ADVERTISEMENT

ಹೆಚ್ಚುತ್ತಿದೆ ಮಧುಮೇಹಿಗಳ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2017, 6:42 IST
Last Updated 27 ಜೂನ್ 2017, 6:42 IST
ಹೆಚ್ಚುತ್ತಿದೆ ಮಧುಮೇಹಿಗಳ ಸಂಖ್ಯೆ
ಹೆಚ್ಚುತ್ತಿದೆ ಮಧುಮೇಹಿಗಳ ಸಂಖ್ಯೆ   

ಮೈಸೂರು: ‘ನಿವೃತ್ತರ ಸ್ವರ್ಗ ಎನಿಸಿರುವ ನಗರದಲ್ಲೂ ಮಧುಮೇಹ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಸುಮಾರು ಶೇ 14 ರಷ್ಟು ಜನರಲ್ಲಿ ಈ ವ್ಯಾಧಿ ಇದೆ. ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆ, ವೇಗ ಹಾಗೂ ಸ್ಪರ್ಧಾತ್ಮಕ ಜೀವನಕ್ಕೆ ಹೊಂದಿಕೊಳ್ಳುವ ಧಾವಂತದಲ್ಲಿ ಸೃಷ್ಟಿಯಾಗುತ್ತಿರುವ ಒತ್ತಡ ಮಧುಮೇಹಕ್ಕೆ ದಾರಿ ಮಾಡಿಕೊಡುತ್ತಿವೆ’

‘ವಿಶ್ವ ಮಧುಮೇಹ ದಿನ’ದ ಮುನ್ನಾದಿನ ಮಧುಮೇಹ ತಜ್ಞ, ವೈದ್ಯ ಸಾಹಿತಿ ಡಾ.ವಿ.ಲಕ್ಷ್ಮಿನಾರಾಯಣ್‌ ‘ಪ್ರಜಾವಾಣಿ’ಗೆ ನೀಡಿದ ಪ್ರತಿಕ್ರಿಯೆ ಇದು.

‘ಮಧುಮೇಹ ಸಮಸ್ಯೆ ಹೊತ್ತು ಕ್ಲಿನಿಕ್‌ಗಳಿಗೆ ಬರುವವರ ಸಂಖ್ಯೆ ಹೆಚ್ಚಿದೆ. 30ರಿಂದ 35 ವರ್ಷದೊಳಗಿನ ಯುವಕರೂ ಬರುತ್ತಿದ್ದಾರೆ. ಹಿಂದೆ 45–50 ವರ್ಷದವರು ಮಾತ್ರ ಬರುತ್ತಿದ್ದರು. ಮಧ್ಯಮ ವರ್ಗದ ಉದ್ಯೋಗಿಗಳು ಹಾಗೂ ಪ್ರಮುಖವಾಗಿ ಯುವಕರು ಈ ವ್ಯಾಧಿಗೆ ಸಿಲುಕಿದ್ದಾರೆ’ ಎಂದು ಸಮಸ್ಯೆಯ ಗಂಭೀರತೆಯನ್ನು ತೆರೆದಿಟ್ಟರು.

ADVERTISEMENT

‘ನಗರವಾಸಿಗಳಿಗೆ ಹಾಗೂ ವಯೋವೃದ್ಧರಿಗೆ ಬರುತ್ತಿದ್ದ ಮಧುಮೇಹ ಈಗ ಬಡವರು ಹಾಗೂ ಚಿಕ್ಕ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ಸಾಂಕ್ರಾಮಿಕ ಕಾಯಿಲೆಗಳಿಂದ ಸಾವನ್ನಪ್ಪುವವರ ಪ್ರಮಾಣ ಕ್ಕಿಂತ ಸಾಂಕ್ರಾಮಿಕವಲ್ಲದ ಮಧುಮೇಹ, ಅತಿರಕ್ತದೊತ್ತಡ, ಹೃದ್ರೋಗಗಳು, ಪಾರ್ಶ್ವವಾಯು, ಕ್ಯಾನ್ಸರ್‌ನಿಂದ ಹೆಚ್ಚು ಸಾವು, ನೋವುಗಳು ಸಂಭವಿಸುತ್ತಿವೆ’ ಎಂದು ಮಾಹಿತಿ ನೀಡಿದರು.

ನಗರದ ಶಾಲಾ ಕಾಲೇಜುಗಳ ಬಳಿ ಜಂಕ್‌ ಫುಡ್‌, ಫಾಸ್ಟ್‌ ಫುಡ್‌ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿದೆ. ಇಂಥ ಆಹಾರಕ್ಕೆ ಮಾರು ಹೋಗುತ್ತಿರುವ ಮಕ್ಕಳು ಸುಲಭವಾಗಿ ಹಲವು ರೋಗಗಳಿಗೆ ಒಳಗಾಗುತ್ತಿದ್ದಾರೆ. ಕೆಲಸ ಅರಸಿ ಹಳ್ಳಿಗಳಿಂದ ನಗರಕ್ಕೆ ಬರುವವರಲ್ಲಿ ಆಹಾರ ಪದ್ಧತಿ, ನಿತ್ಯ ಜೀವನ ಕ್ರಮ ಬದಲಾಗುತ್ತಿರುವುದು ಕಾರಣವಾಗುತ್ತಿದೆ.

‘ಐಟಿ, ಬಿಟಿ ಹಾಗೂ ಇನ್ನಿತರ ಕಂಪೆನಿಗಳ ಉದ್ಯೋಗಿಗಳು ಮಧ್ಯರಾತ್ರಿ ಜಂಕ್‌ ಫುಡ್‌ ತಿನ್ನುತ್ತಿರುವುದು, ಅರ್ಧ ಗಂಟೆಗೊಮ್ಮೆ ಚಹಾ, ಕಾಫಿ ಸೇವಿಸುವುದನ್ನು ನಾನು ಹಲವು ಬಾರಿ ಗಮನಿಸಿದ್ದೇನೆ. ರಾತ್ರಿ ಕೆಲಸ ಮಾಡುವ ಇವರು ಹಗಲಿಡೀ ನಿದ್ದೆ ಮಾಡುತ್ತಾರೆ’ ಎಂದು ಬದಲಾಗಿರುವ ಜೀವನಶೈಲಿಯನ್ನು ಉದಾಹರಣೆ ಸಮೇತ ತೆರೆದಿಟ್ಟರು.

ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಕಳೆದ 20 ವರ್ಷಗಳಲ್ಲಿ 20 ಪಟ್ಟು ಹೆಚ್ಚಾಗಿದೆ. ಚೀನಾ ನಂತರದ ಸ್ಥಾನದಲ್ಲಿದೆ. ಸದ್ಯ 6.9 ಕೋಟಿ ಜನರಲ್ಲಿ ಈ ಸಮಸ್ಯೆ ಇದೆ. 2040ರ ವೇಳೆಗೆ 12.5 ಕೋಟಿ ಜನರಲ್ಲಿ ಮಧುಮೇಹ ಕಾಣಿಸಿಕೊಳ್ಳಬಹುದೆಂದು ಅಂದಾಜಿಸಲಾಗಿದೆ ಎಂದರು.

‘ಹಿಂದೆ ಅನುಸರಿಸುತ್ತಿದ್ದ ಆಹಾರ, ಆಚಾರ, ಪ್ರಾಣಾಯಾಮ ಮತ್ತು ಯೋಗಸೂತ್ರಗಳನ್ನು ಮರೆತು ಆಧುನಿಕ ಶೈಲಿಗೆ ಮೊರೆ ಹೋಗುತ್ತಿದ್ದೇವೆ. ಆಧುನಿಕತೆಯ ಹೆಸರಿನಲ್ಲಿ ಪುರಾತನ ಜೀವನಶೈಲಿಯಿಂದ ದೂರವಾಗಿ ಆರೋಗ್ಯದ ದಿಕ್ಕಿನಿಂದ ಅನಾರೋಗ್ಯದ ದಿಕ್ಕಿಗೆ ಬದಲಾಗುತ್ತಿದ್ದೇವೆ’ ಎಂದು ಹೇಳಿದರು.

ಪುಸ್ತಕಕ್ಕೆ ಬೇಡಿಕೆ: ಲಕ್ಷ್ಮಿನಾರಾಯಣ್‌ ರಚಿಸಿರುವ ‘ಮಧುಮೇಹ– ಭಾರತದ ಅಗೋಚರ ಶತ್ರು’ ಪುಸ್ತಕ ಈಗ ನಾಲ್ಕನೇ ಮುದ್ರಣ ಕಂಡಿದೆ. ಸುಮಾರು 10 ಸಾವಿರ ಪ್ರತಿಗಳು ಮಾರಾಟವಾಗಿವೆ.

**

ಯಾರು ತಪಾಸಣೆಗೆ ಒಳಗಾಗಬೇಕು?
* ಬೊಜ್ಜು ದೇಹದವರಾದರೆ, ಕುಟುಂಬದಲ್ಲಿ ತಂದೆ, ತಾಯಿ, ಒಡಹುಟ್ಟಿದವರಲ್ಲಿ ಮಧುಮೇಹವಿದ್ದರೆ, ವ್ಯಕ್ತಿಗೆ 30 ವರ್ಷ ದಾಟಿದ್ದರೆ
* ಅತಿರಕ್ತದೊತ್ತಡವಿದ್ದರೆ
* ರಕ್ತದಲ್ಲಿ ಜಿಡ್ಡು, ಕೊಲೆಸ್ಟೆರಾಲ್‌ ಪ್ರಮಾಣ ಹೆಚ್ಚಾಗಿದ್ದರೆ   
* ಮಾನಸಿಕ ಒತ್ತಡಗಳಿಂದ ಬಳಲುತ್ತಿದ್ದರೆ 
* ಶರೀರದ ತೂಕ ಕಡಿಮೆ ಆಗುತ್ತಿದ್ದರೆ 
* ಗಾಯಗಳು ಸಕಾಲಕ್ಕೆ ವಾಸಿಯಾಗದಿದ್ದರೆ

**

ಮಧುಮೇಹ ತಡೆಗಟ್ಟಲು ಮಾರ್ಗಸೂಚಿಗಳು
* ಪ್ರತಿದಿನ ವ್ಯಾಯಾಮ ಮಾಡಿದರೆ ಮಧುಮೇಹ ಬರುವುದನ್ನು ಶೇ 71ರಷ್ಟು ತಡೆಗಟ್ಟಬಹುದು
* ಪ್ರತಿ ಕಿಲೋ ಗ್ರಾಂ ತೂಕ ಕಡಿಮೆ ಮಾಡಿಕೊಳ್ಳುವುದರಿಂದ ಮಧುಮೇಹ ಬರದಂತೆ ಶೇ 16ರಷ್ಟು ತಡೆಯಬಹುದು
* ಯೋಗಾಭ್ಯಾಸದಿಂದ 3 ತಿಂಗಳಲ್ಲಿ ದೇಹದಲ್ಲಿನ ಸಕ್ಕರೆ ಅಂಶ ಕಡಿಮೆ ಯಾಗುತ್ತದೆ ಎಂಬುದನ್ನು ವೈಜ್ಞಾನಿಕ ಅಂಶಗಳಿಂದ ಕಂಡುಕೊಳ್ಳಲಾಗಿದೆ  
* ಮಂದಗತಿಯಲ್ಲಿ ಜೀರ್ಣವಾಗುವ ಆಹಾರ ಪದಾರ್ಥ ಸೇವಿಸಬೇಕು 
* ಘನ ರೂಪದಲ್ಲಿರುವ ಆಹಾರ ಪದಾರ್ಥ ಉತ್ತಮ

**

ರಾತ್ರಿ ಪಾಳಿ ಕೆಲಸ, ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು, ದೇಹಕ್ಕೆ ಅಗತ್ಯವಿರುವಷ್ಟು ದೈಹಿಕ ಶ್ರಮ ನೀಡದೆ ಇರುವುದು ಮಧುಮೇಹಕ್ಕೆ ದಾರಿಯಾಗುವುದು.
-ಡಾ.ವಿ.ಲಕ್ಷ್ಮಿನಾರಾಯಣ್‌, ಮಧುಮೇಹ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.