ADVERTISEMENT

‘ತಂಬಾಕು ಬೆಳೆಗೆ ಪರ್ಯಾಯ ಬೆಳೆ ರೂಪಿಸಿ’

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 10:19 IST
Last Updated 2 ಸೆಪ್ಟೆಂಬರ್ 2014, 10:19 IST

ಮೈಸೂರು: ತಂಬಾಕು ಬೆಳೆಯನ್ನು ಕೆಲವೇ ವರ್ಷಗಳಲ್ಲಿ ನಿಷೇಧಿಸಲಿರುವ ಹಿನ್ನೆಲೆಯಲ್ಲಿ ತಂಬಾಕಿನಷ್ಟೇ ಲಾಭದಾಯಕವಾದ ಪರ್ಯಾಯ ಬೆಳೆ ಯೋಜನೆಯನ್ನು ರೂಪಿಸುವಂತೆ ಸಂಸದ ಪ್ರತಾಪಸಿಂಹ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಕೇಂದ್ರದ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ರೈತರು ಲಾಭದಾಯಕವಾದ ಪರ್ಯಾಯ ಬೆಳೆಯನ್ನು ಕಂಡುಕೊಳ್ಳದೇ ಬೇರೆ ವಿಧಿ ಇಲ್ಲ. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಿ ಕೆಲಸ ಮಾಡಬೇಕಾಗಿದೆ. ಆಗ ಮಾತ್ರ ತಂಬಾಕಿನಷ್ಟೇ ಲಾಭಪ್ರದವಾದ ಪರ್ಯಾಯ ಬೆಳೆ ಯೋಜನೆಯನ್ನು ರೂಪಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪರ್ಯಾಯ ಬೆಳೆ ಯೋಜನೆ ಕುರಿತು ಸದ್ಯದಲ್ಲೇ ವಿವಿಧ ಇಲಾಖೆಗಳ ಜತೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗುವುದು. ಮುಖ್ಯವಾಗಿ ರೈತರಿಗೆ ಈ ಕುರಿತು ಅರಿವು ಮೂಡಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕಾದ ಜರೂರು ಇದೆ ಎಂದು ಕಿವಿಮಾತು ಹೇಳಿದರು.

ಪ್ರತಿ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿ ಇರಲೇಬೇಕು. ಹೆಚ್ಚುವರಿ ಶಾಲಾ ಕಟ್ಟಡಗಳ ಅವಶ್ಯಕತೆ ಇರುವೆಡೆ ಸಂಸದರ ನಿಧಿಯಿಂದ ಅನುದಾನ ಒದಗಿಸಿಕೊಡಲು ಬದ್ಧ. ಶಾಲೆಗಳನ್ನು ಬಿಡುವ ಮಕ್ಕಳ ಸಂಖ್ಯೆ ಯಾವುದೇ ಕಾರಣಕ್ಕೂ ಹೆಚ್ಚಕೂಡದು. ಈ ಸಂಬಂಧದ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು.

ರಾಷ್ಟ್ರೀಯ ತೋಟಗಾರಿಕಾ ಮಿಷನ್, ಸರ್ವಶಿಕ್ಷಾ ಅಭಿಯಾನ, ಗ್ರಾಮೀಣ ಆರೋಗ್ಯ ಅಭಿಯಾನ ಮೊದಲಾದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ರಚನಾತ್ಮಕ ದೃಷ್ಟಿಕೋನವಿರಿಸಿಕೊಂಡು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಈ ಸಭೆಯ ಫಲಶ್ರುತಿ ಮುಂದಿನ ಸಭೆಯಲ್ಲಿ ತಿಳಿಯಲಿದೆ. ಮುಖ್ಯವಾಗಿ ಧೋರಣೆ ಬದಲಾಗಬೇಕು. ಪ್ರತಿ ಮಂಗಳವಾರ ನಡೆಯುವ ಸಂಸದೀಯ ಮಂಡಳಿ ಸಭೆಯಲ್ಲಿ ಗುರಿ ನಿಗದಿಪಡಿಸಲಾಗುತ್ತದೆ. ಇದನ್ನು ತಲುಪಲು ಅಧಿಕಾರಿಗಳ ಸಹಕಾರ ಅಗತ್ಯ. ಇದರಿಂದ ಅಧಿಕಾರಿಗಳಿಗೂ ಒಳ್ಳೆಯ ಹೆಸರು ಬರುತ್ತದೆ ಎಂದು ವಿವರಿಸಿದರು.

ನಗರದ ಒಳಗೆ ಕಿತ್ತುಹೋದ ರಸ್ತೆಗಳು!
ದಸರಾ ಮಹೋತ್ಸವ ಸಮೀಪಿಸುತ್ತಿದೆ. ಮೈಸೂರು ನಗರದ ಒಳಗೆ ಅನೇಕ ರಸ್ತೆಗಳು ಕಿತ್ತು ಹೋಗಿವೆ. ಹುಣಸೂರು ರಸ್ತೆಯಲ್ಲಿ 25 ಗುಂಡಿಯನ್ನು ತೋರಿಸಬಲ್ಲೆ ಎಂದು ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಅವರನ್ನು ಸಂಸದ ಪ್ರತಾಪಸಿಂಹ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್, ‘ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಮಳೆ ಬೀಳುತ್ತಿರುವುದರಿಂದ ಕೊಂಚ ತಡವಾಗಿದೆ’ ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಸಿ. ಶಿಖಾ, ‘ಪ್ರತಿ ವರ್ಷ ಈ ವೇಳೆಯಲ್ಲಿ ಮಳೆ ಬರುತ್ತದೆ ಎಂದು ಗೊತ್ತಿದ್ದರೂ ಕಾಮಗಾರಿಯನ್ನು ಬೇಗನೆ ಏಕೆ ಆರಂಭಿಸುತ್ತಿಲ್ಲ’ ಎಂದು ಖಾರವಾಗಿ ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪಿ.ಎ. ಗೋಪಾಲ್, ಮುಡಾ ಆಯುಕ್ತ ಪಾಲಯ್ಯ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.