ADVERTISEMENT

‘ಶೀಘ್ರ ಪ್ರಿಪೇಯ್ಡ್ ಆಟೊ ನಿಲ್ದಾಣಕ್ಕೆ ವ್ಯವಸ್ಥೆ’

ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 7:36 IST
Last Updated 24 ಅಕ್ಟೋಬರ್ 2014, 7:36 IST
ಮೈಸೂರಿನ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಅವರಿಗೆ ನಗರ ಪೊಲೀಸ್‌ ಆಯುಕ್ತ ಎಂ.ಎ. ಸಲೀಂ ಅವರು ಮುಂಗಡ ಪಾವತಿ ಆಟೊ ನಿಲ್ದಾಣದ ಕುರಿತು ಮಾಹಿತಿ ನೀಡಿದರು. ಮಾಜಿ ಸಂಸದ ಅಡಗೂರು ಎಚ್‌. ವಿಶ್ವನಾಥ್‌, ಎಸಿಐಸಿಐನ ಎಂ. ಲಕ್ಷ್ಮಣ ಇತರರು ಇದ್ದಾರೆ.
ಮೈಸೂರಿನ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಅವರಿಗೆ ನಗರ ಪೊಲೀಸ್‌ ಆಯುಕ್ತ ಎಂ.ಎ. ಸಲೀಂ ಅವರು ಮುಂಗಡ ಪಾವತಿ ಆಟೊ ನಿಲ್ದಾಣದ ಕುರಿತು ಮಾಹಿತಿ ನೀಡಿದರು. ಮಾಜಿ ಸಂಸದ ಅಡಗೂರು ಎಚ್‌. ವಿಶ್ವನಾಥ್‌, ಎಸಿಐಸಿಐನ ಎಂ. ಲಕ್ಷ್ಮಣ ಇತರರು ಇದ್ದಾರೆ.   

ಮೈಸೂರು: ನಗರದ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ ನಿಲ್ದಾಣ ಆವರಣದಲ್ಲಿ ಮುಂಗಡ ಪಾವತಿ ಆಟೊರಿಕ್ಷಾ ನಿಲ್ದಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ತಿಳಿಸಿದರು.

ನಗರದ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಬಸ್‌ ನಿಲ್ದಾಣದ ಮುಂಗಡ ಪಾವತಿ ಆಟೊನಿಲ್ದಾಣದ ಸಮಸ್ಯೆಗಳ ಕುರಿತು ಸಂಬಂಧಪಟ್ಟವರಿಂದ ವಿಸ್ತೃತ ಮಾಹಿತಿ ಪಡೆದಿದ್ದೇನೆ. ಈ ಆಟೊ ನಿಲ್ದಾಣಕ್ಕೆ ಎಲ್ಲಿ ವ್ಯವಸ್ಥೆ ಮಾಡಿದರೆ ಆಟೊ ಚಾಲಕರು, ಪ್ರಯಾಣಿಕರು ಮತ್ತು ಕೆಎಸ್‌ಆರ್‌ಟಿಸಿಯವರಿಗೂ ಅನುಕೂಲ ಇದೆ ಎಂಬುದರ ಕುರಿತು ಸಲಹೆಗಳನ್ನು ಆಲಿಸಿದ್ದೇನೆ. ಅಂತೆಯೇ ಸಂಚಾರ ದಟ್ಟಣೆಗೆ ಅವಕಾಶವಾಗದಂತೆ, ಚರ್ಚ್‌ನವರಿಗೂ ತೊಂದರೆ­ಯಾ­ಗದಂತೆ, ಆಟೊರಿಕ್ಷಾ ಚಾಲಕರಿಗೂ ಅನುಕೂಲ­ವಾಗುವಂತೆ ವ್ಯವಸ್ಥೆ ಮಾಡಲಾಗು­ವುದು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಸಮಾಲೋಚಿಸಿ ಈ ಸಮಸ್ಯೆಗೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ವಿವರಿಸಿದರು.

ಆಟೊ ನಿಲ್ದಾಣಕ್ಕೆ ಎಲ್ಲಿ ಜಾಗ ಕಲ್ಪಿಸಬೇಕು ಎಂಬ ಕುರಿತು ವ್ಯಕ್ತವಾದ ಸಲಹೆಗಳು:
ಮಾಜಿ ಸಂಸದ ಎಚ್‌. ವಿಶ್ವನಾಥ್‌ ಅವರು ಸಚಿವರಿಗೆ ಸಲಹೆ ನೀಡಿ, ಈ ನಿಲ್ದಾಣದ ‘ಮಾಸ್ಟರ್‌ ಪ್ಲಾನ್‌’ನಲ್ಲಿ ಸೆಲ್ಲಾರ್‌ನಲ್ಲಿ ಆಟೊರಿಕ್ಷಾ ನಿಲ್ದಾಣಕ್ಕೆ ಜಾಗ ತೋರಿಸಲಾಗಿತ್ತು. ಈಗ ಸೆಲ್ಲಾರ್‌ನ ಒಂದು ಭಾಗವನ್ನು ದಾಸ್ತಾನು ಮಳಿಗೆಯಂತೆ ಬಳಸಲಾಗುತ್ತಿದೆ. ಇಲ್ಲಿಯೇ ಈ ಆಟೊ ನಿಲ್ದಾಣಕ್ಕೆ ವ್ಯವಸ್ಥೆ ಮಾಡುವುದು ಸೂಕ್ತ ಎಂದು ಹೇಳಿದರು.

ನಗರ ಪೊಲೀಸ್‌ ಕಮಿಷನರ್‌ ಎಂ.ಎ. ಸಲೀಂ ಮಾತನಾಡಿ, ಪ್ರಿ ಪೇಯ್ಡ್‌ ಕೌಂಟರ್‌ ಪಕ್ಕದಲ್ಲಿ ಆಟೊಗಳು ಮೂರು ಸಾಲಿನಲ್ಲಿ ನಿಲ್ಲಲು ಕೆಎಸ್‌ಆರ್‌ಟಿಸಿಯವರು ಜಾಗ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಬಸ್‌ ನಿಲ್ದಾಣದ ಮುಂಭಾಗದಲ್ಲಿ ಉದ್ದಕ್ಕೂ ಒಂದು ಸಾಲಿನಲ್ಲಿ ಆಟೊ ನಿಲ್ದಾಣಕ್ಕೆ ಅವಕಾಶ ಕಲ್ಪಿಸುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಇಂಗಿತ ವ್ಯಕ್ತಪಡಿಸಿದರು.

ಬಸ್‌ ನಿಲ್ದಾಣದ ಆವರಣದ ಕಾಂಪೌಂಡನ್ನು ಸ್ವಲ್ಪ ಒಡೆದು ಒಳಗಿನಿಂದಲೇ ಒಂದು ಕಡೆ ಆಟೊಗಳು ನಿಲ್ಲುವುದಕ್ಕೆ ಜಾಗ ಕಲ್ಪಿಸಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಶಿಖಾ, ಮುಡಾ ಆಯುಕ್ತರಾದ ಪಾಲಯ್ಯ, ಪಾಲಿಕೆ ಆಯುಕ್ತ ಡಾ.ಸಿ.ಜಿ. ಬೆಟಸೂರಮಠ, ಎಸಿಐಸಿಐನ ಎಂ. ಲಕ್ಷ್ಮಣ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.