ADVERTISEMENT

‘ನಾಡು, ನುಡಿ ಪರ ಹೋರಾಡುವವರು ವಿರಳ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 10:13 IST
Last Updated 1 ಜನವರಿ 2018, 10:13 IST

ನಂಜನಗೂಡು: ಕನ್ನಡ ಸಂಘಟನೆಗಳು ನಾಡಿನ ಜಲ, ನೆಲ, ಭಾಷೆ ಪರ ಹೋರಾಟ ರೂಪಿಸುವ ಜತೆಗೆ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಶಾಸಕ ಕಳಲೆ ಎನ್.ಕೇಶವಮೂರ್ತಿ ತಿಳಿಸಿದರು.

ನಗರದ ವಿದ್ಯಾವರ್ಧಕ ಮೈದಾನದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣ ವೇದಿಕೆ ತಾಲ್ಲೂಕು ಘಟಕದ 9ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘಟನೆಗಳು ಬಡ ವಿದ್ಯಾರ್ಥಿಗಳು, ವೃದ್ಧರು, ನೊಂದವರ ನೋವಿಗೆ ಸ್ಪಂದಿಸಿ ಅವರ ನೆರವಿಗೆ ಧಾವಿಸಬೇಕು. ವೇದಿಕೆ ಮುಂದೆ ಹೆಚ್ಚು ಜನಪರ ಕೆಲಸ ಹಮ್ಮಿಕೊಳ್ಳುವಂತಾಗಲಿ ಎಂದು ಆಶಿಸಿದರು.

ADVERTISEMENT

ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ಬೇರೆ ಊರಿನ ಕನ್ನಡಿಗರು ಬೆಂಗಳೂರಿಗೆ ಬಂದರೆ ಅಲ್ಲಿನ ಜನರ ನಡವಳಿಕೆ ಕಂಡು ಗಾಬರಿಯಾಗುವ ಪರಿಸ್ಥಿತಿ ಇದೆ. ಇಲ್ಲಿ ಯಾರು ಕನ್ನಡಿಗರು, ಕನ್ನಡ ಮಾತನಾಡುವವರು ಎಂದು ತಿಳಿಯಲು ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಡು– ನುಡಿ, ನೆಲ– ಜಲ, ಗಡಿ ಪರ ಹೋರಾಟ ಮಾಡಲು ಮುಂದೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವ ಆಚರಿಸಿದರೆ ಸಾಲದು, ಆಡಳಿತ ಭಾಷೆಯಾಗಬೇಕು ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಮಹದೇವಪ್ರಸಾದ್ ಮಾತನಾಡಿದರು. ಅಂಧ ಕಲಾವಿದರು ಜನಪದ ಗೀತೆ ಹಾಡಿದರು. ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ನಗರದ ಕುಸ್ತಿ ಹಾಗೂ ಯೋಗಪಟುಗಳಿಗೆ ಸನ್ಮಾನಿಸಲಾಯಿತು.

ಮುಖಂಡ ರಜತ್ ಗೌಡ, ಬಿಜೆಪಿ ಮುಖಂಡ ಎಸ್.ಮಹದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ದಯಾನಂದಮೂರ್ತಿ, ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಮಾಜಿ ಮೇಯರ್ ದಕ್ಷಿಣಾ ಮೂರ್ತಿ, ಕರವೇ ರಾಜ್ಯ ಘಟಕದ ಉಪಾಧ್ಯಕ್ಷ ಪುನೀತ್, ಎನ್.ಇಂದ್ರ, ಶಿವರಾಜ್ ಗೌಡ, ಮಂಜೇಶ್, ವೀರಶೈವ ಬಳಗದ ಜಗದೀಶ್, ವಿನಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.