ADVERTISEMENT

ಹೆಚ್ಚುತ್ತಿರುವ ಮಾನವ– ಹುಲಿ ಸಂಘರ್ಷ

ನಾಗರಹೊಳೆಯ ಹುಲಿಗಳ ಸರಣಿ ಸಾವಿನ ಸುತ್ತ...

ಕೆ.ಎಸ್.ಗಿರೀಶ್
Published 31 ಜನವರಿ 2017, 7:29 IST
Last Updated 31 ಜನವರಿ 2017, 7:29 IST
ಹೆಚ್ಚುತ್ತಿರುವ ಮಾನವ– ಹುಲಿ ಸಂಘರ್ಷ
ಹೆಚ್ಚುತ್ತಿರುವ ಮಾನವ– ಹುಲಿ ಸಂಘರ್ಷ   

ಮೈಸೂರು: ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಹುಲಿ ಹಾಗೂ ಮಾನವನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಕೇವಲ 30 ದಿನದ ಅಂತರದಲ್ಲಿ 5 ಹುಲಿಗಳು ಇದಕ್ಕೆ ಬಲಿಯಾಗಿದ್ದರೆ, ಹುಲಿ ಹಿಡಿಯುವ ಕಾರ್ಯಾಚರಣೆ ವೇಳೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

ಎರಡು ಹುಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿವೆ. ಈ ಎಲ್ಲ ವಿದ್ಯಾಮಾನಗಳು ಅರಣ್ಯ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿದ್ದು, ಉರುಳು ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.

ನಾಗರಹೊಳೆಗೆ ಅಗ್ರಪಟ್ಟ: ಹುಲಿಗಳ ಸಾವಿನಲ್ಲಿ ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ನಾಗರಹೊಳೆ ಹುಲಿ ರಕ್ಷಿತಾರಣ್ಯಕ್ಕೆ ಅಗ್ರ ಪಟ್ಟ ದೊರಕಿದೆ. ಕಳೆದ ವರ್ಷ ಇಡೀ ದೇಶದಲ್ಲಿ ಒಟ್ಟು 98 ಹುಲಿಗಳು ಸಾವನ್ನಪ್ಪಿದ್ದವು. ಕರ್ನಾಟಕದಲ್ಲಿ ಸಾವನ್ನಪ್ಪಿದ್ದು 17. ಇದರಲ್ಲಿ ನಾಗರಹೊಳೆ ಅರಣ್ಯದಲ್ಲಿ 10 ಹಾಗೂ ಬಂಡಿಪುರ ಅರಣ್ಯದಲ್ಲಿ 4 ಹುಲಿಗಳು ಸಾವನ್ನಪ್ಪಿವೆ.

ಜನವರಿ ತಿಂಗಳಲ್ಲಿ ದೇಶದಲ್ಲಿ 11 ಹುಲಿಗಳು ಜೀವ ಕಳೆದುಕೊಂಡಿವೆ. ರಾಜ್ಯದಲ್ಲಿ 6 ಹುಲಿಗಳು ಸಾವನ್ನಪ್ಪುವ ಮೂಲಕ ರಾಜ್ಯ ಅಗ್ರ ಸ್ಥಾನದಲ್ಲಿದೆ. ಬಂಡೀಪುರದಲ್ಲಿ 1, ನಾಗರಹೊಳೆಯಲ್ಲಿ 5 ಹುಲಿ ಸಾವನ್ನಪ್ಪಿವೆ.

ತನಿಖೆಗೆ ಸಮಿತಿ: ಹುಲಿಗಳ ಸರಣಿ ಸಾವು, ಮಾನವರ ನಡುವಿನ ಸಂಘರ್ಷ ಪ್ರಕರಣಗಳನ್ನು ತನಿಖೆ ಮಾಡಲು ಎಪಿಸಿಸಿಎಫ್ ಜಯರಾಂ ನೇತೃತ್ವದಲ್ಲಿ ಸರ್ಕಾರ ಸಮಿತಿಯೊಂದನ್ನು ನೇಮಿಸಿದೆ. ಸಮಿತಿಯಲ್ಲಿ ನಾಲ್ಕು ಎನ್‌ಜಿಒಗಳ ಸದಸ್ಯರು ಇದ್ದಾರೆ. ಇವರು ಸದ್ಯದಲ್ಲಿ ಸೃಷ್ಟಿಯಾಗಿರುವ ಹುಲಿ– ಮಾನವ ಸಂಘರ್ಷ ಹಾಗೂ ಹುಲಿಗಳ ಸರಣಿ ಸಾವಿನ ಕುರಿತು ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ನೀಡಲಿದ್ದಾರೆ.

ಹುಲಿ ರಕ್ಷಣೆಗೆ ಬದ್ಧ: ಒಂದು ಹುಲಿ ಮಾತ್ರ ಕಾಡಿನಲ್ಲಿ ಸಹಜವಾಗಿ ಸಾವನ್ನಪ್ಪಿದೆ. ಉಳಿದೆಲ್ಲವೂ ಕಾಡಿನ ಹೊರಗಡೆ ನಡೆದಿರುವ ಪ್ರಕರಣಗಳು. ಕೆಲವು ಪ್ರಕರಣಗಳಲ್ಲಿ ಹುಲಿಗೆ ಸಾಕಷ್ಟು ವಯಸ್ಸಾಗಿರುವುದು, ಇತರ ಪ್ರಾಣಿಗಳೊಂದಿಗೆ ಕಾದಾಡಿ ಗಾಯಗೊಂಡಿ­ರುವುದು ಸಾವಿಗೆ ಕಾರಣವಾಗಿದೆ. ಅರವಳಿಕೆ ನೀಡಿದ ಪ್ರಕರಣದಲ್ಲಿ ಸಾವನ್ನಪ್ಪಿದ ಹುಲಿಗೂ ಸಾಕಷ್ಟು ವಯಸ್ಸಾಗಿತ್ತು. ಹುಲಿ ರಕ್ಷಣೆಗೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ನಾಗರಹೊಳೆ ಹುಲಿ ರಕ್ಷಿತಾರಣ್ಯದ ನಿರ್ದೇಶಕ ಮಣಿಕಂಠ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಲಿಗಳ ಸಾವಿನ ನೋಟ...
ಜ.2:  ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿ.ಬಿ.ಕುಪ್ಪೆ ವಲಯದ ಕಾಮಾಲೆ ತೋಡು ಬಳಿ ನೀರಿನಲ್ಲಿ ಹೆಣ್ಣು ಹುಲಿ ಶವಪತ್ತೆ
ಜ.17:  ಅಂತರಸಂತೆ ವಲಯದಲ್ಲಿ ಸೆರೆ ಹಿಡಿಯುವಾಗ ಹುಲಿ ಮೃತಪಟ್ಟಿತ್ತು. ಅತಿಯಾದ ಅರವಳಿಕೆ ಚುಚ್ಚುಮದ್ದು ಕಾರಣ ಎಂಬ ಆರೋಪ ಕೇಳಿಬಂದಿತ್ತು

ಜ.20:  ಕೊಡಗು ಜಿಲ್ಲೆ ಪೊನ್ನಂಪೇಟೆ ಸಮೀಪ ಉರುಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಎರಡು ವರ್ಷದ ಗಂಡು ಹುಲಿ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಸಾವು
ಜ.22:  ಗೋಣಿಕೊಪ್ಪಲು ಸಮೀಪ ಮುಳ್ಳುಹಂದಿ ಮುಳ್ಳುಚುಚ್ಚಿ ಹುಲಿ ಮೃತಪಟ್ಟಿತು
ಜ.29: ವಿರಾಜಪೇಟೆ ತಾಲ್ಲೂಕು ಶ್ರೀಮಂಗಲ ಸಮೀಪದ ಕುಮಟೂರಿನಲ್ಲಿ ಐದು ವರ್ಷದ ಹೆಣ್ಣು ಹುಲಿಯೊಂದು ಸಾವನ್ನಪ್ಪಿದ್ದು, ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.