಿ ಹಾವು ಕಚ್ಚಿದ ಪರಿಣಾಮ ಶಿವಣ್ಣ ಎಂಬ ವಿದ್ಯಾರ್ಥಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಮಾಹಿತಿ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂಸಿಎ, ಎಲ್‌ಎಲ್‌ಬಿ, ಎಂಕಾಂ ಸೇರಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇದ್ದಾರೆ. ಶುದ್ಧ ಕುಡಿಯುವ ನೀರು ಸೇರಿ ಹಲವು ಸೌಲಭ್ಯಗಳು ಮರೀಚಿಕೆಯಾಗಿವೆ. ಹಾಸ್ಟೆಲ್‌ನಲ್ಲಿ ಒಬ್ಬರೇ ಅಡುಗೆ ತಯಾರಕರಿದ್ದಾರೆ.
ಇದರಿಂದ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಊಟ, ತಿಂಡಿ ಸಿಗುತ್ತಿಲ್ಲ. ಉಪವಾಸದಿಂದ ಮಲಗಿದ ನಿದರ್ಶನಗಳೂ ಇವೆ ಎಂದು ಆರೋಪಿಸಿದರು.

ADVERTISEMENT

ಶೌಚಾಲಯ ದುಃಸ್ಥಿತಿಯಲ್ಲಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ಸೌಲಭ್ಯ, ಸಿಬ್ಬಂದಿ ಕೊರತೆಯಿಂದಾಗಿ ಶಿಕ್ಷಣಕ್ಕೆ ತೊಂದರೆ ಉಂಟಾಗುತ್ತಿದೆ. ಹಾಸ್ಟೆಲ್‌ಗೆ ನಿಲಯ ಪಾಲಕರಿಲ್ಲ. ಪ್ರಭಾರ ವಾರ್ಡನ್‌ ಹಾಗೂ ಸಹಾಯಕ ವಾರ್ಡನ್‌ ಉದ್ಧಟತನದಿಂದ ವರ್ತಿಸುತ್ತಿದ್ದಾರೆ.

ಈ ಸಂಬಂಧ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಜಂಟಿ ನಿರ್ದೇಶಕಿ ಪ್ರಭಾ ಅವರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಗುರುಸ್ವಾಮಿ, ಸುನಿಲ್‌, ರಘು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.